ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನೂತನ ಪ್ರಯೋಗಕ್ಕೆ ಮುಂದಾಗಿದ್ದು, ನಾಲ್ಕು ಹೆಜ್ಜಾರ್ಲೆ(ಪೆಲಿಕಾನ್)ಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಸಿ ಪ್ರಯೋಗಿಕ ಹಂತಕ್ಕೆ ಚಾಲನೆ ನೀಡಿದೆ.
ಹಕ್ಕಿಗಳ ವಲಸೆ ಮತ್ತು ಜೀವನ ಕ್ರಮದ ಅಧ್ಯಯನಕ್ಕಾಗಿ ಅರಣ್ಯ ಇಲಾಖೆ ಎರಡು ಹೆಜ್ಜಾರ್ಲೆಗಳಿಗೆ ಅಕ್ಟೋಬರ್ ಹೊತ್ತಿಗೆ ಸೋಲಾರ್ ಶಕ್ತಿಯ ಜಿಪಿಎಸ್-ಜಿಎಸ್‌ಎಂ ಪೆಟಾಜಿಯಲ್ ಟ್ಯಾಗ್ ಉಪಕರಣಗಳನ್ನು ನಾಲ್ಕು ಮರಿಗಳಿಗೆ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ನಿಗಾವಹಿಸಲಾಗಿದೆ.
ಅರಣ್ಯ ಇಲಾಖೆಯು ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ಸೇರಿ ಈ ಕಾರ್ಯ ಮಾಡಲಾಗುತ್ತಿದ್ದು, ಈಗಾಗಲೇ ಇಲಾಖೆಯ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆಯಲಾಗಿದೆ. ಜರ್ಮನಿಯಿಂದ ಈ ಉಪಕರಣ ತರಿಸುತ್ತಿದ್ದು, 4 ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಇದು ರಾಜ್ಯದಲ್ಲೆ ವಿನೂತನ ಪ್ರಯೋಗ ಎನ್ನಲಾಗಿದೆ.
ಬಿದ್ದ ಮರಿ ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಕೊಕ್ಕರೆ ಬೆಳ್ಳೂರು ಗ್ರಾಮದ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಈ ಹಿಂದೆ ಪ್ರಯೋಗ ಮಾಡಿದ್ದರು. ಕೊಕ್ಕರೆಗಳಿಗೆ ಬಣ್ಣದ ವೈರ್ ಸಹಾಯದಿಂದ ರಿಂಗ್‌ಗಳನ್ನು ಮಾಡಿ ಅವುಗಳನ್ನು ಕೊಕ್ಕರೆಗಳಿಗೆ ಹಾಕಿದ್ದರು ಅವುಗಳ ಮೈಸೂರು ಭಾಗದಲ್ಲಿ ಕಾಣಿಸಿ ಕೊಂಡಿದ್ದವು ಜತೆಗೆ ಕೊಕ್ಕರೆಯ ತವರೂರು ಬೆಳ್ಳೂರಿಗೂ ಸಹ ಸಂತಾನೋತ್ಪತ್ತಿಗೆ ಬರುತಿದ್ದವು ಎನ್ನಲಾಗಿದೆ.
ವಿವಿಧ ಕಡೆಯಿಂದ ಕೊಕ್ಕರೆ ಬೆಳ್ಳೂರಿಗೆ ಆಗಮಿಸುವ ಹೆಜ್ಜಾರ್ಲೆ ಮತ್ತು ಬಣ್ಣದ ಕೊಕ್ಕರೆ (ಪೆಂಟೆಡ್ ಸ್ಟ್ರೋಕ್)ಗಳು ಜನ ಸಮುದಾಯದ ನಡುವೆ ಇರುವ ಮರಗಳಲ್ಲಿ ಗೂಡುಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಪ್ರಕ್ರಿಯೆ ಮುಗಿದ ನಂತರ ಮತ್ತೆಲ್ಲಿಗೋ ತೆರಳುತ್ತವೆ. ಎಲ್ಲಿಂದ ಬರುತ್ತವೆ, ಎಲ್ಲಿಗೆ ಹೋಗುತ್ತವೆ ಎಂಬುದು ಸರಿಯಾಗಿ ತಿಳಿದಿಲ್ಲ. ಜಿಪಿಎಸ್ ಟ್ಯಾಗ್ ಅಳವಡಿಸುವುದರಿಂದ ಸಂತಾನಾಭಿವೃದ್ಧಿ ನಂತರ ಯಾವ ಪ್ರದೇಶಕ್ಕೆ ತೆರಳುತ್ತವೆ, ಅವುಗಳ ವಲಸೆ ಕ್ರಮ ಏನು ಎಂಬುದನ್ನು ತಿಳಿಯಬಹುದು.
ಹೆಜ್ಜಾರ್ಲೆಗಳು ಸ್ಥಳೀಯವಾಗಿ ಮಾತ್ರ ವಲಸೆ ಹೋಗುತ್ತವೆ ಎಂಬ ಅಭಿಪ್ರಾಯಗಳಿದ್ದು, ಸಂಚಾರ ಮಾಡಿದ ಸಮಯ ಮತ್ತು ಎಷ್ಟು ದೂರ ಕ್ರಮಿಸಿವೆ ಎಂಬ ಅಧ್ಯಯನಕ್ಕೂ ಸಹಕಾರಿಯಾಗಲಿದೆ.
ಅರಣ್ಯ ಇಲಾಖೆ ಕೊಕ್ಕರೆ ಬೆಳ್ಳೂರಿನಲ್ಲಿ ಕೆಲ ಹಕ್ಕಿಗಳಿಗೆ ಈಗಾಗಲೇ ನಂಬರ್ ಟ್ಯಾಗ್ ಅಳವಡಿಸಿದೆ. ಗ್ರಾಮಗಳ ನಡುವೆ ಮರಗಳಲ್ಲಿ ಸಂತಾನಾಭಿವೃದ್ಧಿಯಲ್ಲಿ ತೊಡಗುವ ಸಂದರ್ಭದಲ್ಲಿ ಎಷ್ಟೋ ಮರಿಗಳು ಕೆಳಗೆ ಬೀಳುತ್ತವೆ. ಅವುಗಳನ್ನು ರಕ್ಷಣೆ ಮಾಡಿ ಕೃತಕ ಬೃಹತ್ ಬಲೆಯೊಳಗೆ ಮೀನು ಮುಂತಾದ ಆಹಾರ ನೀಡಿ ಮೂರನಾಲ್ಕು ತಿಂಗಳು ಆರೈಕೆ ಮಾಡಿ ನಂತರ ಬಿಡಲಾಗುತ್ತದೆ ಎನ್ನಲಾಗಿದೆ.
ಅವುಗಳಲ್ಲಿ ಕೆಲವು ಮರಿಗಳ ರೆಕ್ಕೆಗಳಿಗೆ ಪೆಟಾಜಿಯಲ್ ನಂಬರ್ ಟ್ಯಾಗ್ ತೊಡಿಸಿ ಬಿಟ್ಟು ಅಧ್ಯಯನ ಮಾಡಲಾಗುತ್ತಿದೆ. ಆದರೆ ಇದರಿಂದ ಜಿಪಿಎಸ್ ಟ್ಯಾಗ್ ನಂತೆ ಎಲ್ಲೆಲ್ಲಿ ಹೋಗಿವೆ ಎಂಬುದನ್ನೆಲ್ಲ ತಿಳಿಯಲು ಸಾಧ್ಯವಿಲ್ಲ. ಆದರೆ ಮತ್ತೊಂದು ಕಡೆ ಕಾಣಸಿಕೊಂಡು ಮತ್ತೊಬ್ಬರು ಗುರುತಿಸಿ ಮಾಹಿತಿ ವಿನಿಮಯ ಮಾಡಿಕೊಂಡಾಗ ಮಾತ್ರ ಎಲ್ಲೆಲ್ಲಿ ಸಂಚಾರ ಮಾಡಿವೆ ಎಂಬುದನ್ನು ಅಂದಾಜಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ಅಧಿಕಾರಿಗಳು.
ಇದನ್ನೂ ಓದಿ: ಕೋವಿಡ್‌ನಿಂದ ಇಡೀ ವಿಶ್ವವೇ ಶಿಕ್ಷಣ ಬಿಕ್ಕಟ್ಟನ್ನು ಎದುರಿಸಲಿದೆ: ತಜ್ಞರ ಎಚ್ಚರಿಕೆ..!
2021ರ ಮಾರ್ಚ್ನಲ್ಲಿ ನಾಲ್ಕು ಹೆಜ್ಜಾರ್ಲೆ ಮರಿಗಳಿಗೆ ಕೆ01, ಕೆ02, ಕೆ03 ಮತ್ತು ಕೆ04 ಎಂಬ ಸಂಖ್ಯೆ ಇರುವ ಟ್ಯಾಗ್‌ಗಳನ್ನು ರೆಕ್ಕೆಗಳಿಗೆ ಅಳವಡಿಸಿ ಬಿಡುಗಡೆಗೊಳಿಸಲಾಗಿದೆ. 2021ರ ಏಪ್ರಿಲ್‌ನಲ್ಲಿ ಕೆಲವು ಬಣ್ಣದ ಕೊಕ್ಕರೆಗಳಿಗೆ ಎಪಿಯು/ಕೆ-5551, ಎಪಿಎಸ್/ಕೆ-5552, ಎವೈಎನ್/ಕೆ-5554, ಎವೈಎಕ್ಸ್/ಕೆ-5555, ಎವೈವೈ/ಕೆ-5556, ಎಪಿಟಿ/ಕೆ-5557, ಎಪಿವಿ/ಕೆ-5558, ಎಪಿಆರ್/ಕೆ-5559, ಎಪಿಎಕ್ಸ್/ಕೆ-5560 ನಂಬರಿನ ಟ್ಯಾಗ್ ಅಳವಡಿಸಲಾಗಿದೆ.
ಇನ್ನು ಆರೈಕೆ ಮಾಡಿದ ಮರಿಗಳನ್ನು ಬಿಡುವ ಮೊದಲು ಕಾಲುಗಳಿಗೆ ಬಣ್ಣದ ವಯರ್ ಮಾದರಿಯನ್ನು ಟ್ಯಾಗ್ ರೀತಿಯಲ್ಲಿ ಕಟ್ಟಿ ಬಿಡುತಿದ್ದೆ ನಂತರದಲ್ಲಿ ಆ ಪಕ್ಷಿಗಳು ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿದ್ದವು ಪಕ್ಷಿಗಳಿಗೆ ಜಿಪಿಎಸ್ ಮಾಧರಿಯ ಟ್ಯಾಗ್ ಹಾಕುವುದರಿಂದ ಅವುಗಳ ಚಲನ ವಲನ ತಿಳಿಯಲಿದೆ ಅಂತ ಹೆಜ್ಜಾರ್ಲೆ ಬಳಗ ಅಧ್ಯಕ್ಷ ಲಿಂಗೇಗೌಡ ತಿಳಿಸಿದ್ದಾರೆ.
ವರದಿ - ಸುನೀಲ್ ಗೌಡ, ಮಂಡ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ