Covid 19: ಗಡಿ ಜಿಲ್ಲೆಗಳಲ್ಲಿ ಹೆಚ್ಚಾದ ಸೋಂಕು; ಅಧಿಕಾರಿಗಳೊಂದಿಗೆ ನಾಳೆ ಸಿಎಂ ಸಭೆ

ಬೆಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ,ಶಿವಮೊಗ್ಗ , ಉಡುಪಿ, ಮತ್ತು ಚಾಮರಾಜನಗರ ಜಿಲ್ಲೆಗಳ ಡಿಸಿ, ಎಸ್ ಪಿ , ಸಿಇಓ ಗಳ ಜೊತೆ ನಾಳೆ ಸಂಜೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ. 

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಮಂಗಳೂರು (ಜು. 30):  ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕಡಿಮೆಯಾಯ್ತು ಎನ್ನುವಷ್ಟರಲ್ಲಿ ಮೂರನೇ ಅಲೆ ಶುರುವಾಗುವ ಆತಂಕ ಎದುರಾಗಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನಾ ಕೇಸ್ ಭಾರೀ ಸಂಖ್ಯೆಯಲ್ಲಿ ಹೆಚ್ಚಳ ಹಿನ್ನಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣಕನ್ನಡದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಿ.ಎಂ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಗಳೆ ಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಆತಂಕ ವ್ಯಕ್ತಪಡಿಸಿರುವ ಸಿಎಂ ಸೋಂಕು ನಿಯಂತ್ರಣ ಸಂಬಂಧ ನಾಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬೆಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ,ಶಿವಮೊಗ್ಗ , ಉಡುಪಿ, ಮತ್ತು ಚಾಮರಾಜನಗರ ಜಿಲ್ಲೆಗಳ ಡಿಸಿ, ಎಸ್ ಪಿ , ಸಿಇಓ ಗಳ ಜೊತೆ ನಾಳೆ ಸಂಜೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ. 

ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ರಾಜ್ಯದ ಜನತೆ ತತ್ತರಿಸಿದ್ದು ಇದೀಗ ಒಂದು ಹಂತಕ್ಕೆ ಸಹಜ ಸ್ಥಿತಿಗೆ ಬರುತ್ತಿದ್ದಾರೆ. ಆದ್ರೆ ರಾಜ್ಯ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಯಾಕಂದ್ರೆ ಜಿಲ್ಲೆಯ ಪಕ್ಕದ ರಾಜ್ಯ ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ತಲಪಾಡಿ ಗಡಿ ಸೇರಿದಂತೆ 18 ಕ್ಕೂ ಹೆಚ್ಚು ಕಡೆ ಚೆಕ್ ಪೋಸ್ಟ್ ತೆರೆದು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ನಡೆಯುತ್ತಿದೆ. ಇಂದು ಸ್ವತ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಲಪಾಡಿ ಗಡಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ರು.

ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ  ಒಂದೇ ದಿನದಲ್ಲಿ 396 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜಿಲ್ಲಾಡಳಿತ ಅಲರ್ಟ್ ಆಗಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿಯೂ ಆರೋಗ್ಯ ಇಲಾಖೆಯ ತಂಡ, ಪೊಲೀಸರನ್ನು ನಿಯೋಜಿಸಿದ್ದು ಕೇರಳದಿಂದ ಬರುವ ಪ್ರತಿಯೊಬ್ಬರಿಗೂ RTPCR ನೆಗಟಿವ್ ವರದಿ ಕಡ್ಡಾಯಗೊಳಿಸಿದೆ. ರೈಲ್ವೆ ಸ್ಟೇಷನ್‌ನಲ್ಲಿಯೂ ಇದೇ ರೀತಿಯ ತಪಾಸಣೆ ನಡೆಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಒಂದು ಡೋಸ್ ವ್ಯಾಕ್ಸಿನ್ ಪಡೆದುಕೊಂಡವರಿಗು ಪ್ರವೇಶಕ್ಕೂ ಅವಕಾಶ ನೀಡಲಾಗಿದೆ. ಇದ್ಯಾವುದು ಇಲ್ಲದಿದ್ದರೇ ಸ್ಥಳದಲ್ಲಿಯೇ ಕೋವಿಡ್ ತಪಾಸಣೆ ನಡೆಸಿ ನೆಗೆಟಿವ್ ಬಂದವರಿದೆ ಮಾತ್ರ ಎಂಟ್ರಿ ನೀಡಲಾಗುತ್ತಿದೆ.

ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಸೋಂಕು; ಕೇರಳ ಗಡಿಯಲ್ಲಿ ಬಿಗಿ ಕ್ರಮ

ಗಡಿಭಾಗದ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡು ವಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಗಳ ಸಂಖ್ಯೆ ಹೆಚ್ಚಾಗಿದೆ..ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೇಟ್ 14℅ರಷ್ಟಿದೆ. ಈ ಹಿನ್ನಲೆಯಲ್ಲಿ ದ. ಕ ಜಿಲ್ಲೆಯಲ್ಲೂ ಕಳೆದ ನಾಲ್ಕು ದಿನಗಳಿಂದ ಪಾಸಿಟಿವ್ ಸಂಖ್ಯೆ ಜಾಸ್ತಿಯಾಗಿದೆ. ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲು ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರ ವಾಕ್ಸಿನೇಷನ್ ಆದವರಿಗೆ ಜಿಲ್ಲೆಗೆ ಪ್ರವೇಶ ನೀಡಲು ಸೂಚನೆ ನೀಡಿದೆ. ಆದರೆ ವಾಕ್ಸಿನೇಷನ್ ಆದವರಿಂದಲೂ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿವೆ . ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ. ದ.ಕ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಿದೆ ಎಂದರು

ಮಂಗಳೂರಿಗೆ ಕಾಸರಗೋಡುವಿನಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬಸ್ ಮೂಲಕ ಬರುತ್ತಾರೆ. ಅವರ ಬಗ್ಗೆ ಯೂ ನಿಗಾವಹಿಸಲು ಸೂಚನೆ ನೀಡಿದ್ದೇನೆ‌. ‌‌ರೈಲು ಮಾರ್ಗದ ಮೂಲಕ ಬರುವವರ ಪರೀಕ್ಷೆಯನ್ನೂ ರೈಲ್ವೇ ನಿಲ್ದಾಣದಲ್ಲಿ ಮಾಡಲು ಸೂಚನೆ ನೀಡಿದ್ದೇನೆ. ದ.ಕ ಜಿಲ್ಲೆಯಲ್ಲೂ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿದ್ದು, ನಿಯಂತ್ರಣ ಕ್ಕಾಗಿ ಹಲವು ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ಸದ್ಯ ಪ್ರತಿದಿನ ಆರು ಸಾವಿರ ಜನರ ಕೊರೊನಾ ಪರೀಕ್ಷೆ ಯಾಗುತ್ತಿದ್ದು,ಮುಂದಿನ ದಿನದಲ್ಲಿ ಹತ್ತು ಸಾವಿರ ಜನರ ಕೊರೊನಾ ಟೆಸ್ಟ್ ನಡೆಸಲು ನಿರ್ಧಾರ ಮಾಡಿದ್ದೇವೆ ಅಂತಾ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೇಳಿದ್ದಾರೆ.
Published by:Seema R
First published: