ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿರುವ ರಾಜ್ಯ ಸರ್ಕಾರ: ಹೈಕೋರ್ಟ್​ ಛೀಮಾರಿ

news18
Updated:July 12, 2018, 2:55 PM IST
ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿರುವ ರಾಜ್ಯ ಸರ್ಕಾರ: ಹೈಕೋರ್ಟ್​ ಛೀಮಾರಿ
  • Share this:
ಪುಟ್ಟರಾಜು, ನ್ಯೂಸ್​ 18 ಕನ್ನಡ 

ಬೆಂಗಳೂರು (ಜುಲೈ 12): ರಾಸಾಯನಿಕ ನೊರೆಯ ಕಾರಣದಿಂದ ಬೆಂಕಿ ಹೊತ್ತಿಕೊಂಡು, ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲ ವಿಷಪೂರಿತ ನೊರೆಯನ್ನು ಹೊರಹಾಕುತ್ತಿದ್ದ ಬೆಳ್ಳಂದೂರು ಕೆರೆಯ ಸ್ವಚ್ಛತೆಯ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಳ್ಳದಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಛೀಮಾರಿ ಹಾಕಿದೆ.

ಬೆಂಗಳೂರು ನಗರದ ಅತಿದೊಡ್ಡ ಕೆರೆಯಲ್ಲೊಂದಾದ ಬೆಳ್ಳಂದೂರು ಕೆರೆಯಲ್ಲಿ ಕಾರ್ಖಾನೆಗಳ ವಿಷವೆಲ್ಲ ತುಂಬಿಕೊಂಡಿದೆ. ಮಳೆ ನೀರು ತುಂಬಿದರೆ ಕೆರೆಯು ಇನ್ನಷ್ಟು ಉಕ್ಕಿಹರಿಯುತ್ತದೆ. ಬೆಂಗಳೂರಿನಲ್ಲಿ ರಸ್ತೆ ಸರಿಯಿಲ್ಲ, ಕಸ ವಿಲೇವಾರಿ ಆಗುತ್ತಿಲ್ಲ. ಎಲ್ಲ ಕಡೆ ಟ್ರಾಫಿಕ್ ಸಮಸ್ಯೆ ಅತಿಯಾಗುತ್ತಿದೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡಿದ್ದೇವೆ. ಪ್ರಪಂಚದ ಯಾವ ಭಾಗದಲ್ಲಾದರೂ ಉರಿಯುತ್ತಿರುವ ಕೆರೆಯನ್ನು ನೋಡಿದ್ದೀರಾ? ಅಂತಹ ಒಂದು ಅದ್ಭುತಕ್ಕೆ ಬೆಂಗಳೂರು ಸಾಕ್ಷಿಯಾಗಿದೆ ಎಂದು ಸರರವನ್ನು ಟೀಕಿಸಿರುವ ಹೈಕೋರ್ಟ್​, ರಾಜ್ಯ ಸರ್ಕಾರ ಎಲ್ಲ ವಿಚಾರಗಳಲ್ಲಿ ವಿಫಲವಾಗಿದೆ. ಯಾವುದರಲ್ಲಿ ಸರ್ಕಾರ ಸಾಧನೆ ಮಾಡಿದೆ ಹೇಳಿ? ಎಂದು  ತೀವ್ರ ತರಾಟೆ ತೆಗೆದುಕೊಂಡಿದೆ.

ಬೆಳ್ಳಂದೂರು ಕೆರೆ ಸ್ವಚ್ಛತೆ ಬಗ್ಗೆ 2015ರಲ್ಲಿ ರಾಜ್ಯಸಭಾ ಸದಸ್ಯರೇ ಅರ್ಜಿ ಸಲ್ಲಿಸಿದ್ದಾರೆ. ಆದರೂ ಇನ್ನೂ ಬೆಳ್ಳಂದೂರು ಕೆರೆಯ ಸ್ವಚ್ಚತೆ ಮಾಡಿಲ್ಲ. ಬೆಳ್ಳಂದೂರು ಕೆರೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಪಂಚಕ್ಕೆ ಬೆಂಗಳೂರು ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿದೆ. ಆದರೆ, ನಮ್ಮ ಸರ್ಕಾರದ ಬಳಿ ತಜ್ಞರೇ ಇಲ್ಲ ಎಂದು ಹೈಕೋರ್ಟ್ ಆಕ್ಷೇಪಿಸಿದೆ.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಬೆಳ್ಳಂದೂರು ಸ್ವಚ್ಛತೆ ಮಾಡಲು ನಿರ್ದೇಶನ ಕೋರಿ 3 ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಕೆರೆ ಸ್ವಚ್ಛತೆಯ ಜವಾಬ್ದಾರಿ ಇರುವ ಇಲಾಖೆ ಯಾವುದು? ಎಂದು ಪ್ರಶ್ನಿಸಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಯ ಹಾಜರಿಗೆ ನಿರ್ದೇಶನ ನೀಡಿದ್ದು, ಇಂದು ಮಧ್ಯಾಹ್ನದ ನಂತರ ನಡೆಯುವ ವಿಚಾರಣೆಯಲ್ಲಿ ಖುದ್ದು ಹಾಜರಾಗಲು  ಹೈಕೋರ್ಟ್ ಸೂಚನೆ ನೀಡಿದೆ.
First published:July 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ