ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಜಕೀಯ (Belagavi Politics) ಅಂದ್ರೆನೆ ಬೇರೆ. ಯಾವುದೇ ವಿಚಾರ ಬಂದ್ರು ಅಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರು (Jarkiholi Family Members) ಇದ್ದೆ ಇರ್ತಾರೆ. ಈಗಾಗಲೇ ಜಾರಕಿಹೊಳಿ ಕುಟುಂಬದ ರಮೇಶ್, ಸತೀಶ್, ಹಾಗೂ ಬಾಲಚಂದ್ರ ಜಾರಕಿಹೊಳಿ ಮೂವರು ಸಹೋದರರು ರಾಜಕೀಯ ಕ್ಷೇತ್ರದಲ್ಲಿ ಇದ್ದು, ಜಿಲ್ಲೆ ಹಾಗೂ ರಾಜ್ಯದಲ್ಲಿ ನಾಯಕತ್ವವನ್ನ ಹೊಂದಿದ್ದಾರೆ. ಇನ್ನೋರ್ವ ಸಹೋದರ ಲಖನ ಜಾರಕಿಹೊಳಿಯನ್ನು (Lakhan Jarkiholi) ರಾಜಕೀಯಕ್ಕೆ ತರಲು ಸಾಹುಕಾರ್ ರಮೇಶ್ ಜಾರಕಿಹೊಳಿ (Ramesh Jarkiholi) ಎಲ್ಲಿಲ್ಲದ ಕಸರತ್ತು ನಡೆಸಿದ್ದು, ಪರಿಷತ್ ಮೂಲಕ ರಾಜಕೀಯ ಎಂಟ್ರಿ ಕೊಡಿಸಲು ಬಿಜೆಪಿಯ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ಗಾಗಿ ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಬೆಳಗಾವಿ ಜಿಲ್ಲೆ ಎರಡು ಸ್ಥಾನಗಳನ್ನ ಹೊಂದಿದ್ದರೂ ಬಿಜೆಪಿ ಒಂದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಾಗಿ ಘೋಷಣೆ ಮಾಡಿದ ಹಿನ್ನಲೆ ಸಾಹುಕಾರ್ ಮತ್ತೊಂದು ದಾಳ ಉದುರಿಸಲು ಮುಂದಾಗಿದ್ದಾರೆ.
ಹೌದು, ಚುನಾವಣೆಯಲ್ಲಿ ಹಿನ್ನಲೆ ಆಕ್ಟಿವ್ ಆಗಿರುವ ಸಾಹುಕಾರ ರಮೇಶ್ ಜಾರಕಿಹೊಳಿ. ಜಿಲ್ಲೆಯ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಚುನಾವಣೆ ರಣತಂತ್ರ ರೂಪಿಸುತ್ತಿದ್ದಾರೆ. ಸಾಹುಕಾರ್ ರಮೇಶ್ ಕಾಂಗ್ರೆಸ್ ನಾಯಕ ಮಾಜಿ ಶಾಸಕ ರಾಜು ಕಾಗೆ ಭೇಟಿ ಮಾಡಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇನ್ನು ಲಖನ ಜಾರಕಿಹೊಳಿ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಲಖನ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ಇದೆ ಹಿನ್ನಲೆ ಸಹೋದರ ಲಖನ ಪರವಾಗಿ ರಮೇಶ್ ಜಾರಕಿಹೊಳಿ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಭೇಟಿ ಮಾಡಿ ಸಹೋದರ ಲಖನ ಪರ ರಣತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಾಶಸ್ತ್ಯದ ಮತವನ್ನು ತಮ್ಮನಿಗೆ ಹಾಕಲು ಮನವಿ
ಈಗ ನಡೆಯಲಿರುವ ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಒಂದಕ್ಕಿಂತ ಹೆಚ್ಚು ಮತ ಚಲಾಯಿಸಲು ಅವಕಾಶ ಇರುತ್ತದೆ. ಮೊದಲು ಆದ್ಯತೆಯ ಮತ ಹಾಗೂ ಎರಡನೇ ಆದ್ಯತೆಯ ಮತ ಎಂದು ಮತ ಚಲಾಯಿಸಬಹುದು. ಓರ್ವ ಮತದಾರ ಒಂದು ಮತ ಬಿಜೆಪಿ ಅಭ್ಯರ್ಥಿಗೆ ಒಂದು ಮತ ಕಾಂಗ್ರೆಸ್ ಅಭ್ಯರ್ಥಿಗೆ ಹೀಗೆ ಇಬ್ಬರಿಗೂ ಮತ ಚಲಾಯಿಸಲು ಅವಕಾಶ ಇರುತ್ತದೆ. ಹಾಗಾಗಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಪ್ರಾಶಸ್ತ್ಯದ ಮತವನ್ನು ತಮ್ಮ ಸಹೋದರ ಲಖನ ಪರವಾಗಿ ಚಲಾಯಿಸುಂತೆ ಮನವಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಬಿಜೆಪಿ ಮತದಾದರು ಸಹ ಎರಡನೇ ಪ್ರಾಶಸ್ತ್ಯದ ಮತವನ್ನ ಸಹೋದರನ ಪರವಾಗಿ ಚಲಾಯಿಸುವಂತೆ ಹೇಳುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಟಿಕೆಟ್ ಕೇಳಿಲ್ಲ ಎಂದ ರಮೇಶ್ ಜಾರಕಿಹೊಳಿ
ಇನ್ನು ಇದೆ ವಿಚಾರದಲ್ಲಿ ರಮೇಶ್ ಸಾಹುಕಾರ್ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಹೋದರನ ಲಖನ ವಿಚಾರದಲ್ಲಿ ಮಾತನಾಡಿರುವ ರಮೇಶ್, ಸಹೋದರನಿಗೆ ಬಿಜೆಪಿ ಎರಡನೇ ಅಭ್ಯರ್ಥಿಯಾಗಿ ನಿಲ್ಲಿಸಲು ಪ್ರಯತ್ನ ನಡೆಸಿದ್ದ ಸಾಹುಕಾರ್ ಮಾತು ಬದಲಿಸಿದ್ದಾರೆ. ಎರಡನೇ ಅಭ್ಯರ್ಥಿಯಾಗಿ ಸಹೋದರ ಲಖನ ಜಾರಕಿಹೊಳಿಗೆ ನಾವು ಟಿಕೆಟ್ ಕೇಳಿಲ್ಲಾ. ಜಾರಕಿಹೊಳಿ ಕುಟುಂಬದ ಸದಸ್ಯರು ಸ್ವತಂತ್ರರು. ಅವರದ್ದೇ ಆದ ನಿರ್ಣಯ ತೆಗೆದುಕೊಳ್ಳುತ್ತಾರೆ. ಇನ್ನು ಲಖನ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ವಿಚಾರ ನನಗೆ ಗೊತ್ತಿಲ್ಲ. ಆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೇನೆ. ಲಖನ ಜಾರಕಿಹೋಳಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಆ ಕುರಿತು ಚರ್ಚೆ ಮಾಡುವೆ. ಈಗಲೆ ಆ ವಿಚಾರ ಬೇಡ. ಲಖನ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಪಕ್ಷದ ತೀರ್ಮಾನದಂತೆ ಮುಂದಿನ ಕ್ರಮ ಎಂದಿದ್ದಾರೆ.
ಇದನ್ನು ಓದಿ: ಪಂಚರಾಜ್ಯಗಳ ಚುನಾವಣೆ ಕಾರಣ ಕೇಂದ್ರ 3 Controversial Agri Laws ಗಳನ್ನು ಹಿಂಪಡೆದಿದೆ: DK Shivakumar
ಒಟ್ಟಿನಲ್ಲಿ ಈ ಹಿಂದೆ ಇಂತಹದ್ದೇ ಪ್ರಯೋಗ ನಡೆಸಿದ್ದ ಜಾರಕಿಹೊಳಿ ಹಾಲಿ ಪಕ್ಷೇತರ ಎಂಎಲ್ಸಿ ವಿವೇಕರಾವ್ ಪಾಟೀಲ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೊಮ್ಮೆ ಸಹೋದರನ ವಿಚಾರದಲ್ಲಿ ಇಂತಹದ್ದೇ ಪ್ರಯೋಗ ನಡೆಸಲು ಮುಂದಾಗಿದ್ದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆ ಅನ್ನೋದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ