ರಾಜಧಾನಿಯಲ್ಲಿ ಬಿಗಿಯಾಯ್ತು ಲಾಕ್​ಡೌನ್; ಅನಗತ್ಯವಾಗಿ ಓಡಾಡಿದರೆ ವಾಹನದ ಜೊತೆಗೆ ಸವಾರರ ಬಂಧನ!

ಇಷ್ಟು ದಿನ ಲಾಕ್​ಡೌನ್ ಇದ್ದರೂ ಜನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡ್ತಿದ್ದರು. ಆದರೆ ಇನ್ಮುಂದೆ ಕಾರಣ ಇಲ್ಲದೆ ಬೇಕಾಬಿಟ್ಟಿ ಓಡಾಡಲು ಹೋದರೆ ನೀವು ಜೈಲು ಸೇರುವುದು ಗ್ಯಾರಂಟಿ.

ತಪಾಸಣೆ ಪರಿಶೀಲಿಸಿದ ಪೊಲೀಸ್ ಕಮಿಷನರ್ ಕಮಲ ಪಂತ್

ತಪಾಸಣೆ ಪರಿಶೀಲಿಸಿದ ಪೊಲೀಸ್ ಕಮಿಷನರ್ ಕಮಲ ಪಂತ್

  • Share this:
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್​ಡೌನ್​ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಲಾಕ್​ಡೌನ್ ಟೈಟ್ ಮಾಡಲಾಗಿದ್ದು ಪೊಲೀಸರ ಕಠಿಣ ಕ್ರಮಕ್ಕೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಇಷ್ಟು ದಿನ ಲಾಕ್​ಡೌನ್ ಅಂದ್ರೆ ಜನರಿಗೆ ಏನೋ ಒಂಥರಾ ತಾತ್ಸಾರ. ಎಲ್ಲೊ ನುಗ್ಗಿ ಇನ್ನೇಲ್ಲೊ ಹೋಗಬಹುದು ಅಂತ ಓಡಾಡುತ್ತಿದ್ದರು. ಆದರೆ ಇನ್ಮುಂದೆ ಆ ರೀತಿ ಆಡ್ಡಾದಿಡ್ಡಿ ಓಡಾಡುವ ಮುನ್ನ ಹುಷಾರಾಗಿರಿ. ಯಾಕಂದರೆ ಇನ್ಮುಂದೆ ನಗರದಲ್ಲಿ ಲಾಕ್​ಡೌನ್ ಬಿಗಿಗೊಳಿಸಿ ಅನಗತ್ಯವಾಗಿ ಓಡಾಡುವ ಜನರಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ. 

ಕೊರೋನಾ ಮಹಾಮಾರಿ ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ಇಂತಹ ಸಮಯದಲ್ಲಿ ಸರ್ಕಾರ 14 ದಿನ ಲಾಕ್ ಡೌನ್ ಜಾರಿ ಮಾಡಿ ಸ್ವಲ್ಪ ಮಟ್ಟಿಗೆ ಸೋಂಕು ಹರಡುವುದನ್ನು ಕಂಟ್ರೋಲ್ ಮಾಡಿತ್ತು. ಲಾಕ್​ಡೌನ್ ವರ್ಕೌಟ್ ಆಗುತ್ತುದೆ ಅನ್ನೋದು ಗೊತ್ತಾಗ್ತಿದ್ದಂತೆ ಈಗ ಮತ್ತೆ 14 ದಿನ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಆದರೆ ಈ ಬಾರಿ ಬರೀ ಲಾಕ್ ಡೌನ್ ವಿಸ್ತರಣೆ ಮಾಡಿಲ್ಲ. ಜೊತೆಗೆ ಒಂದಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಈ ಸಲುವಾಗಿ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಂಡೋಪತಂಡಗಳಲ್ಲಿ ನಿಂತಿದ್ದರು. ಬೆಳಗ್ಗೆ 10 ಗಂಟೆ ಸಮಯ ಕಳೆಯುತ್ತಿದ್ದಂತೆ ರಸ್ತೆಗೆ ಇಳಿದ ಟ್ರಾಫಿಕ್ ಮತ್ತು ಲಾ ಆಂಡ್ ಆರ್ಡರ್ ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿ ವಾಹನಗಳನ್ನು ತಪಾಸಣೆ ಮಾಡಲು ಮುಂದಾದರು. ಪೊಲೀಸರ ಈ ಟೈಟ್ ಚೆಕಿಂಗ್ ನಿಂದಾಗಿ ಅನಗತ್ಯವಾಗಿ ಓಡಾಡುತ್ತಿದ್ದ ಸಾವಿರಾರು ಮಂದಿ ಪೊಲೀಸ್ ಜೀಪ್ ಹತ್ತಿ ಠಾಣೆಗೆ ಹೋದರು.

ಇನ್ನು ನಗರದಲ್ಲಿ ಲಾಕ್​ಡೌನ್ ಸಂಬಂಧ ಪೊಲೀಸರು ಕೈಗೊಂಡ ಕ್ರಮಗಳನ್ನ ಪರಿಶೀಲನೆ ನಡೆಸಲು ಪೊಲೀಸ್ ಕಮಿಷನರ್ ಕಮಲ್ ಪಂತ್ ಸಿಟಿ ರೌಂಡ್ಸ್ ನಡೆಸಿದರು. ಈ ವೇಳೆ ಬಿಇಎಲ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್​ನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು. ಇದನ್ನು ಕಂಡ ಕಮೀಷನರ್ ಬೈಕ್ ಆಡ್ಡಗಟ್ಟಿ ಇಬ್ಬರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಸ್ಥಳೀಯ ಪೊಲೀಸರನ್ನು ಕರೆಯಿಸಿ ಬೈಕ್ ಸೀಜ್ ಮಾಡಿ ಸವಾರರನ್ನು ವಶಕ್ಕೆ ಪಡೆದರು.

ಹೀಗೆ ಸಂಜಯನಗರದಲ್ಲಿ ಕಮಿಷನರ್ ರೌಂಡ್ಸ್ ವೇಳೆ ಹೊಟೇಲ್ ನಲ್ಲಿ ಟೀ, ಕಾಫಿ ಕುಡಿಯಲು ಅವಕಾಶ ನೀಡಲಾಗಿತ್ತು. ಇದನ್ನು ಕಣ್ಣಾರೆ ಕಂಡ ಪೊಲೀಸ್ ಆಯುಕ್ತರು ಖುದ್ದು ಹೊಟೇಲ್ ಬಳಿಗೆ ತೆರಳಿ ಅಲ್ಲಿನ ಸಿಬ್ಬಂದಿ ವಿರುದ್ಧ ಗರಂ ಆದರು. ಲಾಕ್​ಡೌನ್ ನಿಯಮಗಳನ್ನ ಉಲ್ಲಂಘಿಸಿ ಟೀ ಕೊಟ್ಟಿದ್ದೀರಿ. ಈಗಲೇ ಹೊಟೇಲ್ ಕ್ಲೋಸ್ ಮಾಡುವಂತೆ ತಾಕೀತು ಮಾಡಿದರು. ಇನ್ನೂ ಹೆಬ್ಬಾಳ ರಸ್ತೆಯಲ್ಲಿ ವಾಹನಗಳು ಬೀಡು ಬೀಸಾಗಿ ಓಡಾಡುತ್ತಿದ್ದವು. ಇದನ್ನು ಗಮನಿಸಿದ ಕಮಿಷನರ್ ರಸ್ತೆಯಲ್ಲಿ ಚೆಕ್ ಪೋಸ್ಟ್ ಯಾಕೆ ಹಾಕಿಲ್ಲ ಎಂದು ಜೆ ಸಿ ನಗರ ಎಸಿಪಿಯನ್ನು ಪ್ರಶ್ನೆ ಮಾಡಿದರು. ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಯಾಕೆ ತಪಾಸಣೆ ಮಾಡುತ್ತಿಲ್ಲ. ವಾಹನಗಳು ಹೇಗೆ ಓಡಾಡುತ್ತೇವೆ ನೋಡಿ ಎಂದು ಕ್ಲಾಸ್ ತೆಗೆದುಕೊಂಡರು. ಕೂಡಲೇ ಚೆಕಿಂಗ್ ಪಾಯಿಂಟ್ ಹಾಕುವಂತೆ ಸೂಚಿಸಿದರು.

ಬಳಿಕ ಲಾಕ್ ಡೌನ್ ಬಿಗಿಗೊಳಿಸುವ ಬಗ್ಗೆ ಮಾತನಾಡಿದ ಕಮಲ್ ಪಂತ್ ಇನ್ನೂ 14 ದಿನ ನಗರದಲ್ಲಿ ಲಾಕ್​ಡೌನ್ ಬಿಗಿಗೊಳಿಸಲಾಗುವುದು. ಇಂದು ನಗರದಲ್ಲಿ  1500 ವಾಹನಗಳು ಸೀಜ್ ಮಾಡಲಾಗಿದೆ. ಸುಮಾರು 500 ಕಡೆ ಚೆಕ್ ಪೋಸ್ಟ್ ಹಾಕಲಾಗಿದ್ದು ಎಲ್ಲೆಡೆ ತಪಾಸಣೆ ನಡೆಸಿ ವಾಹನಗಳನ್ನ ಸೀಜ್ ಮಾಡಲಾಗ್ತಿದೆ.

ಇದನ್ನು ಓದಿ: Jio: ಜಿಯೋದಿಂದ ಕರ್ನಾಟಕದಾದ್ಯಂತ ಹೆಚ್ಚುವರಿ 15 ಮೆಗಾಹರ್ಟ್ಸ್ ತರಂಗಾಂತರ ಅಳವಡಿಕೆ

ಎಂದರು. ಇನ್ಮುಂದೆ ವಾಹನಗಳ ಜಪ್ತಿ ಅಲ್ಲದೇ, ಸವಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಸೂಕ್ತ ಕಾರಣ ಮತ್ತು ದಾಖಲೆ ನೀಡದಿದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಷ್ಟು ದಿನ ಲಾಕ್​ಡೌನ್ ಇದ್ದರೂ ಜನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡ್ತಿದ್ದರು. ಆದರೆ ಇನ್ಮುಂದೆ ಕಾರಣ ಇಲ್ಲದೆ ಬೇಕಾಬಿಟ್ಟಿ ಓಡಾಡಲು ಹೋದರೆ ನೀವು ಜೈಲು ಸೇರುವುದು ಗ್ಯಾರಂಟಿ.
Published by:HR Ramesh
First published: