ವಿಧಾನಸಭೆಯಲ್ಲಿ ಹಾಲಿ ಸಿಎಂ, ಮಾಜಿ ಸಿಎಂ ಮಾತಿನ ಜಟಾಪಟಿಯ ರಂಗು

ಬೆಳಗಾವಿಯ ಚಳಿಗಾಲದ ಅಧಿವೇಶನದ ಎರಡನೇ ದಿನವು ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಮಾತಿನ ಚಕಮಕಿಗೆ ಕಾರಣವಾಯಿತು.

Vijayasarthy SN | news18
Updated:December 11, 2018, 11:02 PM IST
ವಿಧಾನಸಭೆಯಲ್ಲಿ ಹಾಲಿ ಸಿಎಂ, ಮಾಜಿ ಸಿಎಂ ಮಾತಿನ ಜಟಾಪಟಿಯ ರಂಗು
ಕುಮಾರಸ್ವಾಮಿ
  • News18
  • Last Updated: December 11, 2018, 11:02 PM IST
  • Share this:
- ರಮೇಶ್ ಹಿರೇಜಂಬೂರು, 

ಬೆಳಗಾವಿ(ಡಿ. 11): ಸುವರ್ಣಸೌಧದಲ್ಲಿ ನಿನ್ನೆ ಪ್ರಾರಂಭಗೊಂಡ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಮಧ್ಯೆ ಇನ್ನಿಲ್ಲದ ವಾಗ್ಯುದ್ಧಕ್ಕೆ ವೇದಿಕೆ ಸಿಕ್ಕಿತು. ಇಸ್ರೇಲ್ ಮಾದರಿ ಕೃಷಿ, ಸಾಲ ಮನ್ನಾ ಇತ್ಯಾದಿ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ಯಡಿಯೂರಪ್ಪ ಪ್ರಶ್ನಿಸಿದರು. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸರಕಾರಿ ಬಂಗಲೆ ಬೇಡವೆಂದು ಹೇಳಿ ದುಬಾರಿ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಮಾಡಿರುವ ವಾಸ್ತವ್ಯವನ್ನು ಯಡಿಯೂರಪ್ಪ ತೀವ್ರವಾಗಿ ಟೀಕಿಸಿದರು.

ರಾಜ್ಯದ 100ತಾಲೂಕುಗಳನ್ಮು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 20-25 ತಾಲೂಕುಗಳು ಹೆಚ್ಚುವರಿಯಾಗಿ ಬರಕ್ಕೆ ತುತ್ತಾಗಿವೆ. ಇದಕ್ಕೆ ಸರ್ಕಾರ ಕಾರಣವಲ್ಲವಾದರೂ ಈ ಪ್ರಕೃತಿ ವಿಕೋಪ ಎದುರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ನನ್ನ ಅಸಮಾಧಾನ. ಒಂದಿಬ್ಬರು ಸಚಿವರನ್ನು ಹೊರತುಪಡಿಸಿ ಬೇರೆ ಯಾವುದೇ ಸಚಿವರು ಮತ್ತು ಅಧಿಕಾರಿಗಳು ಬರ ಪರಿಹಾರ ಪರಿಶೀಲನೆ ಮಾಡಿಲ್ಲ. ಸರ್ಕಾರ ಕುಡಿಯುವ ನೀರಿಗೆ 50 ಲಕ್ಷ ರೂ.ಕೊಟ್ಟಿದೆ ಎಂದಿದ್ದಾರೆ. ಆದರೆ ಕಳೆದ ಬಾರಿಯ ಬೋರ್ ವೆಲ್ ರಿಪೇರಿ  ಖರ್ಚ 10ಲಕ್ಷ ರೂ.ಗಳನ್ನೇ ಸರ್ಕಾರ ಕೊಟ್ಟಿಲ್ಲ. ಗೋ ಶಾಲೆಗಳನ್ನು ತೆರೆದಿಲ್ಲ, ಮೇವು ಬ್ಯಾಂಕ್ ಇಲ್ಲ. ಸರ್ಕಾರ ಬರ ಪರಿಸ್ಥಿತಿಯ ಬಗ್ಗೆ ಯಾಕಿಂತಹ ನಿರ್ಲಕ್ಷ ತಾಳಿದೆ ಎಂಬುದೇ ನನಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಜೆಡಿಎಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ, ಸ್ತ್ರೀ ಸಂಘಗಳ ಸಾಲ ಮನ್ನಾ ಸೇರಿದಂತೆ ಅನೇಕ ಭರವಸೆಗಳನ್ನ ನೀಡಿತ್ತು. ಆದರೆ, ಸರಕಾರ ಬಂದು 6 ತಿಂಗಳಾಗಿದ್ದು, ಏನು ಮಾಡಿದ್ದೀರಾ? ಯಾವ ಭರವಸೆ ಈಡೇರಿಸಿದ್ದೀರಾ? ಎಂದು ಮುಖ್ಯಮಂತ್ರಿಗಳನ್ನು ಬಿಎಸ್​ವೈ ಪ್ರಶ್ನಿಸಿದರು.

ಸರಕಾರಕ್ಕೆ ಹೊರೆ ಮಾಡುವುದಿಲ್ಲ, ಸರಕಾರಿ ಬಂಗಲೆ ಬಳಸುವುದಿಲ್ಲ ಎಂದು ಹೇಳಿ ನೀವು ತಾಜ್ ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ಉಳಿದಿದ್ದೀರಾ. ವೆಸ್ಟ್ ಎಂಡ್​ನಲ್ಲಿ ಎರಡು ರೂಮಿಗೆ ವಾರ್ಷಿಕ 2 ಕೋಟಿ ರೂ ಖರ್ಚಾಗುತ್ತದೆ. ನಿಮ್ಮೆಲ್ಲಾ ಸಚಿವರಿಗೂ ಅದೇ ಹೋಟೆಲ್​ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟುಬಿಡಿ. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಎಷ್ಟು ದಿನ ವಾಸವಿದ್ರಿ ಹೇಳಿ. ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ಸಿಎಂ ಎಂದು ಹೇಳಿಕೊಳ್ತೀರಿ. ವೆಸ್ಟ್ ಎಂಡ್​ನಲ್ಲಿ ಎಷ್ಟು ಸಾಮಾನ್ಯ ಜನರ ಭೇಟಿ ಮಾಡಿದ್ದೀರಾ ತಿಳಿಸಿ. ಜನಸಾಮಾನ್ಯರು ಆ ಫೈವ್ ಸ್ಟಾರ್ ಹೋಟೆಲ್​ಗೆ ಬರಲು ಸಾಧ್ಯವಾಗುತ್ತಾ? ಈಗ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 16 ಕಿಮೀ ದೂರದ ವಿಟಿಯು ಗೆಸ್ಟ್ ಗೌಸ್​ನಲ್ಲಿ ವಾಸ್ತವ್ಯ ಮಾಡಿದ್ದೀರಾ. ಇಲ್ಲಿಗೆ ಜನಸಾಮಾನ್ಯರು ಇರಲಿ ನಿಮ್ಮ ಶಾಸಕರೇ ನಿಮ್ಮನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಟೀಕಾ ಪ್ರಹಾರ ನಡೆಸಿದರು.

ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಟ್ರಾನ್ಸ್​ಫರ್ ದಂಧೆ ನಡೆಯುತ್ತಿದೆ ಎಂದೂ ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು. ಮುಖ್ಯ ಯೋಜನಾಧಿಕಾರಿ, ಲೋಕೋಪಯೋಗಿ ಇಲಾಖೆಯ ಚೀಫ್ ಎಂಜಿನಿಯರ್, ನೀರಾವರಿ ನಿಗಮ ಎಂಜಿನಿಯರ್ ಹುದ್ದೆಗಳಿಗೆ ತಲಾ 10 ಕೋಟಿ ರೂ., ವಿಭಾಗೀಯ ಎಂಜಿನಿಯರ್ಸ್​​ಗೆ 5 ಕೋಟಿ ರೂ. ಹೀಗೆ ವರ್ಗಾವಣೆ ದಂಧೆಯಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಬಿಎಸ್​ವೈ ಆಪಾದಿಸಿದರು.

ಸಾಲ ಮನ್ನಾ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಯಡಿಯೂರಪ್ಪ, ಸಹಕಾರಿ ಸಂಘದ 9400 ಕೋಟಿ ರೂ ಸಾಲದಲ್ಲಿ ಇಲ್ಲಿಯವರೆಗೆ ಪಾವತಿಯಾಗಿರುವುದು ಎಷ್ಟು ಎಂದು ಸಿಎಂಗೆ ಪ್ರಶ್ನೆ ಹಾಕಿದರು. ಸಾಲ ಮನ್ನಾಗೆ ಕೇವಲ 800 ಕೋಟಿ ಮಾತ್ರ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಕಾಲದ 3,199 ಸಾಲ ಮನ್ನಾ ಹಣ ಇನ್ನೂ ಹಾಗೇ ಬಾಕಿ ಉಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಟೀಕಿಸಿದರು.ಹಾಸನಕ್ಕೆ 4 ಸಾವಿರ ಕೋಟಿ ರೂ ನೀಡಿದ್ದೀರಿ ಎಂದು ಯಡಿಯೂರಪ್ಪ ಟೀಕಿಸುವಾಗ ಹೆಚ್.ಡಿ. ರೇವಣ್ಣ ಮಧ್ಯಪ್ರವೇಶಿಸಿದರು. ಇದು ಸುಳ್ಳು. ದಯಮಾಡಿ ತಪ್ಪು ಮಾಹಿತಿ ನೀಡಬೇಡಿ. ನಿಮ್ಮನ್ನ ಕೂರಿಸಿಕೊಂಡೇ ಸಭೆ ಮಾಡುತ್ತೀನಿ. ಎಲ್ಲಿ ಯಾವಾಗ ಕೊಟ್ಟಿದ್ದೀನಿ ಅಂತ ಹೇಳಿದ್ರೆ ಅದೇ 4 ಸಾವಿರ ಕೋಟಿಯನ್ನ ನಿಮ್ಮ ಕೈಗೆ ಕೊಡುತ್ತೀನಿ ಎಂದು ರೇವಣ್ಣ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಬಸವರಾಜ್ ಬೊಮ್ಮಾಯಿ, ರೇವಣ್ಣನವರು ಯಾವಾಗ ಯಾರ ಕೈಗೆ ಏನೇನು ಕೊಡುತ್ತಾರೋ ಗೊತ್ತಿಲ್ಲ. ಆದ್ರೆ ನಿಂಬೆ ಹಣ್ಣು ಮಾತ್ರ ಕೊಡಬೇಡಿ ಎಂದು ಹಾಸ್ಯಚಟಾಕಿ ಹಾರಿಸಿದರು.

ಇದಾದ ಬಳಿಕ 37 ಸ್ಥಾನ ಪಡೆದು ಕುಮಾರಸ್ವಾಮಿ ಸಿಎಂ ಆದ್ರು ಎಂದು ಯಡಿಯೂರಪ್ಪ ಪ್ರಸ್ತಾಪಿಸುತ್ತಿದ್ದಾಗ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಉತ್ತರ ಪ್ರದೇಶ, ಕೋಲ್ಕತಾ ಮತ್ತಿತರರ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಪಡೆದ ಪಕ್ಷಗಳು ಮುಖ್ಯಮಂತ್ರಿ ಸ್ಥಾನ ಪಡೆದ ಉದಾಹರಣೆಗಳನ್ನು ಯಡಿಯೂರಪ್ಪನವರ ಮುಂದಿಟ್ಟರು. ಹಾಗೆಯೇ, ಹಿಂದೆ ತಾನು 37 ಸ್ಥಾನ ಗೆದ್ದಿದ್ದರೂ ತನಗೆ ಬೆಂಬಲ ಕೊಡೋಕೆ ಬಂದಿದ್ದನ್ನ ಯಡಿಯೂರಪ್ಪ ಮರೆತಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು.
First published: December 11, 2018, 10:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading