ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯ ಕೊರೊನಾಗೆ ಬಲಿ: ವೈದ್ಯನ ತಾಯಿ ಕೂಡ ಮೃತ!

ಕೊರೊನಾ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದ ವೇಳೆಯಲ್ಲಿ ಪಾಟೀಲ್ ಗೆ ಸೋಂಕು ದೃಢವಾಗಿತ್ತು. ಪಾಟೀಲ್​​ರಿಂದ ಅವರ ತಂದೆ-ತಾಯಿಗೆ ಸೋಂಕು ಹಬ್ಬಿತ್ತು. ಚಿಕಿತ್ಸೆ ಫಲಿಸದೇ ತಾಯಿ ಅಸುನೀಗಿದ್ದಾರೆ.

ತಾಯಿ-ಮಗ

ತಾಯಿ-ಮಗ

  • Share this:
ಬೆಳಗಾವಿ(ಮೇ 24): ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ನಿತ್ಯ ಸಾವಿರಾರು ಜನ ಸೋಂಕಿತರಾಗುತ್ತಿದ್ದು, ಅನೇಕರು ಮೃತಪಡುತ್ತಿದ್ದಾರೆ. ಸರ್ಕಾರ, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಎರಡನೇ ಹಾವಳಿ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಹಾಮಾರಿಗೆ ವೈದ್ಯ ಮಗ ಹಾಗೂ ತಾಯಿ ನಾಲ್ಕೇ ದಿನಗಳ ಅಂತರದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಮೃತ ವೈದ್ಯ ಕುಟುಂಬದ ನೆರವಿಗೆ ಬರಬೇಕಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಸಹಾಯ ಮಾಡಿಲ್ಲ ಎನ್ನುವ ಆರೋಪ ಸಹ ಕೇಳಿ ಬಂದಿದೆ.

ಇಡೀ ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಸಾವಿರಾರು ಜನರನ್ನು ಬಲಿ ಪಡೆದಿದೆ. ಅನೇಕ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆ ಓಡಾಡುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳು ಭರ್ತಿಯಾಗಿದ್ದು, ಕೊರೊನಾ ಸೋಂಕಿನ ಭೀಕರತೆಗೆ ಸಾಕ್ಷಿಯಾಗಿದೆ. ಬೆಳಗಾವಿಯಲ್ಲಿ ಕೊರೊನಾ ವಾರಿಯರ್ ಓರ್ವ ದುರಂತ ಕಥೆ ಇದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಮಹೇಶ ಪಾಟೀಲ್ ಹಾಗೂ ಅವರ ತಾಯಿ ಸುಮಿತ್ರಾ ಪಾಟೀಲ್ ಕೇವಲ ನಾಲ್ಕೇ ದಿನ ಅಂತರದಲ್ಲಿ ಮೃತಪಟ್ಟಿದ್ದಾರೆ. ಇದು ಕುಟುಂಬಕ್ಕೆ ದೊಡ್ಡ ಆಘಾತವನ್ನು ಉಂಟು ಮಾಡಿದ್ದು, ಕಣ್ಣಿರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.

ಡಾ. ಮಹೇಶ ಪಾಟೀಲ್ ಬೆಳಗಾವಿಯ ವೈಭವ ನಗರದ ನಿವಾಸಿಯಾಗಿದ್ದು, ನಗರದ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಪುಟ್ಟ ಮಗುವಿಗೆ ಕೊರೊನಾ ಸೋಂಕಿನ ಚಿಕಿತ್ಸೆ ನೀಡಿದ್ದ ವೇಳೆಯಲ್ಲಿ ಪಾಟೀಲ್ ಗೆ ಸೋಂಕು ದೃಢವಾಗಿತ್ತು. ನಂತರ ಡಾ.ಮಹೇಶ ಪಾಟೀಲ್ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದರು. ಡಾ. ಮಹೇಶ ಪಾಟೀಲ್ ತಂದೆ, ತಾಯಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ತಾಯಿ ಸುಮಿತ್ರಾ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತಾಯಿ ಮೃತಪಟ್ಟ ನಾಲ್ಕು ದಿನಗಳ ಬಳಿಕ ವೈದ್ಯ ಮಹೇಶ ಪಾಟೀಲ್ (37) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನೂ ಪಾಟೀಲ್ ತಂದೆಗೆ ಇನ್ನೂ ಆರೋಗ್ಯದಿಂದ ಚೇತರಿಸಿಕೊಂಡಿಲ್ಲ. ಪಾಟೀಲ್ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗ ಇದ್ದು, ಇಡೀ ಕುಟುಂಬ ಇದೀಗ ಕಣ್ಣೀರಿನಲ್ಲಿ ಮುಳುಗಿದೆ. ವೈದ್ಯನ ಕುಟಂಬದ ನೆರೆವಿಗೆ ಬರಬೇಕಿದ್ದ ಆಸ್ಪತ್ರೆ ಮಾತ್ರ ಯಾವುದೇ ರೀತಿಯ ನೆರವು ನೀಡಿಲ್ಲ.

ಇದನ್ನೂ ಓದಿ: Yellow fungus: ಬ್ಲ್ಯಾಕ್ ಆಯ್ತು, ವೈಟ್ ಆಯ್ತು.. ಈಗ ಭಾರತದಲ್ಲಿ ಯೆಲ್ಲೋ ಫಂಗಸ್ ಪತ್ತೆ! ಕೀವು-ನೋವು ಭಾದಿಸಲಿದೆಯಂತೆ

ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದ್ದು, ಆದರೇ ವೈದ್ಯರ ಕುಟುಂಬಕ್ಕೆ ಯಾವುದೇ ಭದ್ರತೆ ಇಲ್ಲದಂತೆ ಆಗಿದೆ. ಇನ್ನಾದರೂ ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೃತ ವೈದ್ಯನ ಕುಟುಂಬದ ನೆರವಿಗೆ ಬರಬೇಕಿದೆ ಎಂಬುದು ಕುಟುಂಬಸ್ಥರ ಆಗ್ರಹವಾಗಿದೆ.

ಇನ್ನು ರಾಜ್ಯದಲ್ಲಿ ಇಂದು ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕೊಂಚ ತಗ್ಗಿದೆ. 24 ಗಂಟೆಗಳ ಅವಧಿಯಲ್ಲಿ 25,311 ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿವೆ. ಆದರೆ ರಾಜ್ಯದಲ್ಲಿ ಕೊರೋನಾ ಮರಣಮೃದಂಗ ಹೆಚ್ಚಾಗಿದ್ದು, ಒಂದೇ ದಿನ ಬರೋಬ್ಬರಿ 529 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 5,701 ಮಂದಿಗೆ ಸೋಂಕು ತಗುಲಿದ್ದು, 297 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು 34,378 ಮಂದಿ ಗುಣಮುಖರಾಗಿದ್ದು, ರಾಜ್ಯದಲ್ಲಿ ಸದ್ಯ 2,26,868 ಸಕ್ರಿಯ ಪ್ರಕರಣಗಳಿವೆ.
Published by:Kavya V
First published: