ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ: ಸಿಎಂ ಬೊಮ್ಮಾಯಿ

Anti-conversion Bill: ನಮ್ಮ ಸಮಾಜಕ್ಕೆ ಮತಾಂತರ ಒಳ್ಳೆಯದಲ್ಲ. ನಾಳೆ ಸೋಮವಾರ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ಧಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಮುನ್ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಆ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗ್ತಿದೆ ಎಂದರು. ನಾಳೆಯಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತೆ. ಈಗಾಗಲೇ ಎಲ್ಲಾ ತಯಾರಿ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೇವೆ. ಅಧಿವೇಶನದಲ್ಲಿ ಅಭಿವೃದ್ದಿ ಬಗ್ಗೆ ಚರ್ಚೆಯಾಗುತ್ತೆ. ಅಧಿವೇಶನದಲ್ಲಿ ಮತಾಂತರ ನಿಷೇದ ಕಾಯ್ದೆ ಮಂಡನೆ ಮಾಡ್ತೇವೆ ಎಂದು ಸಿಎಂ ಹೇಳಿದರು.

ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಈಗಾಗಲೇ ಕ್ರಿಶ್ಚಿಯನ್ ಸಮುದಾಯದ ನಾಯಕರಿಗೆ ನಾನು ಹೇಳಿದ್ದೇನೆ. ಅವರಿಗೆ ಯಾವುದೇ ತೊಂದರೆಯಾಗಲ್ಲ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ ಮಾಡೋದು ತಪ್ಪು. ಆಸೆ, ಆಮಿಷ ಒಡ್ಡಿ ಮತಾಂತರ ಮಾಡೋದಕ್ಕೆ ಅವಕಾಶವಿಲ್ಲ. ಮತಾಂತರ ಕಾಯ್ದೆ ಚರ್ಚೆಗೂ ಮೊದಲು ಒಂದು ಕಮಿಟಿ ಮಾಡಿದ್ದೇವೆ. ಕಾನೂನು ಇಲಾಖೆಯ ಸಮಿತಿ ಈಗಾಗಲೇ ಪರಿಶಿಲನೆ ಮಾಡಿದೆ. ಆ ವರದಿ ನಮ್ಮ ಕ್ಯಾಬಿನೆಟ್ ಗೆ ಬರುತ್ತೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ಅಲ್ಲಿಂದ ಅಸೆಂಬ್ಲಿಗೆ ತಂದು ಬೆಳಗಾವಿಯಲ್ಲೇ ಚರ್ಚೆ ಮಾಡ್ತೇವೆ. ಯಾವ ಧರ್ಮಕ್ಕೂ ಆತಂಕವಾಗಬಾರದು‌. ಮತಾಂತರ ಎನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನನ್ನ ತರುವ ಮತಾಂತರ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ‘ರುಪ್ಸಾ’ ನಿರ್ಧಾರ: ಬೇಡಿಕೆ ಈಡೇರದಿದ್ರೆ ಜನವರಿಯಲ್ಲಿ ಶಾಲೆ ಬಂದ್

ಇದರ ಜೊತೆಗೆ ಉತ್ತರ ಕರ್ನಾಟಕದ ಮಹತ್ವದ ವಿಷಯಗಳ ಕುರಿತೂ ಬೆಳಗಾವಿ ಅಧಿವೇಶದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಈ ಭಾಗದ ನೀರಾವರಿ ಯೋಜನೆ ಸೇರಿ ಹಲವಾರು ಸಂಗತಿಗಳಿಗೆ ಚರ್ಚಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಮೋದಿ ಟ್ವಿಟ್ಟರ್ ಹ್ಯಾಕ್ ಮಾಡಿದವರ ವಿರುದ್ಧ ಕಾನೂನು ಕ್ರಮ:

ಮೋದಿ ಟ್ವಿಟರ್ ಹ್ಯಾಕ್ ಕುರಿತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈಗಾಗಲೇ ಪ್ರಧಾನಿಗಳು ಈ ಕುರಿತು ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಕೂಡಾ ಮಾಡಿದ್ದಾರೆ. ಈ ರೀತಿ ಅಲ್ಲಲ್ಲಿ ಘಟನೆಗಳು ಆಗ್ತಿವೆ. ಡಿಜಿಟಲ್ ವರ್ಲ್ಡ್ ನಲ್ಲಿ ಈ ರೀತಿಯ ಘಟನೆಗಳು ಸಹಜ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ. ತಾಂತ್ರಿಕ ಬಲದಿಂದ ಅದನ್ನ ರಕ್ಷಣೆ ಮಾಡೋ ಕೆಲಸ ಮಾಡ್ತೇವೆ ಎಂದರು.

ಒಮೈಕ್ರಾನ್ ಟೆಸ್ಟ್ ಗೆ ಲ್ಯಾಬ್ ಗಳ ಹೆಚ್ಚಳ:

ಒಮೈಕ್ರಾನ್ ಟೆಸ್ಟ್ ವರದಿಯನ್ನು ಕೇವಲ ಎರಡು ತಾಸಿನಲ್ಲಿ ಪಡೆಯಬಹುದೆಂಬ ಐ.ಎಂ.ಸಿ.ಆರ್. ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಒಮೈಕ್ರಾನ್ ಟೆಸ್ಟಿಂಗ್ ಲ್ಯಾಬ್ ಗಳನ್ನ ಹೆಚ್ಚಿಗೆ ಮಾಡುತ್ತೇವೆ. ಈಗಾಗಲೇ ಒಂದು ಜಿನೊಮಿಕ್ ಸ್ವಿಕ್ವೇನ್ಸ್ ಲ್ಯಾಬ್ ಇದೆ. ಅದರ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ‘ಇತ್ತೀಚೆಗೆ ದಾವಣಗೆರೆಯಲ್ಲಿ ಲಕ್ಷ ಲಿಂಗಾಯತರು, ಕೋಲಾರದಲ್ಲಿ 50 ಸಾವಿರ ಕುರುಬರ ಮತಾಂತರ’

ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಒತ್ತಾಯ:

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ಸ್ವಾಮೀಜಿಗಳೊಂದಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಬಿಜೆಪಿಯವರು ಯಾವುದೇ ನಾಟಕ ಆಡಬಾರದು. ಇದೇ ಅಧಿವೇಶನದಲ್ಲಿ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ಥಾಯಿಸಿದರು.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: