ಕರ್ನಾಟಕದಲ್ಲಿ ಕಳೆದ ಎರಡು ವಾರದಿಂದ ಭಾರೀ ಮಳೆಯಾಗ್ತಿದೆ. ನಿರಂತರ ಮಳೆಗೆ ಜನಜೀವನ ಇನ್ನೂ ಸಹಜಸ್ಥಿತಿಗೆ ಮರಳಿಲ್ಲ. ಬೆಂಗಳೂರಿನಲ್ಲಿ ಕೂಡ ಸಂಜೆಯಾಗ್ತಿದ್ದಂತೆ ಭಾರೀ ಮಳೆಯಾಗ್ತಿದ್ದು ಜನ ಹಿಡಿಶಾಪ ಹಾಕ್ತಿದ್ದಾರೆ. ಬೆಂಗಳೂರಿನ ಹಲವು ಏರಿಯಾಗಳು ಇನ್ನೂ ಸಹಜಸ್ಥಿತಿಗೆ ಬಂದಿಲ್ಲ. ಹಲವೆಡೆ ಇನ್ನೂ ನೀರು ನಿಂತಿದೆ. ಓಡಾಡೋಕೆ ಪರದಾಡುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಇನ್ನೂ ಐದು ದಿನ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತಾ ಅಲರ್ಟ್ ಕೊಡಲಾಗಿದೆ.
ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆ ಅಲರ್ಟ್ ನೀಡಿದೆ. ಬೆಂಗಳೂರಿನಲ್ಲಿ ಮತ್ತೆ ವರುಣಾರ್ಭಟದ ಎಚ್ಚರಿಕೆ ಕೊಡಲಾಗಿದೆ.
ಎಲ್ಲೆಲ್ಲಿ ಮಳೆಯ ಎಚ್ಚರಿಕೆ
ರಾಯಚೂರು, ಬಳ್ಳಾರಿ, ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿಗೆ ಮಳೆ ಅಲರ್ಟ್ ಕೊಡಲಾಗಿದೆ.
ಎಲ್ಲೆಲ್ಲಿ ಯೆಲ್ಲೊ ಅಲರ್ಟ್ ಘೋಷಣೆ?
ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾಸನಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಲ್ಕನೇ ದಿನ ಪಶ್ಚಿಮ ಘಟ್ಟದ ಜಿಲ್ಲೆಗಳು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಎಲ್ಲೆಲ್ಲಿ ಆರೆಂಜ್ ಅಲರ್ಟ್?
ನಾಳೆ ದಕ್ಷಿಣ ಒಳನಾಡಿನ ಹಾಸನ ಕೊಡಗು ಭಾಗಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಮೈಸೂರು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ನಿಂತಿಲ್ಲ ವರುಣನ ಆರ್ಭಟ, ಹೆಚ್ಚಾಗ್ತಿದೆ ಜಲಾಶಯಗಳ ಒಳ ಹರಿವು
ಮಳೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ
ಈಶಾನ್ಯ ಹಾಗು ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಲ್ಲಿ 5.8 ಕಿಮೀ ಎತ್ತರದವರೆಗೂ ಮೇಲ್ಮೈ ಸುಳಿಗಾಳಿ ಎದ್ದಿದೆ. ಹೀಗಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆಯಿದೆ.
ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಸೇತುವೆಗಳು ಜಲಾವೃತಗೊಂಡಿದೆ. ಗೆದ್ದಲಮರಿ-ಬಲಶೆಟ್ಟಿಹಾಳ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಊರಿಗೆ ತೆರಳಲು ಶಾಲೆ ವಿದ್ಯಾರ್ಥಿಗಳು ಹಾಗೂ ಜನರು ಸಂಕಷ್ಟ ಅನುಭವಿಸುವಂತಾಗಿತ್ತು.
ಸೇತುವೆ ಜಲಾವೃತ, ವಿದ್ಯಾರ್ಥಿಗಳ ಪರದಾಟ
ಮತ್ತೊಂದೆಡೆ ಪರತುನಾಯಕ ತಾಂಡ-ರಾಜನಕೊಳ್ಳುರು ಸೇತುವೆ ಜಲಾವೃತಗೊಂಡಿದೆ. ಸೇತುವೆ ಸಂಪರ್ಕ ಕಡಿತಗೊಂಡು ವಿದ್ಯಾರ್ಥಿಗಳು ಹಾಗೂ ಜನರ ಸಂಕಷ್ಟ ಅನುಭವಿಸುವಂತಾಯ್ತು. ಸೇತುವೆ ಎತ್ತರವಾಗಿ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆಯಲ್ಲಿ ಹಲವಡೆ ಮಳೆ ಅಬ್ಬರ ಮುಂದುವರಿದಿದೆ. ರೇವೂರು ಬಿ ಗ್ರಾಮದಿಂದ ಸಿದನೂರು ಗ್ರಾಮಕ್ಕೆ ಹೋಗೋ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ತುಂಬಿ ಹರಿಯುತ್ತಿರೋ ಸೇತುವೆ ಮೇಲೆಯೇ ಅನೇಕರು ದುಸ್ಸಾಹಸ ಮಾಡ್ತಿದ್ದಾರೆ. ಹಳ್ಳದಲ್ಲಿ ನಡುದುಕೊಂಡು ಸೇತುವೆ ದಾಟುವ ಯತ್ನ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಗ್ರಾ.ಪಂಚಾಯ್ತಿ ಕಚೇರಿ ಜಲಾವೃತ
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಜಲಾವೃತಗೊಂಡಿದೆ. ಸುಮಾರು 3 ಅಡಿಯಷ್ಟು ನೀರು ಆವರಿಸಿದೆ. ತಕ್ಷಣ ಸಿಬ್ಬಂದಿ ಸೇರಿ ಕಚೇರಿಯಲ್ಲಿನ ವಸ್ತುಗಳನ್ನ ಸ್ಥಳಾಂತರಿಸಿದ್ದಾರೆ.
ಇದನ್ನೂ ಓದಿ: ಮಳೆ ಅಬ್ಬರಕ್ಕೆ ನಲುಗಿದ ಹೆಬ್ಬಗೋಡಿ; ಡ್ಯಾಡಿಸ್ ಬಡಾವಣೆ ನಿವಾಸಿಗಳು ಪರದಾಟ
ಕೊಚ್ಚಿಹೋದ ಇಬ್ಬರು ಪೇದೆಗಳ ಮೃತದೇಹ ಪತ್ತೆ
ಕೊಪ್ಪಳ ಜಿಲ್ಲೆಯಾದ್ಯಂತ ಭಾರೀ ಮಳೆಯಾಗ್ತಿದ್ದು, ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಇಬ್ಬರು ಪೊಲೀಸರ ಶವ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನಿಂಗಪ್ಪ ಮತ್ತು ಇನ್ನೋರ್ವ ಪೇದೆ ಮಹೇಶ್ರ ಮೃತದೇಹ ಪತ್ತೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ