Goat Cart: ಬಂಡಿ ಎಳೆಯಲು ಎತ್ತುಗಳ ಬದಲು ಮೇಕೆಗಳನ್ನು ಹೂಡಿ ಎಲ್ಲರ ಗಮನ ಸೆಳೆದ ಚಿಕ್ಕೋಡಿ ರೈತ!

ದುಬಾರಿ ದುನಿಯಾದಲ್ಲಿ ರೈತ ಅಪ್ಪಾಸಾಬ ನೂತನ ಪ್ರಯೋಗ ಮಾಡಿ, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಹೆಚ್ವಿನ ಖರ್ಚು ಮಾಡಿ ಎತ್ತುಗಳ ಸಲಹುವ ಬದಲು ಮೇಕೆಗಳನ್ನ ಬಳಕೆ ಮಾಡಿ ತಮ್ಮ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿರುವ ವಿಶೇಷವಾಗಿದೆ. 

ಬಂಡಿಗೆ ಮೇಕೆಗಳನ್ನು ಕಟ್ಟಿರುವ ರೈತ.

ಬಂಡಿಗೆ ಮೇಕೆಗಳನ್ನು ಕಟ್ಟಿರುವ ರೈತ.

  • Share this:
ಚಿಕ್ಕೋಡಿ: ಗ್ರಾಮೀಣ ಭಾಗದಲ್ಲಿ ಈ ಹಿಂದೆ ಎತ್ತುಗಳನ್ನು ಹೂಡಿ ಎತ್ತಿನ ಬಂಡಿ ಮೂಲಕ ಜನರು ಸಂಚಾರ ಮಾಡುತ್ತಿದ್ದರು. ಅದರಲ್ಲೂ ಈಗಿನ ತರಹೆವಾರಿ ವಾಹನ ಬಂದಾಗಿನಿಂದ ಎತ್ತಿನ ಬಂಡಿಯಲ್ಲಿ ಜನ ಸಂಚರಿಸುವುದು ಅಪರೂಪವೇ ಆಗಿದೆ. ಇಂತಹ ಜಮಾನಾದಲ್ಲು ಇಲ್ಲೊಬ್ಬ ರೈತ ವಿಶೇಷ ಬಂಡಿಯನ್ನ ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಏನಪ್ಪಾ ವಿಶೇಷ ಅಂತಿರಾ. ಹಾಗಿದರೆ ಈ ಸ್ಟೋರಿಯನ್ನು ಒಮ್ಮೆ ಓದಿ. ಹೌದು, ಇಂತಹದೊಂದು ವಿಶೇಷ ಬಂಡಿ ಇರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯಲ್ಲಿ. ಇದು ಅಂತಿತಾ ಸಾಮಾನ್ಯವಾಗಿ ನಾವು, ನೀವು ನೋಡುವ ಎತ್ತಿನ  ಬಂಡಿ ಅಲ್ಲಾ. ಇದೊಂದು ಮೇಕೆ ಬಂಡಿ. ಹೌದು ವಿಚಿತ್ರ ಅನಿಸಿದ್ರು ಇದು ನಿಜ. ಚಿಕ್ಕೋಡಿ ರೈತ ಅಪ್ಪಾಸಾಬ ಚನ್ನನ್ನವರ ಎಂಬುವವರು ಇಂತಹದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ.

ಸಾಮಾನ್ಯವಾಗಿ ಮೇಕೆ ಅಂದ್ರೆ ಇವತ್ತಿನ ದಿನಮಾನದಲ್ಲಿ ಬರಿ ಮಟನ್ ರೂಪದಲ್ಲಿ ತಿನ್ನುವ ಆಹಾರ ಪದ್ದತಿಗೆ ಬೆಳೆಸಲಾಗುತ್ತದೆ. ಸಾಕಷ್ಟು ಜನ ಗೋಟ್ ಫಾರ್ಮ್ ಮಾಡಿ ಅವುಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಆದರೆ ಚಿಕ್ಕೋಡಿಯ ರೈತ ಅಪ್ಪಾಸಾಬ ಮಾತ್ರ ಗಂಡು ಮೇಕೆಗಳನ್ನ ಚಿಕ್ಕಂದಿನಿಂದಲೇ ಅವುಗಳ ಪಳಗಿಸಿ ಅವುಗಳನ್ನ ತಮ್ಮ ಕೃಷಿ ಚಟುವಟಿಗಳ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಜಮೀನು ಹೊಂದಿರುವ ರೈತ ತಮ್ಮ ಜಮೀನಿನಲ್ಲಿ ಈ ಗಂಡು ಮೇಕೆಗಳ ಮೂಲಕವೇ ಉಳುಮೆಯನ್ನು ಮಾಡಿಸುತ್ತಿದ್ದಾರೆ.

ಇನ್ನು ವಿಶೇಷ ಅಂದ್ರೆ  ಸಾಮಾನ್ಯವಾಗಿ ಎತ್ತುಗಳು, ಕೋಣ, ಕುದುರೆಗಳನ್ನ ಬಂಡಿಗೆ ಕಟ್ಟಿ ಸುತ್ತಾಡುವುದು ಸಾಮಾನ್ಯ. ಆದರೆ ರೈತ ಅಪ್ಪಾಸಾಬ ಮಾತ್ರ ಅಂತಹ ಯಾವುದೇ ಪ್ರಾಣಿಗಳನ್ನ ಉಪಯೋಗಿಸದೆ ತಾನು ಸಾಕಿದ ಗಂಡು ಮೇಕೆಗಳನ್ನೆ ಬಂಡಿಗೆ ಕಟ್ಟಿ ಗ್ರಾಮದಲ್ಲಿ ಸುತ್ತಾಡುತ್ತಾರೆ. ತೋಟದಿಂದ ಗ್ರಾಮಕ್ಕೆ ಹೋಗುವುದು, ನೀರು ತರುವುದು, ಮೇವು ತರುವುದು, ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕೂಡ ಇದೆ ಮೇಕೆ ಬಂಡಿಯಲ್ಲಿ. ಇನ್ನು ಈ ಮೇಕೆಗಳ ಬಂಡಿಯನ್ನ ನೋಡಲು ಅಕ್ಕ ಪಕ್ಕದ ಊರಿನ ಜನ ಬಂದು ಹೋಗುತ್ತಿದ್ದಾರೆ. ಮೇಕೆಗಳನ್ನ ಉಪಯೋಗಿಸುವ ಮೂಲಕ ರೈತ ಅಪ್ಪಾಸಾಬ ಯಾವ ರೀತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂಬುವುದನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.

ಇನ್ನು ರೈತ ಅಪ್ಪಸಾಬ ಚನ್ನವರ್ ಮಾತನಾಡಿ, ಕಳೆದ ಒಂದು ವರ್ಷದಿಂದ ನಾನು ಈ ರೀತಿ ಗಂಡು ಮೇಕೆಗಳ ಗಾಡಿ ಹುಡಿದ್ದೇನೆ. ಮೊದಲೆಲ್ಲಾ ನಾವು ಎತ್ತುಗಳಿಂದ ಗಾಡಿ ಹೂಡುತ್ತಿದ್ದೆವು. ಇವುಗಳನ್ನು ಒಮ್ಮೆ ನೋಡಬೇಕು ಅಂತ ಈ ರೀತಿ ಮಾಡಿದ್ದೆ. ಕಳೆದ ಒಂದು ವರ್ಷದಿಂದ ಎತ್ತಿನ ರೀತಿಯಲ್ಲಿ ಈ ಮೇಕೆಗಳು ಕೆಲಸ ಮಾಡುತ್ತಿವೆ. ಕೃಷಿ ಚಟುವಟಿಕೆಯಲ್ಲು ಸ್ವಲ್ಪ ಸಹಾಯ ಮಾಡುತ್ತವೆ. ಹೆಚ್ಚಾಗಿ ಸಂಚಾರಕ್ಕೆ ಮಾತ್ರ ಇವುಗಳ ಉಪಯೋಗ ಮಾಡುತ್ತಿದ್ದೇನೆ. ಇದರಿಂದ ನನಗೆ ಸಾಕಷ್ಟು ಅನುಕೂಲ ಆಗಿದೆ. ಇನ್ನು ಈ ಮೇಕೆ ಬಂಡಿ ನೋಡಲು ಅಕ್ಕಪಕ್ಕದ ಊರಿನ ಗ್ರಾಮಸ್ಥರು ಬರುತ್ತಿದ್ದಾರೆ. ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳಿಂದ ಈ ಗಂಡು ಮೇಕೆಗಳನ್ನು ಸಾಕಿ ಸಲುಹಿದ್ದೇನೆ. ಜವಾರಿ ತಳಿಯ ಮೇಕೆ ಆಗಿದ್ದರಿಂದ ಅಷ್ಟೊಂದು ಗಟ್ಟಿಮುಟ್ಟಾಗಿವೆ ಎಂದು ರೈತ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ದುಬಾರಿ ದುನಿಯಾದಲ್ಲಿ ರೈತ ಅಪ್ಪಾಸಾಬ ನೂತನ ಪ್ರಯೋಗ ಮಾಡಿ, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಹೆಚ್ವಿನ ಖರ್ಚು ಮಾಡಿ ಎತ್ತುಗಳ ಸಲಹುವ ಬದಲು ಮೇಕೆಗಳನ್ನ ಬಳಕೆ ಮಾಡಿ ತಮ್ಮ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿರುವ ವಿಶೇಷವಾಗಿದೆ.
Published by:HR Ramesh
First published: