ಬೆಳಗಾವಿ (ನ. 25): ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಬೆಳಗಾವಿ ಪಾತ್ರ ಬಹಳದ ದೊಡ್ಡದು. ಅದೇ ರೀತಿ ಇದೀಗ ಜಿಲ್ಲೆಯ ಬಿಜೆಪಿ ಶಾಸಕರು, ಮುಖ್ಯಮಂತ್ರಿಗಳ ಆಪ್ತರು ಸರ್ಕಾರದ ಅನೇಕ ಮಹತ್ವದ ಹುದ್ದೆಗಳಿಗೆ ನೇಮಕವಾಗುವ ಮೂಲಕ ಜಿಲ್ಲೆಯ ಪ್ರತಿನಿಧಿಗಳ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ. ಜಿಲ್ಲೆಯ ಕೆಲ ಶಾಸಕರು ಹೊರತು ಪಡಿಸಿ ಬಹುತೇಕರು ಇದೀಗ ಅಧಿಕಾರದ ಗದ್ದುಗೆ ಏರಿದ್ದಾರೆ. ಇದರಲ್ಲಿ ಹಿರಿಯ ಶಾಸಕ ಉಮೇಶ ಕತ್ತಿ ಮಾತ್ರ ಸಚಿವರಾಗಲು ನಿರಂತರ ಲಾಭಿ ನಡೆಸುತ್ತಲೇ ಇದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, 8 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮೂರು ಜನ ಶಾಸಕರು ಬಿಜೆಪಿ ಸೇರ್ಪಡೆ ಆಗಿ ಮತ್ತೆ ಗೆಲುವು ಸಾಧಿಸಿ ಇಬ್ಬರು ಸಚಿವರಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಂಗ್ರೆಸ್ ಕೇವಲ 5 ಶಾಸಕರನ್ನು ಹೊಂದಿದೆ.
ನಿಗಮ ಮಂಡಳಿ ಹುದ್ದೆ ಪಡೆಯುವಲ್ಲಿ ಯಶಸ್ವಿ
ಜಿಲ್ಲೆಯ 13 ಜನ ಶಾಸಕರ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ವಹಿಸಿಕೊಂಡಿದ್ದಾರೆ. ಸಹೋದರ ಬಾಲಚಂದ್ರ ಜಾರಕಿಹೊಳಿ ಪ್ರಮುಖ ನಿಗಮವಾಗಿರುವ ಕರ್ನಾಟಕ ಹಾಲಿನ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಸವದತ್ತಿ ಶಾಸಕ ಆನಂದ ಮಾಮನಿ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿದ್ದಾರೆ. ಕುಡಚಿ ಶಾಸಕ ಪಿ ರಾಜು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಅಥಣಿ ಶಾಸಕ ಮಹೇಶ ಕುಮಟಹಳ್ಳಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷಣ ಸವದಿ, ಸಾರಿಗೆ ಇಲಾಖೆಯ ಜತೆಗೆ ಉಪ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಜವಳಿ ಸಚಿವರಾಗಿದ್ದಾರೆ. ಎಂ ಎಲ್ ಸಿ ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿದ್ದಾರೆ. ಇದೀಗ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.
ಇದನ್ನು ಓದಿ: ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ; ಇಲ್ಲಿದೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ
ಸಿಎಂ ಬಿ ಎಸ್ ಯಡಿಯೂರಪ್ಪ ಆಪ್ತರಾಗಿರುವ ಶಂಕರಗೌಡ ಪಾಟೀಲ್ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. ಬೈಲಹೊಂಗಲ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾಂಡಲದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಮುಕ್ತಾರ ಪಠಾಣ್ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ವಿಧಾನಸಭೆ ಲೆಕ್ಕಪತ್ರ ಅಂದಾಜು ಸಮಿತಿ ಅಧ್ಯಕ್ಷರಾಗಿ ನೇಕವಾಗಿದ್ದಾರೆ. ಹೈಕಮಾಂಡ್ ಈರಣ್ಣ ಕಡಾಡಿಗೆ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಿ ದೊಡ್ಡ ಉಡುಗೊರೆಯನ್ನೇ ನೀಡಿದೆ.
ರಾಮದುರ್ಗ ಶಾಸಕ ಮಹಾದೇವ ಯಾದವಾಡ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆಗೆ ಯಾವುದೇ ಮಹತ್ ಜವಾಬ್ದಾರಿ ಸಿಕ್ಕಿಲ್ಲ. ಹುಕ್ಕೇರಿ ಹಿರಿಯ ಶಾಸಕ ಉಮೇಶ ಕತ್ತಿ ಸಚಿವರಾಗಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಅನೇಕ ಸಲ ಭೇಟಿಯಾಗಿದ್ದಾರೆ. ಸಿಎಂ ಸಹ ಮಂತ್ರಿ ಸ್ಥಾನದ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ