ಬೆಳಗಾವಿ (ಜೂನ್. 18): ಮದುವೆಗಾಗಿ ಹುಡುಗಿ ಹುಡುಕುತ್ತಿದ್ದ ಹುಡುಗನೊಬ್ಬ ಗೆಳೆಯರ ಸಲಹೆ ಮೇರೆ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ವೊಂದರಲ್ಲಿ ಪ್ರೋಫೈಲ್ ಕ್ರಿಯೇಟ್ ಮಾಡಿದ್ದಾರೆ. ಕಳೆದ ಫೆಬ್ರವರಿ ಹುಡುಕಿ ಹುಟುಕಾಟ ನಡೆಸಿದ ಈತನಿಗೆ ಮಾರ್ಚ್ ಮೊದಲ ವಾರದಲ್ಲಿಯೇ ಮಾಯಾ ಎಂಬ ಯುವತಿಯೊಬ್ಬರು ಇದೇ ವೆಬ್ಸೈಟ್ ಮೂಲಕ ಸಂದೇಶ ರವಾನಿಸಿದ್ದಾರೆ. ನನ್ನ ಹೆಸರು ಮಾಯಾ ಅನ್ವೇಕರ್ ಇಂಗ್ಲೆಂಡ್ ನಲ್ಲಿ ಕೆಲಸ ಮಾಡುತ್ತಿದ್ದು ಒಳ್ಳೆಯ ಎಜುಕೇಟೆಡ್ ರಿಚ್ ಫ್ಯಾಮಿಲಿಯಲ್ಲಿ ಬೆಳೆದಿದ್ದೇನೆ. ಸದ್ಯ ಮದುವೆಯಾಗಲು ವರ ಹುಡುಕುತ್ತಿದ್ದು ನಿಮ್ಮ ಪ್ರೊಫೈಲ್ ನೋಡಿ ಇಷ್ಟ ಪಟ್ಟು ಮೆಸೇಜ್ ಮಾಡಿದ್ದೇನೆ. ನನ್ನ ಈ ಮೇಲ್ ಐಡಿಗೆ ನಿಮ್ಮ ವಾಟ್ಸಪ್ ನಂಬರ್ ಕಳುಹಿಸಿ, ನಾನು ನನ್ನ ಪೋಟೋ ವಿವರ ಕಳುಹಿಸುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ.
ಬಳಿಕ ಇಬ್ಬರು ಪರಸ್ಪರ ಭೇಟಿಯಾಗುವ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಬೆಳಗಾವಿಗೆ ಸಮೀಪ ಗೋವಾದಲ್ಲಿ ಭೇಟಿಯಾಗೋಣ ಎಂದು ನಿರ್ಧರಿಸಿದ್ದಾರೆ. ಯುವತಿ ಕೂಡ ವಿಮಾನದ ಸೌಕರ್ಯ ಇಲ್ಲದ ಕಾರಣ ಮುಂಬೈಗೆ ಬಂದು ಅಲ್ಲಿಂದ ಗೋವಾಗೆ ಬರುತ್ತೇನೆ ಅಂತಾ ತಿಳಿಸಿದ್ದಾಳೆ. ಅದರಂತೆ ಮಾರ್ಚ್ 8ರಂದು ಈತನಿಗೆ ಗೋವಾಗೆ ಬರಲು ತಿಳಿಸಿದ್ದಾಳೆ. ಆಕೆಯ ಮಾತು ನಂಬಿ ಈತ ಗೋವಾಗೆ ಹೋಗಿದ್ದಾನೆ. ಈ ವೇಳೆ ಈತನಿಗೆ ಕರೆ ಮಾಡಿ ತಾನೂ ಮುಂಬೈ ಏರ್ಪೋರ್ಟ್ ತಲುಪಿರುವುದಾಗಿ ತಿಳಿಸಿದ್ದಾಳೆ. ಇದಾದ ಕೆಲ ಹೊತ್ತಿನಲ್ಲಿ ಯುವಕನಿಕೆ ಕಸ್ಟಮರ್ ಕೇರ್ ಮಾದರಿಯ ನಂಬರ್ ನಿಂದ ಕರೆ ಬಂದಿದೆ. ತಮಗೆ ಭೇಟಿಯಾಗಬೇಕು ಅಂತಾ ಮಾಯಾ ಅನ್ವೇಕರ್ ಎಂಬುವರು ಬಂದಿದ್ದು, ಅನುಮತಿ ಇಲ್ಲದೇ ವಿದೇಶಿ ಹಣ ಇಟ್ಟುಕೊಂಡು ಬಂದಿದ್ದಾರೆ. ಅದಕ್ಕೆ ಟ್ಯಾಕ್ಸ್ ಕಟ್ಟಬೇಕು ಆ ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಅವರನ್ನ ಬಿಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಕಾರ್ಪೊರೇಟರ್ ಸೋಗಿನಲ್ಲಿ ಫೇಸ್ಬುಕ್ ಸ್ನೇಹಿತೆ ಮೇಲೆ ಅತ್ಯಾಚಾರ ; ಆರೋಪಿ ಬಂಧನ
ಆ ಕರೆಯನ್ನು ನಂಬಿದ ಯುವಕ ಎಷ್ಟು ದುಡ್ಡು ಕಟ್ಟಬೇಕು ಅಂತಾ ಕೇಳಿದ್ದಾನೆ. 85 ಸಾವಿರ ಅಂತಾ ತಿಳಿಸಿದಾಗ ಕೂಡಲೇ ಅವರು ನೀಡಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಅದೇ ನಂಬರ್ ನಿಂದ ಮತ್ತೊಂದು ಕರೆ ಬಂದಿದೆ ಈ ವೇಳೆ ಇನ್ನೂ 32 ಸಾವಿರ ಹಣ ಸೇರಿಸಬೇಕು ಅಂತಾ ಹೇಳಿದ್ದಾರೆ. ಆಗಲೂ ಕೂಡ ಹಿಂದೆ ಮುಂದೆ ವಿಚಾರ ಮಾಡದೇ ಈತ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಒಂದು ಗಂಟೆ ಬಳಿಕ ಮತ್ತೆ ಕರೆ ಬಂದು ಮಾಯಾ ಬಳಿ ಎರಡು ಕೋಟಿ ರೂಪಾಯಿ ಚೆಕ್ ಇದ್ದು ಅದನ್ನ ಕನ್ವರ್ಟ್ ಮಾಡುವುದಕ್ಕೆ ಇನ್ನೂ ಒಂದು ಲಕ್ಷ ತೊಂಬತ್ತು ಸಾವಿರ ಹಣ ಹಾಕಿ ಅಂದಿದ್ದಾರೆ. ಇದರಿಂದ ಸಂಶಯಗೊಂಡ ಯುವಕ ಕೂಡಲೇ ತನ್ನ ಗೆಳೆಯನಿಗೆ ಕರೆ ಮಾಡಿ ವಿಚಾರ ಹೇಳಿದ್ದಾನೆ. ಆತ ಇದೆಲ್ಲವೂ ಸುಳ್ಳು ಎನಿಸುತ್ತಿದೆ. ನೀನು ಬೆಳಗಾವಿಗೆ ಹೊರಟ ಬಿಡು ಎಂದಿದ್ದಾರೆ.
ಬಳಿಕ ಯುವಕ ಕೂಢ ಬಂದ ದಾರಿಗೆ ಸುಂಕ ಇಲ್ಲ ಅಂತ ಬೆಳಗಾವಿಗೆ ವಾಪಾಸ್ ಆಗಿದ್ದಾನೆ. ಈ ಘಟನೆ ನಂತರ ಯುವತಿ ಮೆಸೇಜ್ ಮಾಡುತ್ತಿದ್ದ ನಂಬರ್ ಕರೆ ಮತ್ತು ವಾಟ್ಸಪ್ ಮೆಸೇಜ್ ಕಳುಹಿಸಿದ್ದಾಳೆ. ಆದರೆ, ಆ ಯುವತಿ ಆದಾಗಲೇ ಈತನಿಗೆ ಮೋಸ ಮಾಡಿ ಅವನ ನಂಬರ್ ಬ್ಲಾಕ್ ಮಾಡಿದ್ದಾಳೆ. ಇದಾದ ಬಳಿಕ ಯುವಕ ಬೆಳಗಾವಿಯ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ರೀತಿ ಆನ್ಲೈನ್ ವಂಚಕರಿಂದ ಎಚ್ಚರವಿರಿ ಎಂದು ಡಿಸಿಪಿ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ