ಬೆಳಗಾವಿ: ನಾಡಿನ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಸವದತ್ತಿ ಯಲ್ಲಮ್ಮನ ದೇಗುಲವೂ (Savadatti Yallamma Temple) ಒಂದು. ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೇ, ಪಕ್ಕದ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. “ಉಧೋ” ಎಂದು ಬರುವ ಭಕ್ತರ (Devotees) ಮನದ ಇಚ್ಛೆಯನ್ನು ತಾಯಿ ಯಲ್ಲಮ್ಮ ದೇವಿ ಪೂರೈಸುತ್ತಾಳೆ ಎಂಬ ಪ್ರತೀತಿ ಇದೆ. ಹೀಗಾಗಿ ತಾಯಿಗೆ ಭಕ್ತರು ತರಹೇವಾರಿ ಬೇಡಿಕೆಗಳ ಪಟ್ಟಿ ಸಲ್ಲಿಸುತ್ತಾರೆ. ಇದೀಗ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದ್ದು, ಈ ವೇಳೆ ಹುಂಡಿಯಲ್ಲಿ ಭಕ್ತರು ಬರೆದ ಚಿತ್ರ ವಿಚಿತ್ರ ಪತ್ರಗಳು (Letters) ಪತ್ತೆಯಾಗಿವೆ.
ಹುಂಡಿಯಲ್ಲಿ ಪತ್ತೆಯಾಯ್ತು ಭಕ್ತರ ಬೇಡಿಕೆ ಪಟ್ಟಿ
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ನಾಲ್ಕು ದಿನಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆಯನ್ನು ಆಡಳಿತ ಮಂಡಳಿ ನಡೆಸುತ್ತಿದೆ. ಈ ವೇಳೆ ಭಕ್ತರು ಮಾತೆ ಯಲ್ಲಮ್ಮ ದೇವಿಗೆ ಬರೆದಿರುವ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ. ಭಕ್ತರು ತಮ್ಮ ಕೌಟುಂಬಿಕ ಸಮಸ್ಯೆ, ಆರೋಗ್ಯ, ವಿವಾಹ, ದಾಂಪತ್ಯ, ಸಂತಾನಫಲ, ಉದ್ಯೋಗ ಇತ್ಯಾದಿ ಕುರಿತಂತೆ ಬೇಡಿಕೆ ಸಲ್ಲಿಸಿ, ತಾಯಿಗೆ ಪತ್ರ ಬರೆದಿದ್ದಾರೆ.
“ನನ್ನ ಮಗಳಿಗೆ ನನಗಿಂತ 100 ಪಟ್ಟು ಆಸ್ತಿ ಇರುವ ವರನನ್ನುಕೊಡು”
ಬಹುಶಃ ತಂದೆಯೊಬ್ಬರು ಬರೆದಿರುವ ಪತ್ರ ಇರಬೇಕು ಇದು. ನನ್ನ ಮಗಳಿಗೆ ಬೇಗ ಮದುವೆ ಆಗಲಿ, ಆಕೆಗೆ ನನಗಿಂತ 100 ಪಟ್ಟು ಹೆಚ್ಚು ಆಸ್ತಿ ಇರುವ ವರನನ್ನುಕೊಡು ಅಂತ ಪ್ರಾರ್ಥಿಸಿದ್ದಾರೆ. ಹೆಚ್ಚಿನವರು ತಮ್ಮ ಮಗ ಅಥವಾ ಮಗಳಿಗೆ ಉತ್ತಮ ವಧು - ವರನನ್ನು ಕರುಣಿಸುವಂತೆ ಬೇಡಿಕೊಂಡಿದ್ದಾರೆ. ಅವುಗಳನ್ನು ಈಡೇರಿಸಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: Congress: ಹಿಂದೂಯೇತರರಿಗೆ ದೇವಾಲಯಗಳ ಬಳಿ ವ್ಯಾಪಾರ ವಹಿವಾಟಿಗೆ ಗುತ್ತಿಗೆ ನೀಡಬಾರದೆಂಬ ನಿಯಮ ಕಾಂಗ್ರೆಸ್ ಸರ್ಕಾರದಲ್ಲೇ ಜಾರಿ
“ನನಗೆ ಪಿಎಸ್ಐ ಹುದ್ದೆ ಕರುಣಿಸು ತಾಯೆ”
ಇನ್ನೋರ್ವ ಭಕ್ತ ತನ್ನ ಉದ್ಯೋಗದ ಕುರಿತಂತೆ ದೇವಿಯಲ್ಲಿ ಕೇಳಿ ಕೊಂಡಿದ್ದಾನೆ. ಪಿಎಸ್ಐ ಹುದ್ದೆ ಕರುಣಿಸು ಅಂತ ಪತ್ರದಲ್ಲಿ ಮನವಿ ಮಾಡಿದ್ದಾನೆ. ಮತ್ತೊಬ್ಬರು ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು ಅಂತ ಪ್ರಾರ್ಥಿಸಿದ್ದಾರೆ. ಮತ್ತೊಬ್ಬ ಮಹಿಳೆ ಗಂಡನಿಗೆ ಕುಡಿತ ಚಟ ಬಿಡಿಸು ಅಂತ ಕೇಳಿ ಕೊಂಡಿದ್ದಾಳೆ. ಮತ್ತೋರ್ವ ಮಹಿಳೆ ಗಂಡನನ್ನು ಕುಡುಕ ಸ್ನೇಹಿತರಿಂದ ದೂರ ಮಾಡು ಎನ್ನುವಂತೆ ಬರೆದು ಚೀಟಿಗಳನ್ನು ಹುಂಡಿಯಲ್ಲಿ ಹಾಕಿದ್ದು ಪತ್ತೆಯಾಗಿವೆ.
ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹ
ಕಳೆದ ನಾಲ್ಕು ದಿನಗಳ ಎಣಿಕೆ ಕಾರ್ಯದಲ್ಲಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ ಫೆಬ್ರವರಿ 1 ರಿಂದ ಮಾರ್ಚ್ 15ರವರೆಗೆ 1.30 ಕೋಟಿ ರೂ. ಸಂಗ್ರಹವಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಕಾಣಿಕೆ
ಈ ಪೈಕಿ 12. 45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 30 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹಲವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: Sirsi Marikamba Jatre: ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದ ಪಡೆಯಿರಿ! ಜಾತ್ರೆ ಮುಗಿಯೋಕೆ ಇನ್ನೊಂದೇ ದಿನ ಬಾಕಿ!
ಯಲ್ಲಮ್ಮನ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ
ಸವದತ್ತಿ ರೇಯಲ್ಲಮ್ಮನ ದೇವಸ್ಥಾನ ಸೇರಿ ಬೆಳಗಾವಿಯ ಎಲ್ಲ ಹಿಂದೂ ದೇವರುಗಳ ಜಾತ್ರೆ ಮತ್ತು ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಮರು ನಡೆಸುವ ವ್ಯಾಪಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ