ಬೆಳಗಾವಿ (ಮೇ 29): ಕೊರೋನಾ ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕಿತರ ಚಿಕಿತ್ಸೆ ನೀಡುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಆಸ್ಪತ್ರೆ (ಬಿಮ್ಸ್) ಅವ್ಯವಸ್ಥೆಯ ಆಗರವಾಗಿದೆ. ಅನೇಕ ರೋಗಿಗಳು ಹಾಗೂ ಸಂಬಂಧಿಕರು ಈ ಬಗ್ಗೆ ದೂರು ನೀಡಿದ್ದಾರೆ. ಇಂದು ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಆಸ್ಪತ್ರೆಗೆ ಪಿಪಿಇ ಕೀಟ್ ಧರಿಸಿಕೊಂಡು ಹೋಗಿ ಪರಿಶೀಲಿಸಿದಾಗ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅರಿವಾಗಿದೆ. ಈ ಅವ್ಯವಸ್ಥೆ ಸರಿ ಮಾಡಲು ಸಿಎಂ ಗಮನಕ್ಕೆ ಸಹ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ಗೆ ಇಂದು ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿದರು. ಈ ವೇಳೆಯಲ್ಲಿ ಅನೇಕ ರೋಗಿಗಳ ಸಂಬಂಧಿಕರ ಜತೆಗೆ ಸಹ ಮಾತುಕತೆ ನಡೆಸಿದ್ದರು. ಬಿಮ್ಸ್ ನಲ್ಲಿ ಇರುವ ಅವ್ಯವಸ್ಥೆಯ ಬಗ್ಗೆ ಅಧೀಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ಐಸಿಯುನಲ್ಲಿ ಜನ ಬೇಕಾಬಿಟ್ಟಿಯಾಗಿ ಓಡಾಡೋದು, ಕೆಲವರಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ಇರೋದು. ಇನ್ನೂ ವೈದ್ಯರ ನಡುವೆ ಹೊಂದಾಣಿಕೆ ಕೊರತೆಯಿಂದ ರೋಗಿಗಳು ನರಳುತ್ತಿರೋದು ಗಮನಕ್ಕೆ ಬಂದಿದೆ. ಬಳಿಕ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪಾಲ್ಗೊಂಡಿದ್ದರು. ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಇಂದು ಸಿಎಂ ಗಮನಕ್ಕೆ ಈ ವಿಷಯ ತಂದು, ಅವ್ಯವಸ್ಥೆ ಸರಿ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: Explained: ಕೊರೋನಾ ಸೋಂಕು, ರೋಗಲಕ್ಷಣ, ಪರೀಕ್ಷೆ ಬಗ್ಗೆ ನಿಮಗೆ ಇನ್ನು ಅನುಮಾನಗಳಿಯೇ?
ನಾಲ್ಕೈದು ದಿನದಲ್ಲಿ ಕೊರೋನಾ ಬಗ್ಗೆ ಸಭೆ ನಡೆಸಲು ಸಿಎಂ ಬರಲಿದ್ದಾರೆ. ಸಿಎಂ ಮುಂದೆ ಆಗಿರುವ ತೊಂದರೆಯ ಬಗ್ಗೆ ವಿಸ್ತಾರವಾಗಿ ಹೇಳಲಾಗುವುದು. ಇಂದು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರು, ಸೋಂಕಿತರ ಸಂಬಂಧಿಕರ ಜತೆಗೆ ಮಾತುಕತೆ ನಡೆಸಿದ್ದೇನೆ. ಆಸ್ಪತ್ರೆಗೆ ಹೋಗಿದ್ದೇನೋ ಅಥವಾ ಜಾತ್ರೆಗೆ ಹೋಗಿದ್ದೇನೆ ಎನ್ನುವ ಭಾವನೆ ಮೂಡಿದೆ. ಬಿಮ್ಸ್ ನಲ್ಲಿ ಒಟ್ಟಾರೆಯಾಗಿ ಎಲ್ಲವೂ ಸರಿಯಿಲ್ಲ, ಇದನ್ನು ತುರ್ತಾಗಿ ಸರಿ ಮಾಡಬೇಕಿದೆ. ಐಸಿಯು ಎಂದರೇ ಹೇಗಿರಬೇಕು ಎಂಬುದು ಅನೇಕ ಕಡೆಗಳಲ್ಲಿ ನೋಡಿದ್ದೇನೆ. ಆದರೆ ಬಿಮ್ಸ್ ನಲ್ಲಿ ಇರೋದು ಐಸಿಯು ಅಲ್ಲೇ ಅಲ್ಲ. ಇಂದು ಬಿಮ್ಸ್ ಅಧಿಕಾರಿಗಳ ಜತೆಗೆ ಪ್ರತ್ಯೇಕ ಸಭೆಯನ್ನು ಸಹ ನಡೆಸಲಾಗುವುದು. ವ್ಯವಸ್ಥೆ ಸರಿ ಮಾಡಲು ಕೆಲ ಸೂಚನೆ ನೀಡುತ್ತೇನೆ. ಬಿಮ್ಸ್ ನಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ಸಿಸಿಟಿವಿ ಅಳವಡಿಸಬೇಕು. ಇದನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಣುವಂತೆ ಮಾಡುತ್ತೇನೆ. ನಾಲ್ಕು ಶಿಫ್ಟ್ ನಲ್ಲಿ ವೈದ್ಯರು, ನರ್ಸ್ ಗಳು ಕೆಲಸ ಮಾಡೊದು ಸಿಸಿಟಿಯ ಮೂಲಕ ಗೊತ್ತಾಗಬೇಕು. ಜಿಲ್ಲೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಯಾರ ವಿರುದ್ಧ ಕ್ರಮ ಕೈಗೊಳಬೇಕು ಎಂಬುದರ ಬಗ್ಗೆ ಸಹ ನಿರ್ಧಾರವಾಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ