Belgaumನ‌ಲ್ಲಿ 2 ಕಡೆ BJP ಜನಸ್ವರಾಜ್ ಸಮಾವೇಶ; ದೂರ ಉಳಿದ ಜಾರಕಿಹೊಳಿ ಸಹೋದರರು.. ಮುಂದಿನ ನಿರ್ಧಾರವೇನು?

ಇಂದು ಜಿಲ್ಲೆಯ ಚಿಕ್ಕೋಡಿ, ಬೆಳಗಾವಿಯಲ್ಲಿ ಜನಸ್ವರಾಜ್ ಸಮಾವೇಶ ನಡೆಸಿತು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ‌ ಸೇರಿ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು.ಆದರೆ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಮಾವೇಶದಿಂದ ಅಂತರ ಕಾಯ್ದುಕೊಂಡರು.

ಬಿಜೆಪಿ ಜನಸ್ವರಾಜ್​​ ಸಮಾವೇಶ

ಬಿಜೆಪಿ ಜನಸ್ವರಾಜ್​​ ಸಮಾವೇಶ

  • Share this:
ಬೆಳಗಾವಿ:  ಸ್ಥಳೀಯ ಸಂಸ್ಥೆಯಿಂದ ಪರಿಷತ್​​ನ (Council Election) ಎರಡು ಸ್ಥಾನಗಳಿಗೆ ಡಿಸೆಂಬರ್ ‌10ರಂದು ಚುನಾವಣೆ ನಡೆಯಲಿದೆ. ಚುನಾವಣೆ ಸಿದ್ದತೆ ಆರಂಭಿಸಿರೋ ಬಿಜೆಪಿ (BJP) ಇಂದು ಜಿಲ್ಲೆಯ ಚಿಕ್ಕೋಡಿ, ಬೆಳಗಾವಿಯಲ್ಲಿ (Chikodi, Belgaum) ಜನಸ್ವರಾಜ್ ಸಮಾವೇಶ ನಡೆಸಿತು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ‌ (BS Yediyurappa) ಸೇರಿ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಎಲ್ಲಾ ನಾಯಕರು ಮತಯಾಚನೆ ಮಾಡಿದರು. ಆದರೆ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಮಾವೇಶದಿಂದ ಅಂತರ ಕಾಯ್ದುಕೊಂಡರು. ಇದು ಜಿಲ್ಲೆಯಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಎಲ್ಲರು ಬಂದರೂ ಬ್ರದರ್ಸ್​​ ಬರಲಿಲ್ಲ..!

ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಇಂದು ಬಿಜೆಪಿ ಜನಸ್ವರಾಜ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಲಕ್ಷ್ಮಣ ಸವದಿ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ್, ಅನಿಲ್ ಬೆನಕೆ, ಅಭಯ ಪಾಟೀಲ್, ಮಹಾದೇವಪ್ಪ ಯಾದವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಎಲ್ಲರೂ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಪರಿಷತ್ ಚುನಾವಣೆಯಲ್ಲಿ ಒಂದೇ ಮತವನ್ನು ಹಾಕಿ ಕವಟಗಿಮಠ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ‌ ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಲಖನ್ ಜಾರಕಿಹೊಳಿ ಪರ ಬಿಜೆಪಿಯಲ್ಲಿರುವ ಬ್ರದರ್ಸ್​​? 

ಜಿಲ್ಲೆಯಲ್ಲಿ ಎರಡು ಕಡೆ ಜನಸ್ವರಾಜ್ ಸಮಾವೇಶ ‌ನಡೆದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬರಲಿಲ್ಲ. ಇದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.  ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ರಮೇಶ ಜಾರಕಿಹೊಳಿ ಕಾಂಗ್ರೆಸ್ ಸೋಲಿಸಲು ಎರಡನೇ ಅಭ್ಯರ್ಥಿಗೆ ಮತ ಎಂದು ಹೇಳಿದ್ದರು. ಆದರೆ ಬಿಜೆಪಿಯ ಯಾವೊಬ್ಬ ನಾಯಕರು ಎರಡನೇ ಅಭ್ಯರ್ಥಿ ಬೆಂಬಲಿಸುವ ಬಗ್ಗೆ ಮಾತನಾಡಲಿಲ್ಲ.

ಬಿಎಸ್​ವೈ ಮತ ಬೇಟೆ 

ಜನಸ್ವರಾಜ್ ಸಮಾವೇಶದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಕಾಂಗ್ರೆಸ್ ‌ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಉಸಿರಾಡುತ್ತಿದೆ. ಚುನಾವಣೆ ‌ಮುಗಿದ ಬಳ ರಾಜ್ಯ ಪ್ರವಾಸ ಮಾಡಿ‌ ವಿವಿಧ‌ ಮೋರ್ಚಾ ಬಲ‌ ಪಡಿಸುತ್ತೇವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕಿದೆ. 140 ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಬೇಕಿದೆ. ನಾವು ಮನೆಯಲ್ಲಿ‌ ಕುರುವ ಸ್ಥಿತಿ ಇಲ್ಲ. ಪರಿಷತ್ ನಲ್ಲಿ ಮಹಾಂತೇಶ ಕವಟಗಿಮಠ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ.ನಾಡಿನ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕವಟಗಿಮಠ ‌ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ. ಒಂದನೇ ಪ್ರಾಶಸ್ತ್ಯದ ಮತ ಕೊಡುವುದರ ಮೂಲಕ ಕವಟಗಿಮಠ ಗೆಲ್ಲಿಸಿ. ಎರಡನೇ ಮತದ ಬಗ್ಗೆ ಯಾವುದೇ ಯೋಚನೆ ಮಾಡಬೇಡಿ ಎಂದರು.

ಇದನ್ನೂ ಓದಿ: Belgaum ಪರಿಷತ್ ಫೈಟ್: ಸೋದರನಿಗೆ ಟಿಕೆಟ್ ಗಿಟ್ಟಿಸಿದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಗೆಲುವು ಒಂದೇ ಗುರಿ ಅಂತೆ

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: