ಸಿಲಿಕಾನ್ ಸಿಟಿಯೊಳಗೆ 10 ಅಡಿ ಎತ್ತರದ ದೈತ್ಯ ಬಿಳಿ ನೊರೆ..! ದೇಶಾದ್ಯಂತ ಟ್ರೆಂಡಿಂಗ್ ಆಯ್ತು ಬೆಳ್ಳಂದೂರು ಕೆರೆ..!

ಮೈಕ್ರೋಥಿಕ್ಸ್ ಮತ್ತು ನೊಸ್ಟೊಕೋಡಿಯಾ ಎಂಬ ಬ್ಯಾಕ್ಟೀರಿಯಾಗಳು ಸೃಷ್ಟಿಸುವ ಅವಾಂತರವಿದು. ರಾಸಾಯನಿಕದ ಜೊತೆಗೆ ಪಾಯಿಖಾನೆಯ ಗಲೀಜು ಮತ್ತಿತರ ತ್ಯಾಜ್ಯಗಳು ಸೇರಿ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಮೈಕ್ರೋಥಿಕ್ಸ್ ಬ್ಯಾಕ್ಟೀರಿಯಾಗಳು ವಿಪುಲವಾಗಿ ಬೆಳೆಯುತ್ತಿವೆ. ಇದರಿಂದಾಗಿ ವಿಪರೀತ ನೊರೆ ಸೃಷ್ಟಿಯಾಗುತ್ತಿದೆ.


Updated:September 25, 2018, 7:18 PM IST
ಸಿಲಿಕಾನ್ ಸಿಟಿಯೊಳಗೆ 10 ಅಡಿ ಎತ್ತರದ ದೈತ್ಯ ಬಿಳಿ ನೊರೆ..! ದೇಶಾದ್ಯಂತ ಟ್ರೆಂಡಿಂಗ್ ಆಯ್ತು ಬೆಳ್ಳಂದೂರು ಕೆರೆ..!
ಬೆಳ್ಳಂದೂರು ಕೆರೆಯಲ್ಲಿ ಸೃಷ್ಟಿಯಾದ ದೈತ್ಯ ನೊರೆ

Updated: September 25, 2018, 7:18 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 25): ನಗರದಲ್ಲಿ ಆರ್ಭಟಿಸುತ್ತಿರುವ ಧಾರಾಕಾರ ಮಳೆಯ ಜೊತೆಗೆ ಹೊರವಲಯದ ಬೆಳ್ಳಂದೂರು, ಯಮಲೂರು, ಬೈರಮಂಗಲ ಮತ್ತು ವರ್ತೂರು ಕೆರೆಗಳು ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆದಿವೆ. ವಿಪರ್ಯಾಸವೆಂದರೆ ಇವೆರಡು ಕೆರೆಗಳು ಒಂದು ರೀತಿಯಲ್ಲಿ ಟೂರಿಸ್ಟ್ ಸ್ಪಾಟ್​ಗಳಂತಾಗಿ ಇಡೀ ಬೆಂಗಳೂರನ್ನೇ ಅಣಕ ಮಾಡುತ್ತಿವೆ. ಈ ಕೆರೆಗಳ ಆಸುಪಾಸಿನ ಹಲವು ರಸ್ತೆಗಳ ತುಂಬೆಲ್ಲಾ ಬಿಳಿ ನೊರೆಯೇ ನಿಂತಿರುತ್ತದೆ. ಮಳೆಗಾಲದಲ್ಲಿ ಥೇಟ್ ಹಿಮ ಹಾಸಿನ ಹಾಗೆ ಇದು ಕಾಣುತ್ತದೆ. ಬೇಸಿಗೆ ಬಂತೆಂದರೆ ಈ ಕೆರೆಗಳಲ್ಲಿ ಬೆಂಕಿಯ ಅಲೆ ಏಳುತ್ತದೆ. ಆದರೆ ಇದೇನೂ ಮೋಜಿನ ಸಂಗತಿಯಲ್ಲ. ಪರಿಸರಕ್ಕೆ ನಾವು ಮಾಡುತ್ತಿರುವ ಅನ್ಯಾಯವನ್ನು ಈ ಕೆರೆ ಪ್ರತೀ ವರ್ಷ ಎತ್ತಿತೋರಿಸುತ್ತಲೇ ಇರುತ್ತದೆ. ಕೋರ್ಟ್ ಎಷ್ಟೇ ಚಾಟಿ ಬೀಸಿದರೂ ದಪ್ಪಚರ್ಮದ ಆಡಳಿತಕ್ಕೆ ಯಾವುದೇ ಬಿಸಿ ತಾಕುತ್ತಿಲ್ಲ. 60 ಕೋಟಿ ವೆಚ್ಚದಲ್ಲಿ ಬಿಡಿಎ ಈ ಕೆರೆಯನ್ನು ಪುನಶ್ಚೇತನಗೊಳಿಸಿದರೂ ನೊರೆ ಉಕ್ಕುವುದು ಮಾತ್ರ ನಿಂತಿಲ್ಲ. ನಿನ್ನೆ ಮೊನ್ನೆ ಎರಡು ದಿನ ಧಾರಾಕಾರ ಮಳೆ ಸುರಿದ ಬೆನ್ನಲ್ಲೇ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ 10 ಅಡಿ ಎತ್ತರದ ದೈತ್ಯಾಕಾರದ ನೊರೆಗಳು ಉಕ್ಕಿವೆ. ಆದರೆ, ಇವು ಸಾಮಾನ್ಯ ನೊರೆಯಲ್ಲ. ವಿಷಕಾರಿ ನೊರೆ. ಗಬ್ಬು ವಾಸನೆಯಿಂದ ಇಡೀ ಪ್ರದೇಶವನ್ನೇ ಕಲುಷಿತಗೊಳಿಸುತ್ತದೆ. ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೇ ಇರಬೇಕಾಗುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಬೇಗ ಜಾಗ ಖಾಲಿ ಮಾಡುವ ಧಾವಂತದಲ್ಲಿರುತ್ತಾರೆ. ಕೆರೆಯ ಕಲುಷಿತ ನೀರಿನಿಂದಾಗಿ ಇಲ್ಲಿಯ ಪ್ರದೇಶದ ಅಂತರ್ಜಲವೇ ಕಲುಷಿತಗೊಂಡಿದೆ. ಅನೇಕ ನಿವಾಸಿಗಳಲ್ಲಿ ಚರ್ಮದ ಸಮಸ್ಯೆ ಕಾಡುತ್ತಿದೆ.ಏನಿದು ಸಮಸ್ಯೆ?
ಕಳೆದ 25 ವರ್ಷಗಳಿಂದಲೂ ಬೆಳ್ಳಂದೂರು ಕೆರೆ ಕಲುಷಿತಗೊಳ್ಳುತ್ತಲೇ ಇದೆ. ಆದರೆ, ಕೆರೆಯ ಮಾಲಿನ್ಯಕ್ಕೆ ನಿಖರ ಕಾರಣ ಮಾತ್ರ ಸಿಕ್ಕಿಲ್ಲ. ಸುತ್ತಮುತ್ತಲ ಫ್ಯಾಕ್ಟರಿಗಳಿಂದ ಹರಿದುಬಂದ ರಾಸಾಯನಿಕಗಳು ಈ ಕೆರೆಗಳ ಮಾಲಿನ್ಯಕ್ಕೆ ಕಾರಣವೆಂದು ನಂಬಲಾಗಿತ್ತು. ಆದರೆ, ರಾಸಾಯನಿಕಗಳ ಜೊತೆಗೆ ವಸತಿ ಪ್ರದೇಶದ ಚರಂಡಿ ನೀರೂ ಮಾಲಿನ್ಯಕ್ಕೆ ಕಾರಣವಾಗಿದೆ. ಹಿರಿಯ ವಿಜ್ಞಾನಿ ಡಾ. ರಾಜಾ ವಿಜಯ್​ಕುಮಾರ್ ಅವರು ಈ ಬಗ್ಗೆ ಕಳೆದ ವರ್ಷ ಅಧ್ಯಯನ ಮಾಡಿ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದರು. ಬೆಳ್ಳಂದೂರು ಕೆರೆಯಲ್ಲಿ ನೊರೆ ಸೃಷ್ಟಿಗೆ ಮೈಕೋಲಿಕ್ ಆ್ಯಸಿಡ್ ಕಾರಣ ಎಂದು ಅವರು ತಿಳಿಸಿದ್ದಾರೆ. ಮೈಕ್ರೋಥಿಕ್ಸ್ ಮತ್ತು ನೊಸ್ಟೊಕೋಡಿಯಾ ಎಂಬ ಬ್ಯಾಕ್ಟೀರಿಯಾಗಳು ಸೃಷ್ಟಿಸುವ ಅವಾಂತರವಿದು. ರಾಸಾಯನಿಕದ ಜೊತೆಗೆ ಪಾಯಿಖಾನೆಯ ಗಲೀಜು ಮತ್ತಿತರ ತ್ಯಾಜ್ಯಗಳು ಸೇರಿ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಮೈಕ್ರೋಥಿಕ್ಸ್ ಬ್ಯಾಕ್ಟೀರಿಯಾಗಳು ವಿಪುಲವಾಗಿ ಬೆಳೆಯುತ್ತಿವೆ. ಇದರಿಂದಾಗಿ ವಿಪರೀತ ನೊರೆ ಸೃಷ್ಟಿಯಾಗುತ್ತಿದೆ ಎಂದು ಈ ಹಿರಿಯ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.ಬೆಳ್ಳಂದೂರು ಕೆರೆ ಮಾಲಿನ್ಯದ ಬಗ್ಗೆ ಬೆಂಗಳೂರಿನ ಜನರು ಮತ್ತು ಸಂಘಟನೆಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಕೊನೆಗೆ ಹಸಿರು ನ್ಯಾಯಾಧಿಕರಣವು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ಇತ್ಯರ್ಥಗೊಳಿಸಲು ಆದೇಶಿಸಿತು. ಬೆಳ್ಳಂದೂರು ಕೆರೆ ಬಳಿ ಕಲುಷಿತ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಆ ನೀರನ್ನು ಕೆಸಿ ವ್ಯಾಲಿ ಯೋಜನೆಗೆ ಹಾಕಲಾಯಿತು. ಆದರೆ, ಆ ನೀರು ಮಾಲಿನ್ಯಮುಕ್ತವಾಗಿಲ್ಲ ಎಂಬ ಆರೋಪ ಕೇಳಿಬಂದು ಆ ಯೋಜನೆಯೇ ಸ್ಥಗಿತಗೊಂಡಿದೆ.
Loading...

ಅದೇ ರೀತಿ ಅಗರ ಮತ್ತು ಇಬ್ಬಲೂರು ಕೆರೆಗಳ ಸ್ವಚ್ಛತಾ ಕಾರ್ಯದ ವೇಳೆ ಆ ಕೆರೆಗಳಿಗೆ ಹರಿದುಬರುತ್ತಿದ್ದ ಚರಂಡಿ ನೀರನ್ನು ಬೆಳ್ಳಂದೂರಿಗೆ ವರ್ಗಾಯಿಸಲಾಯಿತು. ಮೊದಲೇ ವಿಪರೀತ ಕಲುಷಿತಗೊಂಡ ಬೆಳ್ಳಂದೂರು ಕೆರೆ ಇನ್ನಷ್ಟು ಮಲಿನಗೊಂಡಿದೆ. ಅಗರ ಮತ್ತು ಇಬ್ಬಲೂರು ಕೆರೆಗಳಿಗೆ ಹರಿದುಹೋಗುತ್ತಿದ್ದ ಮೋರಿ ನೀರನ್ನು ಶುದ್ಧೀಕರಿಸುವುದರ ಬದಲು ಬೆಳ್ಳಂದೂರಿನತ್ತ ಹರಿಯಲು ಬಿಟ್ಟ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕೆಂದು ಕೋಟಿಗಟ್ಟಲೆ ಹಣವನ್ನು ನೀರಿನಂತೆ ಚೆಲ್ಲಲಾಗಿದ್ದರೂ ಏನೂ ಉಪಯೋಗವಾಗಿಲ್ಲ. ನೊರೆಯನ್ನು ತಗ್ಗಿಸಲು ಒಂದಷ್ಟು ಸ್ಪ್ರಿಂಕ್ಲರ್​ಗಳನ್ನ ಅಳವಡಿಸಲಾಗಿರುವುದು ಬಿಟ್ಟರೆ ಮತ್ತೇನೂ ಕೆಲಸವಾಗಿಲ್ಲವೆನ್ನಲಾಗಿದೆ. ನೀರು ಶುದ್ಧೀಕರಿಸುವ ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆಯಾದರೂ ಈ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಅಕ್ಟೋಬರ್ ತಿಂಗಳಲ್ಲಿ ಹಸಿರು ನ್ಯಾಯಾಧಿಕರಣದಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ. ಹಿಂದಿನ ಆದೇಶದಂತೆ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಕೋರ್ಟ್ ಪರಿಶೀಲಸಲಿದೆ.

ಅದೇನೇ ಆದರೂ ಬೆಂಗಳೂರು ಕೆರೆಗಳು, ಅದರಲ್ಲೂ ಬೆಳ್ಳಂದೂರು ಕೆರೆ ಇಡೀ ದೇಶದಲ್ಲೇ ಕುಖ್ಯಾತವಾಗಿದೆ. ಹೊರಗಿನವರ ಕಣ್ಣಿಗೆ ಇದು ಪ್ರಕೃತಿಯ ವಿಸ್ಮಯವೇನೋ ಎಂಬಂತೆ ಭಾಸವಾಗುತ್ತದೆ. ಆದರೆ, ವಾಸ್ತವದಲ್ಲಿ ಇದು ಮನುಷ್ಯನ ಪಾಪ ಕರ್ಮಗಳ ಪ್ರತೀಕವಾಗಿದೆ. ಮುಂದಿನ ದಿನಗಳಲ್ಲಿ ಪ್ರಕೃತಿಯೇ ಪ್ರತೀಕಾರ ತೀರಿಸಿಕೊಳ್ಳುವಷ್ಟರಲ್ಲಿ ಬೆಂಗಳೂರಿಗರು ಎಚ್ಚೆತ್ತುಕೊಂಡರೆ ಒಳ್ಳೆಯದು.

ಬೆಳ್ಳಂದೂರು ಕೆರೆಯ ದೈತ್ಯ ನೊರೆಯ ಘೋರ ಚಿತ್ರಗಳು: 
First published:September 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...