ಕನ್ನಡಿಗರ ಆಕ್ರೋಶ ತಣಿಸಲು ಪೊಲೀಸರಿಂದಲೇ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ - ನಾಳೆ ಸುವರ್ಣ ಸೌಧ ಮುತ್ತಿಗೆ

ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸೋ ಮೂಲಕ ಪೊಲೀಸರು ಕನ್ನಡಿಗರ ಕಿಚ್ಚನ್ನು ಆರಿಸಲು ಯತ್ನಿಸಿದ್ದಾರೆ. ಆದರೆ ನಿಷೇಧಾಜ್ಞೆ ಧಿಕ್ಕರಿಸಿ ಸುವರ್ಣಸೌಧ ಮುತ್ತಿಗೆ ಹಾಕೋದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಬೆಳಗಾವಿ ಪೊಲೀಸರು

ಬೆಳಗಾವಿ ಪೊಲೀಸರು

  • Share this:
ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಮೂರ್ತಿ (Sangolli Rayanna Statue) ಭಗ್ನದ ಕಿಚ್ಚು ಬೆಳಗಾವಿಯಲ್ಲಿ ಇನ್ನೂ ಆರಿಲ್ಲ. ಬೆಳಗಾವಿಯ ಪೀರನವಾಡಿಯಿಂದ ಅನುಗೋಳಕ್ಕೆ ಹೊರಟ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸೋ ನಿಟ್ಟಿನಲ್ಲಿ ಅನುಗೊಳದಲ್ಲಿ ಪೊಲೀಸರೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ನಿಷೇಧಾಜ್ಞೆ ನಡುವೆಯೇ ಕನ್ನಡಪರ ಸಂಘಟನೆಗಳು ನಾಳೆ ಬೆಳಗಾವಿ ಚಲೋ (Belagavi Chalo) ಹೋರಾಟ ಹಮ್ಮಿಕೊಂಡಿದ್ದಾರೆ. ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದ್ದು, ನಾಳೆ ಸದನದ ಒಳಗೂ ಪ್ರತಿಧ್ವನಿಸೋ ಸಾಧ್ಯತೆಗಳಿವೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಕನ್ನಡಪರ ಸಂಘಟನೆಗಳು ಇಂದೂ ಸಹ ಆಕ್ರೋಶ ವ್ಯಕ್ತಪಡಿಸಿವೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಖಂಡಿಸಿ ಬೆಳಗಾವಿಯ ಪೀರನವಾಡಿಯಿಂದ ಅನುಗೋಳಗೆ ಪಾದಯಾತ್ರೆ ಮಾಡಲು ಮುಂದಾದ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಿಷೇಧಾಜ್ಞೆ ನಡುವೆಯೇ ಪಾದಯಾತ್ರೆಗೆ ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪಾದಯಾತ್ರ ಅಡ್ಡಗಟ್ಟಿದ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದರು.

ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಕಾರ್ಯಕರ್ತರು ಪೀರನವಾಡಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಜಮಾಯಿಸಿ ಪ್ರತಿಭಟಸಿದರು. ಈ ವೇಳೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಬಗ್ಗು ಬಡಿಯೋಕೆ ಆಗಲ್ಲ. ನಾಳೆಯೂ ನಾವೂ ಹೋರಾಟ ಮಾಡ್ತೇವೆ. ಎಂ.ಇ.ಎಸ್ ಸಂಘಟನೆ ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಪೊಲೀಸರು ನಿಷೇಧಾಜ್ಞೆ ಹೇರಿದರೂ ನಾಳೆ ಸುವರ್ಣ ಸೌಧ ಮುತ್ತಿಗೆ ಹಾಕಿಯೇ ತೀರುತ್ತೇವೆ ಎಂದು ಕನ್ನಡಪರ ಸಂಘಟನೆ ಮುಖಂಡರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ: ಮನೆಯ ಮುಂದೆ ವಾಹನಗಳನ್ನ ನಿಲ್ಲಿಸ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

ಪೊಲೀಸರಿಂದಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ:

ಪರಿಸ್ಥಿತಿಯನ್ನು ತಿಳಿಗೊಳಿಸೋ ನಿಟ್ಟಿನಲ್ಲಿ ಪೊಲೀಸರೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನುಗೋಳದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭಗ್ನಗೊಂಡ ಮೂರ್ತಿಯನ್ನು ತೆರವುಗೊಳಿಸಿದ ಪೊಲೀಸರು, ಅದೇ ಸ್ಥಳದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ, ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾರಿಗೂ ಪ್ರತಿಭಟನೆಗೆ ಅವಕಾಶ ಕೊಡಲ್ಲ. ನಾಲ್ಕು ಜನರಿಗಿಂತ ಹೆಚ್ಚು ಜನ ಜಮಾವಣೆ ಆಗೋಕ್ಕೆ ಬಿಡಲ್ಲ. ನಿಷೇಧಾಜ್ಞೆ ಇದ್ದರೂ ನೂರಾರು ಕಾರ್ಯಕರ್ತರು ಪಾದಯಾತ್ರೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಜಮಾವಣೆಗೊಂಡಿದ್ದ ಜನರನ್ನು ಬಂಧಿಸಿದ್ದೇವೆ.

ಯಾವುದೇ ಕಾರಣಕ್ಕೂ ಪಾದಯಾತ್ರೆ ಪ್ರತಿಭಟನೆಗೆ ಅವಕಾಶ ನೀಡಲ್ಲ. ಈಗಾಗಲೇ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಿದ್ದೇವೆ. ಮೊದಲು 24 ಜನರನ್ನು, ನಂತರ ನಾಲ್ವರು ಸೇರಿ ಒಟ್ಟು 27 ಜನರನ್ನು ಬಂಧಿಸಿದ್ದೇವೆ. ಅನುಗೋಳದಲ್ಲಿ ಹೊಸ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದೇವೆ. ಈ ಕೃತ್ಯದ ಹಿಂದೆ ಯಾರೇ ಇರಲಿ. ಅವರೆಲ್ಲರನ್ನೂ ಬಂಧಿಸುತ್ತೇವೆ. ಯಾರನ್ನು ಬಿಟ್ಟು ಬಿಡೋ ಪ್ರಶ್ನೆಯೇ ಇಲ್ಲ ಎಂದರು. ನಾಳೆ ಕನ್ನಡಪರ ಸಂಘಟನೆಗಳು ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಂಡಿವೆ. ನಾಳೆಯೂ ನಿಷೇಧಾಜ್ಞೆ ಇರೋದ್ರಿಂದ ಅಧ್ಯಕ್ಷ ಪಾದಯಾತ್ರೆ ಪ್ರತಿಭಟನೆಗೆ ಅವಕಾಶ ನೀಡಲ್ಲ. ಈ ನಿಟ್ಟಿನಲ್ಲಿ ಬೆಳಗಾವಿ ಮತ್ತು ಸುವರ್ಣಸೌಧದ ಬಳಿ ಮತ್ತಷ್ಟು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತೆ ಎಂದು ನ್ಯೂಸ್ 18 ಕನ್ನಡಕ್ಕೆ ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ನಾಳೆವರೆಗೂ 144 ಸೆಕ್ಷನ್ ವಿಸ್ತರಣೆ: ಇತ್ತ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಏಳು ಪುಂಡರ ಬಂಧನ

ಸದ್ಯ ಬೆಳಗಾವಿಯಲ್ಲಿ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿ ಕಾಣಿಸಿದರೂ, ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಪರ ಸಂಘಟನೆಗಳು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿದ್ದು, ನಾಳೆ ಬೆಳಿಗ್ಗೆ ಸುವರ್ಣ ಸೌಧ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿವೆ. ಇದೇ ವೆಳೆ ನಾಳೆ ಸದನದ ಒಳಗೂ ಮೂರ್ತಿ ಭಗ್ನ, ಎಂ.ಇ.ಎಸ್. ಪುಂಡಾಟಿಕೆ ವಿಷಯ ಪ್ರತಿಧ್ವನಿಸೋ ಸಾಧ್ಯತೆಯಿದೆ. ಸುವರ್ಣ ಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸೋಕೆ ತೀರ್ಮಾನಿಸಲಾಗಿದೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: