ಬೆಳಗಾವಿ (ಮೇ 25, ಮಂಗಳವಾರ): ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತನ್ನ ಆರ್ಭಟ ಮುಂದುವರೆಸಿದೆ. ಮಾರಕ ಸೋಂಕು ನಿಯಂತ್ರಣಕ್ಕೆ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯರು ಜೀವದ ಹಂಗು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ನಡುವೆ ಕೊರೋನಾ ನಿರ್ಮೂಲನೆಗೆ ಹಳ್ಳಿಯ ಜನರು ಕೆಲ ಮೂಢನಂಬಿಕೆ ಪದ್ಧತಿ ಆಚರಣೆಗೆ ಮುಂದಾಗಿದ್ದಾರೆ. ಅದರಂತೆ ಬಿಜೆಪಿ ಶಾಸಕರ ನಡೆ ಕೂಡ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಾತಾವರಣ ಶುದ್ಧಿ ಮಾಡಲು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ತಮ್ಮ ಇಡೀ ಕ್ಷೇತ್ರದಲ್ಲಿ ಹೋಮ, ಹವನ ನಡೆಸಿದ್ದಾರೆ. ಇದು ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೆ ಶಾಸಕ ಅಭಯ ಪಾಟೀಲ್ ತಮ್ಮ ಹೋಮ, ಹವನ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದು, ಅನೇಕ ಪ್ರಗತಿಪರರು ಇದನ್ನು ವಿರೋಧಿಸಿದ್ದಾರೆ.
ಬೆಳಗಾವಿ ಬಿಜೆಪಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ತಮ್ಮ ಕ್ಷೇತ್ರದಲ್ಲಿ ವಾತಾವರಣ ಶುದ್ಧಿ ಮಾಡಲು ಮುಂದಾಗಿದ್ದಾರೆ. ಕ್ಷೇತ್ರದಾದ್ಯಂತ ಹೋಮ ಮಾಡುವ ವಾತಾವರಣ ಶುದ್ಧಿ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಿನ್ನೆ ಸಂಜೆಯಿಂದ ಇದಕ್ಕೆ ಚಾಲನೆ ನೀಡಲಾಗಿದ್ದು, ಬಸವಣ್ಣ ಗಲ್ಲಿ, ಶಿವಾಜಿ ಉದ್ಯಾನದ ಬಳಿಯ ಹೋಮ ಮಾಡಲಾಗಿದೆ. ತಳ್ಳುವ ಗಾಡಿಯಲ್ಲಿ ಅಗ್ನಿ ಕುಂಡವನ್ನು ಇಟ್ಟು ಅದರಲ್ಲಿ ಹೋಮಕ್ಕೆ ಹಾಕುವ ವಸ್ತುಗಳನ್ನು ಹಾಕಿ ಇಡೀ ಬಡಾವಣೆಯಲ್ಲಿ ಓಡಾಡಲಾಗಿದೆ. ಇನ್ನು ಕಾರ್ಯಕರ್ತರು ಮುಖಂಡರು ಸಹ ತಮ್ಮ ಮನೆಗಳ ಮುಂದೆ ಅಗ್ನಿ ಕುಂಡವನ್ನು ಮಾಡಿಕೊಂಡು ಹೋಮ ಮಾಡಿದ್ದಾರೆ.
ಅಗ್ನಿ ಕುಂಡದಲ್ಲಿ ಭೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ , ಕವಡಿ ಧೂಪ ಹಾಗೂ ಲವಂಗ ಸೇರಿದಂತೆ ಅನೇಕ ವಸ್ತುಗಳನ್ನು ಹಾಕಲಾಗಿದೆ. ಒಂದೇ ದಿನ 50ಕ್ಕೂ ಹೆಚ್ಚು ಕಡೆಗಳಲ್ಲಿ ಹೋಮ ಮಾಡಲಾಗಿದ್ದು, ಕ್ಷೇತ್ರದ ಪ್ರತಿಯೊಂದು ಬಡಾವಣೆ, ಗಲ್ಲಿ ಹಾಗೂ ಮನೆಗಳ ಮುಂದೆ ಹೋಮ ಮಾಡುವಂತೆ ಬಿಜೆಪಿ ಶಾಸಕ ಅಭಯ ಪಾಟೀಲ್ ಕರೆ ನೀಡಿದ್ದಾರೆ. ಇನ್ನೂ ಹೋಮ ಕಾರ್ಯಕ್ರಮ ಜೂನ್ 15 ರವರಗೆ ನಡೆಸಲು ಸಹ ನಿರ್ಧಸಲಾಗಿದೆ.
ಮಾಧ್ಯಮಗಳಲ್ಲಿ ವಾತಾವರಣ ಶುದ್ಧಿ ನಡೆದ ಹೋಮದ ಬಗ್ಗೆ ಪರ, ವಿರೋಧದ ಚರ್ಚೆಗಳು ನಡೆದವು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ಕೊಟ್ಟ ಶಾಸಕ ಅಭಯ ಪಾಟೀಲ್, ಜನರೇ ಹೋಮ ಮಾಡಲು ಮುಂದೆ ಬಂದಿದ್ದಾರೆ. ವಿರೋಧ ಮಾಡುವವರು ಯಾಕೆ ವಿರೋಧ ಮಾಡ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಇದು ಮೌಢ್ಯತೆ ಅಲ್ಲ, ವೈಜ್ಞಾನಿಕವಾಗಿ ಹೋಮ, ಹವನ ಉಪಯೋಗ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ: ಕೊರೋನಾ ನಿಯಂತ್ರಣಕ್ಕೆ ಕಲಬುರ್ಗಿಯಲ್ಲಿ ಮೂರು ದಿನ ಸಂಪೂರ್ಣ ಲಾಕ್ಡೌನ್: ಜಿಲ್ಲಾಧಿಕಾರಿ
ಹೋಮ ಮಾಡಿರುವ ಬಡಾವಣೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸರ್ವೇ ಮಾಡಿಸ್ತೀವಿ. ಬಳಿಕ ಅಲ್ಲಿನ ಸ್ಥಿತಿ ಏನಿದೆ ಎಂಬ ಬಗ್ಗೆ ನೋಡೋಣ. ನಮ್ಮ ಪುರಾತನ ಸಂಸ್ಕೃತಿಯಲ್ಲಿ ಹೋಮ, ಹವನಕ್ಕೆ ಮಹತ್ವ ನೀಡಲಾಗಿದೆ ಎಂದು ಅಭಯ ಪಾಟೀಲ್ ಸಮರ್ಥನೆ ಮಾಡಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ