ಅನ್ಯ ಜಾತಿ ಯುವತಿ ಪ್ರೀತಿಸಿ ಮದುವೆ- ಮೂರೇ ತಿಂಗಳಲ್ಲಿ ಹತ್ಯೆ ಮಾಡಿ ಜೈಲು ಸೇರಿದ ಪತಿ

ಬೆಳಗಾವಿಯ ಶಹಾಪುರದ ಆಳವನ ಗಲ್ಲಿಯಲ್ಲಿ ಪತ್ನಿ ಜ್ಯೋತಿಯನ್ನು ಆಕೆಯ ಗಂಡ ಲಕ್ಷ್ಮೀಕಾಂತ ಯಲ್ಲಾರಿ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ. ಪೊಲೀಸರು ಕೆಲವೇ ಗಂಟೆಯಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಳಗಾವಿ: ಅಂತರ್ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನೊರ್ವ ಮೂರೇ ತಿಂಗಳಲ್ಲಿ ಪತ್ನಿಯನ್ನು ಕತ್ತು ಹಿಸಕಿ ಕೊಲೆ ಮಾಡಿ ಜೈಲು ಪಾಲು ಆಗಿದ್ದಾನೆ. ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಯಲ್ಲಿ ಭೇದಿಸುವ ಮೂಲಕ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಪ್ರೀತಿಸಿ ಮದುವೆಯಾದ ಇಬ್ಬರ ನಡುವೆ ಜಾತಿ ಅಂತರವಿದ್ದು, ಬೇರೊಂದು ಮನೆ ಮಾಡಿ ಸುಖವಾಗಿ ಇರಬೇಕು ಎಂದು ಬಯಸಿದ್ದರು. ಆದರೇ ಮದ್ಯದ ಅಮಲಿನಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಇದೊಂದು ಆತ್ಮಹತ್ಯೆ ಎಂಬಂತೆ ತಿರುಚಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿ ಶಹಾಪುರದ ಅಳವನ ಗಲ್ಲಿಯಲ್ಲಿ ಕಳೆದ ಒಂದು ವಾರದ ಹಿಂದಷ್ಟೇ ಲಕ್ಷ್ಮಿಕಾಂತ್ ಯಲ್ಲಾರಿ ಹಾಗೂ ಜ್ಯೋತಿ ಮನೆಯನ್ನು ಮಾಡಿಕೊಂಡಿದ್ದರು. ಲಕ್ಷ್ಮೀಕಾಂತ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಶನಿವಾರ ಬೆಳಗ್ಗೆ ಸಹ ಇದೇ ರೀತಿಯಲ್ಲಿ ಗಲಾಟೆ ಆರಂಭವಾಗಿದ್ದು, ಇದು ವಿಕೋಪಕ್ಕೆ ತಿರುಗಿದೆ. ಲಕ್ಷ್ಮೀಕಾಂತ ತನ್ನ ಪತ್ನಿಯ ಕತ್ತನ್ನು ಜೋರಾಗಿ ಹಿಸುಕಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇದನ್ನು ತಿರುಚಲು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದ ರೀತಿಯಲ್ಲಿ ಬಿಂಬಿಸಲು ಲಕ್ಷ್ಮೀಕಾಂತ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇಬ್ಬರ ಫೋನ್ ಸ್ವಿಚ್ ಆಫ್ ಇರೋದ್ರಿಂದ ಅನುಮಾನಗೊಂಡ ಮನೆಯವರು ಬಂದು ನೋಡಿದಾಗ ಜ್ಯೋತಿ ಮೃತಪಟ್ಟಿರೋದು ಖಾತರಿಯಾಗಿದೆ. ತಕ್ಷಣ ಈ ಬಗ್ಗೆ ಶಹಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಾಥಮಿಕ ತನಿಖೆಯನ್ನು ಕೈಗೊಂಡಿದ್ದು, ಪತಿಯ ಮೇಲೆ ಅನುಮಾನ ಬಂದಿದೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಲಕ್ಷ್ಮೀಕಾಂತ ಯಲ್ಲಾರಿಯನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಾರೆ. ವಿಚಾರಣೆ ವೇಳೆ ಆತ ತನ್ನ ಪತ್ನಿಯನ್ನು ಮದ್ಯದ ಅಮಲಿನಲ್ಲಿ ಕೊಲೆ ಮಾಡಿರೋ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಈ ಉಪಾಯಗಳನ್ನು ಬಳಸಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ವಾಸನೆಯಿಂದ ಮುಕ್ತರಾಗಿ..!

ಇನ್ನು, ಲಕ್ಷ್ಮೀಕಾಂತ್ ಯಲ್ಲಾರಿ ಅಣ್ಣ ಪ್ರಕಾಶ, ಅಕ್ಕ ಸುನಿತಾ ಹಾಗೂ ಸೋದರ ಅತ್ತೆ ದ್ರೌಪದಿ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಮೂರು ಜನ ಮೃತ ಜ್ಯೋತಿಗೆ ಮನೆಯಲ್ಲಿ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿದ್ದರೆ ಎಂಬ ಆರೋಪ ಇದೆ. ಈ ಕಿರುಕುಳದಿಂದ ಬೇಸತ್ತ ಜ್ಯೋತಿ ತನ್ನ ಪತಿಯ ಜತೆಗೆ ಬೇರೊಂದು ಮನೆಯನ್ನು ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾಳೆ. ಲಕ್ಷ್ಮೀಕಾಂತಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಜ್ಯೋತಿ ಕುಟುಂಬಸ್ಥರ ಆಗ್ರಹವಾಗಿದೆ.

ಮೃತ ಯುವತಿ ಬೆಳಗಾವಿ ನಗರದ ಬಸವನಗಲ್ಲಿಯ ನಿವಾಸಿ. ಕಳೆದ ಎರಡು ವರ್ಷಗಳ ಹಿಂದೆ ಯುವತಿ ಮನೆ ಬಳಿ ಖಾಸಗಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯೊಂದು ನಡೆಯುತ್ತಿತ್ತು. ಇದೇ ವೇಳೆ ಕಟ್ಟಡ ಕಾಮಗಾರಿಗೆ ಬರುತ್ತಿದ್ದ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಲಕ್ಷ್ಮಿಕಾಂತ್ ಯಲ್ಲಾರಿ ಎಂಬುವವನ ಜತೆ ಪ್ರೇಮಾಂಕುರವಾಗಿತ್ತು. ಇಬ್ಬರದು ಜಾತಿ ಬೇರೆ ಬೇರೆಯಾದ್ರೂ ಎರಡು ವರ್ಷ ಪ್ರೀತಿಸಿ ನಂತರ ಮನೆಯವರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದಷ್ಟೇ ಬೆಳಗಾವಿಯ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ವಿವಾಹವಾಗಿದ್ದರು‌.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: