ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಎಂಇಎಸ್​ನಿಂದ ಹೊಸ ಕಿರಿಕ್ ಆರಂಭ

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ರಾಜಕೀಯ ಅಸ್ತಿತ್ವ ಸ್ಥಾಪಿಸಬೇಕೆಂದು ಕುಂದಾನಗರಿಯಲ್ಲಿ ಹೆಣಗಾಡುತ್ತಿರುವ ಎಂಇಎಸ್ ದಿನಕ್ಕೊಂದು ಕ್ಯಾತೆ ತಗೆಯುತ್ತಿದೆ. ಎಂಇಎಸ್ ನಾಯಕರ ಮೇಲೆ ನಿಗಾ ಇಟ್ಟು ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿ ಚುನಾವಣೆ ನಡೆಯಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್‌ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಪ್ರದರ್ಶಿಸಲು ಹೆಣಗಾಡುತ್ತಿದೆ. ಈ ಮಹಾನಗರ ಪಾಲಿಕೆ ಚುನಾವಣೆಯನ್ನೇ ಗುರಿಯನ್ನಾಗಿ ಇಟ್ಟುಕೊಂಡು ಈ ಹಿಂದೆ ನಿರಂತರ ಕ್ಯಾತೆ ತಗೆಯುತ್ತಿದ್ದ ಎಂಇಎಸ್ ಈಗ ಹೊಸದೊಂದು ಕ್ಯಾತೆ ಶುರು ಮಾಡಿದೆ.

ಹೌದು ಸೆಪ್ಟೆಂಬರ್ ಮೂರರಂದು ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಚುನಾವಣೆ ‌ನಡೆಯಲಿದೆ. ಈಗಾಗಲೇ ಚುನಾವಣಾ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭಗೊಂಡಿದೆ. ಈ ಮಧ್ಯೆ ಮಹಾನಗರ ಪಾಲಿಕೆ ಚುನಾವಣೆ ಗುರಿಯಾಗಿಟ್ಟುಕೊಂಡು ಭಾಷಾ ರಾಜಕಾರಣ ಮಾಡುತ್ತಾ ಕನ್ನಡ ಹಾಗೂ ಮರಾಠಿಗರ ಮಧ್ಯೆ ವಿಷಬೀಜ ಬಿತ್ತುತ್ತಿದ್ದ ಎಂಇಎಸ್ ಈಗ ಮತ್ತೆ ಕ್ಯಾತೆ ಶುರು ಹಚ್ಚಿಕೊಂಡಿದೆ. ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ನಾಮಪತ್ರ ನಮೂನೆ ಸೇರಿ ಇತರೆ ಚುನಾವಣಾ ದಾಖಲೆ ಕನ್ನಡದಲ್ಲಿ ದಾಖಲೆ ಕೊಡುತ್ತಿದ್ದಾರೆ‌. ಮರಾಠಿ ಭಾಷಿಕರಾದ ನಮಗೆ ಸಮಸ್ಯೆ ಆಗುತ್ತಿದೆ ಅಂತಾ ಕ್ಯಾತೆ ಆರಂಭಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್ 'ಈಗಾಗಲೇ ನಾಮಪತ್ರ ಪ್ರಕ್ರಿಯೆ ಶುರುವಾಗಿದ್ದು ಮರಾಠಿ ಭಾಷೆಯಲ್ಲಿ ಚುನಾವಣಾ ದಾಖಲೆ ನೀಡಬೇಕು. ಕನ್ನಡ, ಮರಾಠಿ ಇಂಗ್ಲಿಷ್ ಭಾಷೆಯಲ್ಲಿ ನಾಮಪತ್ರ ನಮೂನೆ ನೀಡಬೇಕು. ಭಾಷಾ ವಿಚಾರ, ಗಡಿ ವಿಚಾರ ಹಾಗೂ ರಾಜ್ಯ ಕೇಂದ್ರ ಸರ್ಕಾರದಿಂದ ಮರಾಠಿಗರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಜನರ ಮುಂದಿಟ್ಟು ಚುನಾವಣೆ ಹೋಗ್ತೀವೆ. 58 ವಾರ್ಡ್ ಗಳಲ್ಲಿ 45 ಪ್ಲಸ್ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಹೋಗ್ತೇವೆ' ಅಂತಾ ತಿಳಿಸಿದ್ದಾರೆ.

ಇನ್ನು ಎಂಇಎಸ್ ಈ ಹಿಂದೆಯೂ ಭಾಷಾ ರಾಜಕಾರಣ ಗಡಿ ವಿವಾದ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಾ ಬಂದಿದೆ. ಈಗಾಗಲೇ ಬೆಳಗಾವಿ ಡಿಸಿ ಜಾತಿ, ಭಾಷೆ ಆಧಾರದ ಮೇಲೆ ಮತಯಾಚನೆ ಮಾಡಬಾರದು. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ‌. ಹಾಗೇ ಯಾರಾದರೂ ಮತಯಾಚನೆ ಮಾಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮರಾಠಿ ಭಾಷೆಯಲ್ಲಿ ನಾಮಪತ್ರ ಹಾಗೂ ಇತರೆ ದಾಖಲೆ‌ ನೀಡುವಂತೆ ಆಗ್ರಹಿಸಿರುವ ಎಂಇಎಸ್ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಎಂಇಎಸ್ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಹಾಗೂ ಕನ್ನಡಿಗನೇ ಸಾರ್ವಭೌಮ. ಕ್ಯಾತೆ ತಗೆಯುವ ಎಂಇಎಸ್ ಪುಂಡರು ಕನ್ನಡ ಕಲಿತುಕೊಳ್ಳಲಿ ಇಲ್ಲವಾದ್ರೆ ರಾಜ್ಯ ಬಿಟ್ಟು ತೊಲಗಲಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚುನಾವಣೆ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕಾರ್ಯಕ್ಕೆ ಏನಾದರೂ ಮುಂದಾದ್ರೆ ಅಂತವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ ಅಂತಾ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

ಅದೇನೇ ಇರಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ರಾಜಕೀಯ ಅಸ್ತಿತ್ವ ಸ್ಥಾಪಿಸಬೇಕೆಂದು ಕುಂದಾನಗರಿಯಲ್ಲಿ ಹೆಣಗಾಡುತ್ತಿರುವ ಎಂಇಎಸ್ ದಿನಕ್ಕೊಂದು ಕ್ಯಾತೆ ತಗೆಯುತ್ತಿದೆ. ಎಂಇಎಸ್ ನಾಯಕರ ಮೇಲೆ ನಿಗಾ ಇಟ್ಟು ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿ ಚುನಾವಣೆ ನಡೆಯಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: