ಬೆಂಗಳೂರು (ಫೆ.13): ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದ ಅಪಘಾತಕ್ಕೂ-ಬಿಜೆಪಿಯ ಪ್ರಭಾವಿ ಸಚಿವರ ಮಗನಿಗೂ ಸಂಬಂಧವಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿದ್ದು, ಕಾರಿಗೂ ನಮಗೂ ಸಂಬಂಧವಿಲ್ಲ. ಸಂಬಂಧವೇ ಇಲ್ಲ ಎಂದಮೇಲೆ ಸ್ಪಷ್ಟನೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಆರ್ ಅಶೋಕ್ ಮಾತನಾಡಿದ್ದಾರೆ. “ ಕಾರು ಅಪಘಾತಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದೆ. ಆದರೆ ಇದು ಸುಳ್ಳು. ಅಪಘಾತಕ್ಕೆ ಸಂಬಂಧಿಸಿ ಈಗಾಗಲೇ ಎಫ್ಐಆರ್ ಬುಕ್ ಆಗಿದೆ. ಕಾರಲ್ಲಿ ಇದ್ದವರಿಗೆ ಗಾಯವಾಗಿದೆ. ಅಪಘಾತದ ಬಗ್ಗೆ ನನಗೆ ವಿಷಾದವಿದೆ,” ಎಂದರು.
ಆರ್
ಅಶೋಕ್ ಪ್ರಭಾವ ಉಪಯೋಗಿಸಿ ತನಿಖೆ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಉತ್ತರಿಸಿರುವ ಅವರು, “ಮಂತ್ರಿ ಸ್ಥಾನವೇ ಬೇರೆ, ಕಾನೂನೇ ಬೇರೆ. ಕೇಸ್ ತನಿಖೆ ಹಂತದಲ್ಲಿದೆ. ಮಂತ್ರಿಯಾಗಿ ನಾನು ಪ್ರತಿಕ್ರಿಯಿಸಬಾರದು. ತಪ್ಪಿತಸ್ಥರಿಗೆ ಕಾನೂನು ಪಾಠ ಕಲಿಸುತ್ತೆ. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ತನಿಖೆ ನಡೆದು ಸತ್ಯ ಹೊರ ಬರಲಿ. ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದರು.
ಇದನ್ನೂ ಓದಿ: ಹೊಸಪೇಟೆ ಕಾರು ಅಪಘಾತವಾದ ಕಾರನ್ನು ಡ್ರೈವ್ ಮಾಡಿದ್ದು ರಾಹುಲ್ ಎಂಬ ವ್ಯಕ್ತಿ: ಬಳ್ಳಾರಿ ಎಸ್ಪಿ
ಕಾರಿಗೂ ಅಶೋಕ್ ಮಗನಿಗೂ ಸಂಬಂಧ ಕಲ್ಪಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅಶೋಕ್, “ಕಾರು
ನೋಂದಣಿ ಆಗಿರುವ ಸಂಸ್ಥೆಗೂ ನಮಗೂ ಸಂಬಂಧ ಇಲ್ಲ,” ಎಂದರು. ಆದರೆ, ಅಪಘಾತದ ವೇಳೆ ಮಗ ಎಲ್ಲಿದ್ದ ಎನ್ನುವ ಬಗ್ಗೆ ಉತ್ತರಿಸಲು ಅಶೋಕ್ ನಿರಾಕರಿಸಿದ್ದಾರೆ.
ಮಿನಿಸ್ಟರ್ ಮಗ ಕಾರಲ್ಲಿ ಇರಲಿಲ್ಲ:
ಸಚಿವರ ಮಗ ಕಾರಿನಲ್ಲಿ ಇರಲಿಲ್ಲ ಎಂದು ಬಳ್ಳಾರಿ ಎಸ್ಪಿ ಸ್ಪಷ್ಟಪಡಿಸಿದ್ದಾರೆ. “ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿ ರಾಹುಲ್, ರಾಕೇಶ್, ಶಿವಕುಮಾರ್, ವರುಣ್ ಸಚಿನ್ ಇದ್ದರು. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸಚಿನ್ ಮೃತಪಟ್ಟಿದ್ದ. ಕಾರ್ ಚಾಲನೆ ಮಾಡುತ್ತಿದುದು
ರಾಹುಲ್. ಸಚಿವರ ಮಗ ಕಾರಿನಲ್ಲಿ ಇರಲಿಲ್ಲ, ಎಂದರು.
ಕಾಂಗ್ರೆಸ್ ಆಕ್ರೋಶ:
ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ನಲಪಾಡ್ನ ಹಿಟ್ ಅಂಡ್ ರನ್ ಕೇಸ್ನಲ್ಲಿ ವಿಚಾರದಲ್ಲಿ ದಕ್ಷತೆಯಿಂದ ನಡೆದುಕೊಂಡ ಪೊಲೀಸರು ಆರ್ ಅಶೋಕ್ ಮಗನ ವಿಚಾರದಲ್ಲಿ ಅನ್ಯಾಯ ಮಾಡಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬಳ್ಳಾರಿ ಅಪಘಾತ ಪ್ರಕರಣವನ್ನು ತಿರುಚಲಾಗಿದೆ ಎಂಬುದು ಕಾಂಗ್ರೆಸ್ ವಾದ. ಈ ವಿಚಾರವಾಗಿ ವಕೀಲರು ಹಗೂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ನ ಕಾರ್ಯ ದರ್ಶಿ ವೆಂಕಟೇಶ್ ಹೆಗಡೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಮೊದಲು ಬೆಂಗಳೂರಿನಿಂದ ಹಂಪಿಗೆ ಪ್ರವಾಸಕ್ಕೆಂದು ತೆರಳಿದ್ದ ಸಚಿನ್, ರಾಹುಲ್ ಸೇರಿದಂತೆ ಐವರು ಗೆಳೆಯರು ಕುಡಿದ ಮತ್ತಿನಲ್ಲಿ ಅತೀವೇಗದಲ್ಲಿ ಕಾರು ಚಲಾಯಿಸಿದ ಕಾರಣಕ್ಕೆ ರಸ್ತೆ ಬದಿ ನಿಂತಿದ್ದ ರವಿನಾಯ್ಕ್ ಎಂಬುವವರಿಗೆ ಗುದ್ದಿ, ಕಾರು ಮಗುಚಿಕೊಂಡಿತ್ತು. ಸ್ಥಳದಲ್ಲಿಯೇ ರವಿನಾಯ್ಕ್ ಸೇರಿದಂತೆ ಕಾರಿನಲ್ಲಿದ್ದ ಸಚಿನ್ ಎಂಬುವವರು ಮೃತಪಟ್ಟಿದ್ದರು.
ಆದರೆ ಘಟನೆ ನಡೆದು ಮೂರು ದಿನಗಳು ಕಳೆದರೂ ಇದರಲ್ಲಿ ಸಚಿವ ಆರ್ ಅಶೋಕ್ ಮತ್ತು ಆತನ ಪುತ್ರನ ಹೆಸರು ಬಹಿರಂಗಗೊಳ್ಳದಂತೆ ಪೊಲೀಸರು ಕೆಲಸ ಮಾಡಿದ್ದಾರೆ. ಬೆಂಜ್ ಕಾರು ಅಪಘಾತದಲ್ಲಿದ್ದರೆ ಪೊಲೀಸರು ಆಡಿ ಕಾರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿ ಕೇಸನ್ನು ತಿರುಚಲು ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಿನಲ್ಲಿ ಪ್ರಭಾವಿ ಸಚಿವನ ಮಗನನ್ನು ಕಾಪಾಡಲು ಪೊಲೀಸರು ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ