Karnataka Rain: ವರಣಾರ್ಭಟಕ್ಕೆ ಮತ್ತೊಮ್ಮೆ ತತ್ತರಿಸಿದ ಬೆಳಗಾವಿ; ರಸ್ತೆ, ಮನೆಗಳಿಗೆ ನುಗ್ಗಿದ ನೀರು

ಘಟಪ್ರಭಾ, ಮಾರ್ಕಂಡಯ್ಯ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ನದಿಗಳು ಸೇರಿ ಘಟಪ್ರಭಾ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.

ಮಳೆಗೆ ಕುಸಿದಿರುವ ಮನೆ

ಮಳೆಗೆ ಕುಸಿದಿರುವ ಮನೆ

  • Share this:
ಬೆಳಗಾವಿ(ಜುಲೈ,23)- ಪಶ್ಚಿಮ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ರಣ ಮಳೆಗೆ ಇಡೀ ಬೆಳಗಾವಿ ಜಿಲ್ಲೆ ತತ್ತರಿಸಿ ಹೋಗಿದೆ. ಕಳೆದ ನಾಲ್ಕು ದಿನಗಳಿಂದ ಮಳೆಯ ಆರ್ಭಟ ತೀವ್ರಗೊಂಡಿದ್ದು, ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮುಳುಗಿ ನದಿಯಂತೆ ಆಗಿದೆ. ಮನೆಗಳಿಗೆ ನೀರು ನುಗ್ಗಿದ್ದು ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಇನ್ನೂ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದ್ದು, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ. ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಹ ಬಂದ್ ಆಗಿದ್ದು, ಅಂತರಾಜ್ಯ ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿ ಜಿಲ್ಲೆ ಮತ್ತೊಮ್ಮೆ ಮಹಾ ಮಳೆಗೆ ಸಿಕ್ಕು ನಲುಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರು ಆವರಿಸಿಕೊಂಡಿದೆ. ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರೋ ಮಹಾಮಳೆಯಿಂದ ಅನೇಕ ರಸ್ತೆ, ಸೇತುವೆಗಳು ಮುಳುಗಿ ಹೋಗಿವೆ. ಇಲ್ಲಿನ ಪಾಂಡರಿ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೋರ್ವನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲೋಂಡಾ ಸಮೀಪ ವ್ಯಕ್ತಿ ಕೋಳಿಫಾರ್ಮ್ ನಲ್ಲಿ ಈ ವ್ಯಕ್ತಿ ಉಳಿದುಕೊಂಡಿದ್ದನು. ಪ್ರವಾಹದಿಂದ ಇಡೀ ಫಾರಂ ಮುಳುಗಿ ಹೋಗಿದೆ. ಫಾರಂ ಮೇಲೆ ಕುಳಿತು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಬಳಿಕ ಬೋಟ್ ಮೂಲಕ ಶೇಖರ್ ಮಿಠಾಯಿ ಎಂಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.

ಮಲಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನವೀಲುತೀರ್ಥ ಜಲಾಶಯಕ್ಕೆ 40ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ರಾಮದುರ್ಗ ಹಾಗೂ ಬದಾಮಿ, ರೋಣ ತಾಲೂಕಿನಲ್ಲಿ ಪ್ರವಾದ ಭೀತಿ ಎದುರಾಗಿದೆ. ಮಳೆ ಪ್ರಮಾಣ ಹೆಚ್ಚಾದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆ ವಹಿಸವಂತೆ ಸಹ ಸೂಚನೆಯನ್ನು ಜಿಲ್ಲಾಡಳಿತದಿಂದ ನೀಡಲಾಗಿದೆ.

ಘಟಪ್ರಭಾ, ಮಾರ್ಕಂಡಯ್ಯ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ನದಿಗಳು ಸೇರಿ ಘಟಪ್ರಭಾ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಇದರಿಂದ ಗೋಕಾಕ್ ಹಾಗೂ ಮೂಡಲಗಿ ತಾಲೂಕಿನಲ್ಲಿ ಸಹ ಪ್ರವಾಹದ ಭೀತಿ ಸೃಷ್ಠಿಯಾಗಿದೆ. ಇನ್ನೂ ಇಂದು ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರೋ ಪ್ರವಾಹದ ಸ್ಥಿತಿಯ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳ ಸಭೆ ನಡೆಸಿದರು. ಪ್ರವಾಹ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದರು.

ಇದನ್ನೂ ಓದಿ: Karnataka Rain: ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಹೆಚ್ಚಿದ ಪ್ರವಾಹ, ಜನಜೀವನ ಅಸ್ತವ್ಯಸ್ತ..!

ಪಶ್ಚಿಮ ಘಟಪ್ರದೇಶ ಹಾಗೂ ಖಾನಾಪುರದಲ್ಲಿ ಹೀಗೆ ಮಳೆ ಮುಂದುವರೆದ್ರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 500 ಮೀ ಮೀ ಮಳೆ ದಾಖಾಲಾಗಿದೆ. 24 ಗಂಟೆಯಲ್ಲಿ ಮಳೆ ಪ್ರಮಾಣ ಕಡಿಮೆಯಾದ್ರೆ ಮಾತ್ರ ಪ್ರವಾವದ ಭೀತಿ ಕಡಿಮೆಯಾಗಲಿದೆ. ಈಗಾಗಲೇ ಜಿಲ್ಲೆಯ 47 ರಸ್ತೆಗಳ ಸಂಪರ್ಕ ಕಡಿಗೊಂಡಿದ್ದು, 36 ಸೇತುವೆಗಳು ಮುಳುಗಡೆ ಆಗಿವೆ. ಜಿಲ್ಲೆಯಲ್ಲಿ 25 ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: