ಬೆಳಗಾವಿ: ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ವಿಸ್ತರಣೆ ನಡೆದು, ಹಲವು ಜಿಲ್ಲೆಗಳ 29 ಬಿಜೆಪಿ ಶಾಸಕರು ನೂತನ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರಿಗೆಲ್ಲ ಇನ್ನಷ್ಟೇ ಖಾತೆ ಹಂಚಿಕೆಯಾಬೇಕಿದ್ದು, ಒಂದಷ್ಟು ಮಂದಿ ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಬಾರಿಯ ಸಂಪುಟದಲ್ಲಿ ಇರುವ ಕುತೂಹಲದ ವಿಚಾರ ಏನೆಂದರೆ, ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೇ ಜಿಲ್ಲೆಯ ಪ್ರಭಾವಿ ಜಾರಕಿಹೊಳಿ ಸಹೋದರರಿಗೆ ಈ ಸಲ ಮಂತ್ರಿಗಿರಿ ಭಾಗ್ಯ ಸಿಕ್ಕಿಲ್ಲದೇ ಇರುವುದು ಸೋಜಿಗದ ಸಂಗತಿ.
ಕಳೆದ 17 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಹ ಮೂರು ಜನ ಸಹೋದರರ ಪೈಕಿ ಓರ್ವರಿಗೆ ಮಂತ್ರಿಗಿರಿ ಸಿಗುತ್ತಲೇ ಇತ್ತು. ಆದರೇ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಬ್ಬರಿಗೂ ಸಚಿವ ಸ್ಥಾನ ದೊರೆತಿಲ್ಲ. ಇದರ ಹಿಂದೆ ಹಲವು ಲೆಕ್ಕಚಾರ ಇರುವುದು ಮಾತ್ರ ಇದೀಗ ಗುಟ್ಟಾಗಿ ಉಳಿದಿಲ್ಲ. ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಸದ್ಯ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹಿಂದೆ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಮಹತ್ವ ಪಾತ್ರ ವಹಿಸಿದ್ದರು. ತಿಂಗಳುಗಟ್ಟಲೇ ಮುಂಬೈನ ರೆಸಾರ್ಟ್ ನಲ್ಲಿ ಉಳಿದುಕೊಂಡು ಶಾಸಕರನ್ನು ಒಗ್ಗೂಡಿಸಿ ಸಮ್ಮಿಶ್ರ ಸರ್ಕಾರ ಪತನ ಮಾಡಿಸಿ, ಯಡಿಯೂರಪ್ಪ ಅವರನ್ನು ಮತ್ತೆ ಖುರ್ಚಿ ಮೇಲೆ ಕೂರಿಸಿದ್ದೆಲ್ಲ ಇದೀಗ ಇತಿಹಾಸ.
ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ಹಾಗೂ ಬೆಳಗಾವಿ ಉಸ್ತುವಾರಿಯನ್ನು ರಮೇಶ ಜಾರಕಿಹೊಳಿ ವಹಿಸಿಕೊಂಡಿದ್ದರು. ಜತೆಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹ ಮಹತ್ವದ ಕೆಎಂಎಫ್ ಮಂಡಳಿಯ ಅಧ್ಯಕ್ಷರಾಗಿದ್ದರು. ಸಿಡಿ ಪ್ರಕರಣದಲ್ಲಿ ಸಿಲುಕಿದ್ದ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ಒಲ್ಲದ ಮನಸಿನಿಂದ ರಾಜಿನಾಮೆ ನೀಡಿ ಅಧಿಕಾರ ಕಳೆದುಕೊಂಡರು.
ಈ ಸಂಪುಟದಲ್ಲಿ ರಮೇಶ ಜಾರಕಿಹೊಳಿಗೆ ಸ್ಥಾನ ಸಿಗದಿದ್ದರೂ, ಬಾಲಚಂದ್ರ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಹಾಗೂ ಬೆಳಗಾವಿ ಉಸ್ತುವಾರಿ ಸ್ಥಾನ ಸಿಗಲಿದೆ ಎಂದು ಅಭಿಮಾನಿಗಳು ನಿರೀಕ್ಷೆಯನ್ನು ಹೊಂದಿದ್ದರು. ಆದರೇ ಇಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ ಇದು 17 ವರ್ಷಗಳ ಬಳಿಕ ಹೊಸ ದಾಖಲೆಯಾಗಿದೆ. 2004ರ ಧರ್ಮಸಿಂಗ್ ನೇತೃತ್ವದ ಸರ್ಕಾರದಿಂದ ಇತ್ತೀಚಿನ ಬಿ ಎಸ್ ಯಡಿಯೂರಪ್ಪ ಸರ್ಕಾರದ ವರೆಗೆ ಎಲ್ಲಾ ಸರ್ಕಾರದಲ್ಲಿ ಮೂರು ಜನ ಜಾರಕಿಹೊಳಿ ಸಹೋದರರು ಅಧಿಕಾರ ಅನುಭವಿಸಿದ್ದಾರೆ.
ಬೊಮ್ಮಾಯಿ ಸಂಪುಟ ಸೇರಲು ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಇತ್ತು, ಆದರೇ ರಮೇಶ ಜಾರಕಿಹೊಳಿ ಮಂತ್ರಿ ಆಗಲಿ ಎನ್ನುವ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಸಿಡಿ ಪ್ರಕರಣ ಕ್ಲಿನ್ ಚಿಟ್ ಸಿಕ್ಕ ಬಳಿಕ ರಮೇಶ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದರ ಹಿಂದೆ ಮಹತ್ವದ ಕೆಎಂಎಫ್ ಅಧ್ಯಕ್ಷ ಗಿರಿಯನ್ನು ಉಳಿಸಿಕೊಳ್ಳುವ ತಂತ್ರ ಇದೆ ಎನ್ನಲಾಗಿದೆ.
ಇದನ್ನೂ ಓದಿ: ತ್ರಿಪುರಾ ಚುನಾವಣೆ ಮೇಲೆ ಕಣ್ಣಿಟ್ಟ ಟಿಎಂಸಿ: ಅಭಿಷೇಕ್ ಬ್ಯಾನರ್ಜಿ ಬೆಂಗಾವಲು ಪಡೆ ಮೇಲಿನ ದಾಳಿಕೋರರ ಬಂಧನಕ್ಕೆ ಆಗ್ರಹ
ಸಿಡಿ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇದ್ದು, ಮುಗಿದ ಬಳಿಕವೇ ರಮೇಶ ಜಾರಕಿಹೊಳಿ ಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮುಂದಿನ ಬೆಳವಣಿಗೆಯ ಬಗ್ಗೆ ಜಾರಕಿಹೊಳಿ ಸಹೋದರರು ಕಾದು ನೋಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ