ಬೆಳಗಾವಿ: ಆತ ಮಾಜಿ ಯೋಧ (ex servicemen), ನಿವೃತ್ತಿ ಬಳಿಕ ಬಂದ ಹಣದಿಂದ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಇನ್ನೇನು ಮನೆ ಗೃಹಪ್ರವೇಶ (new house ceremony)ಮಾಡಬೇಕು ಎನ್ನುವಷ್ಟರಲ್ಲಿ ಪತ್ನಿಯನ್ನ ಕಳೆದುಕೊಂಡಿದ್ದರು. ಪತ್ನಿ ಸಾವಿನಿಂದ ಮನನೊಂದಿದ್ದ ಆತ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ (suicide) ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್ (borgal, hukkeri) ಗ್ರಾಮದಲ್ಲಿ ನಡೆದಿದೆ. ಪತ್ನಿಯ ಅಕಾಲಿಕ ಮರಣದಿಂದ ಮನನೊಂದ ಮಾಜಿ ಸೈನಿಕನೋರ್ವ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಕರುನಾಡನ್ನು ವಿಷಾದಕ್ಕೆ ದೂಡಿದೆ. ಬೋರಗಲ್ ಗ್ರಾಮದ ಗೋಪಾಲ ಹಾದಿಮನಿ (46) ಹಾಗೂ ಅವರ ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಮೃತಪಟ್ಟಿದ್ದಾರೆ.
ಅಂತ್ಯಕ್ರಿಯೆಗೆ 20 ಸಾವಿರ ಇಟ್ಟು ಆತ್ಮಹತ್ಯೆ
ಕಳೆದ ಮೇನಲ್ಲಿ ಕೋವಿಡ್ ಗೆ ತುತ್ತಾಗಿದ್ದ ಗೋಪಾಲ್ ಅವರ ಪತ್ನಿ ಜಯಾ ಜುಲೈ 6 ನೇ ತಾರೀಖು ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಗೋಪಾಲ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮಕ್ಕಳು ಕೂಡ ತಾಯಿಯನ್ನ ಕಳೆದುಕೊಂಡು ತೀವ್ರವಾಗಿ ನೊಂದಿದ್ದರು. ನಿನ್ನೆ ರಾತ್ರಿ ಡೆತ್ ನೋಟ್ ಬರೆದಿಟ್ಟಿರುವ ಗೋಪಾಲ್ ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದು, ಡೆತ್ ನೋಟ್ ಪಕ್ಕದಲ್ಲಿ ಅಂತ್ಯಕ್ರಿಯೆಗೆಂದು 20 ಸಾವಿರ ಹಣವಿಟ್ಟಿದ್ದಾರೆ. ಅಂತ್ಯಕ್ರಿಯೆ ಮಾಡಿದವರಿಗೆ ಧನ್ಯವಾದ ಎಂದು ಸಹ ಬರೆದಿದ್ದಾರೆ. ನಂತರ ಮಕ್ಕಳೊಂದಿಗೆ ಒಟ್ಟಿಗೆ ಕ್ರಿಮಿನಾಶಕ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ನೆಮ್ಮದಿಯ ಬದುಕಿನ ಹೊಸ್ತಿಲಲ್ಲ ವಿಧಿಯಾಟ
ಸೇನೆಯಿಂದ ನಿವೃತ್ತನಾದ ಬಳಿಕ ಸ್ವಗ್ರಾಮಕ್ಕೆ ಬಂದಿದ್ದ ಗೋಪಾಲ್ ಪತ್ನಿ ಮಕ್ಕಳೊಂದಿಗೆ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ತಮ್ಮ ಹೆಂಚಿನ ಮನೆಯ ಪಕ್ಕದಲ್ಲೇ ಜಾಗ ಖರೀದಿಸಿ, ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಹೊಸ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಬದುಕಿ ಬಾಳುವ ಕನಸು ಕಟ್ಟಿಕೊಂಡಿದ್ದ. ಇನ್ನೆನು ಮನೆಯ ಗೃಹ ಪ್ರವೇಶ ಮಾಡಬೇಕೆನ್ನುವಷ್ಟರಲ್ಲಿ ಗೋಪಾಲ್ ಪತ್ನಿ ಜಯಶ್ರೀ ಅಕಾಲಿಕ ಮರಣ ಹೊಂದಿದ್ದರು.
ಇದನ್ನೂ ಓದಿ: Sedam Husband Murder: ಗಂಡ ಸತ್ತ 2 ತಿಂಗಳಲ್ಲಿ ಯುವಕನೊಂದಿಗೆ ಹಾಸಿಗೆ ಮೇಲೆ ಸಿಕ್ಕಿ ಬಿದ್ದ ಹೆಂಡತಿ; ಬಯಲಾಯ್ತು ಅಸಲಿ ಸತ್ಯ!
ಪತ್ನಿ ಇಲ್ಲದೆ ಹೊಸ ಮನೆಗೆ ಕಾಲಿಡಲ್ಲ
ಪತ್ನಿಯ ಅಗಲಿಕೆಯಿಂದ ನೊಂದಿದ್ದ ಗೋಪಾಲ್, ಪತ್ನಿ ಇಲ್ಲದೆ ಹೊಸ ಮನೆಗೆ ನಾನು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರಂತೆ. ನಿನ್ನೆ ರಾತ್ರಿ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ್ದ ಗೋಪಾಲ್ ಮತ್ತು ಆತನ ಮಕ್ಕಳು ಊಟದ ಬಳಿಕ ಒಟ್ಟಿಗೆ ಕುಳಿತು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಎಷ್ಟೋತ್ತಾದರೂ ಬಾಗಿಲು ತೆಗೆಯದ್ದರಿಂದ ಸಂಶಯಗೊಂಡ ಸ್ಥಳೀಯರು ಬಾಗಿಲು ತೆಗೆದು ನೋಡಿದಾಗ, ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದು ಬಂದಿದೆ. ತಕ್ಷಣವೇ ಸ್ಥಳೀಯರು ಸಂಕೇಶ್ವರ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಬೋರಗಲ್ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದ್ದು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಪೊಲೀಸರು ತನಿಖೆ ನಡೆಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ