ಬೆಳಗಾವಿ(ಜೂ. 19): ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ 5 ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಇದರಿಂದ ನದಿ,ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರಮುಖವಾಗಿ ಘಟಪ್ರಭಾ, ಮಲಪ್ರಭಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು, ಕರ್ನಾಟಕದ ನಯಾಗಾರ ಫಾಲ್ಸ್ ಎಂದೇ ಖ್ಯಾತಿ ಗಳಿಸಿರುವ ಗೋಕಾಕ್ ಫಾಲ್ಸ್ಗೆ ಜೀವ ಕಳೆ ಬಂದಿದೆ. ಬೆಳಗಾವಿ ಬಳಿಯ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ಇಂದ್ರಾಣಿ ಭತ್ತ ಜಲವೃತ್ತವಾಗಿದ್ದು, ರೈತರಿಗೆ ಆತಂಕ ಸೃಷ್ಟಿಸಿದೆ.
ಪಶ್ಚಿಮ ಘಟ್ಟಪ್ರದೇಶದಲ್ಲಿ ಈ ವರ್ಷ ಮುಂಗಾರು ಮಳೆ ವ್ಯಾಪಕವಾಗಿ ಪ್ರಬಲವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ನಿರಂತರ ವರ್ಷಧಾರೆ ಮುಂದುವರೆದಿದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಿಲ್ಲೆ ನದಿ, ಹಳ್ಳಗಳು ತುಂಬಿಕೊಂಡಿವೆ. ಬೆಳಗಾವಿ ಬಳಿ ಹರಿಯುವ ಬಳ್ಳಾರಿ ನಾಲಾ ಒಳ ಹರಿವಿನಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾಮನೆ, ಯಳ್ಳೂರು, ವಡಗಾವಿ, ಬಸವನ ಕುಡಚಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ಬೆಳೆ ಜಲಾವೃತ್ತವಾಗಿದೆ. ತರಕಾರಿ ಹಾಗೂ ಭತ್ತ ಬೆಳೆಯಲ್ಲಿ ನೀರು ತುಂಬಿಕೊಂಡಿದ್ದು, ಬೆಳೆ ನಾಶದ ಭೀತಿ ರೈತರನ್ನು ಕಾಡುತ್ತಿದೆ.
ಇದನ್ನೂ ಓದಿ:Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ; ಬೆಳಗಾವಿಯಲ್ಲಿ ಪ್ರವಾಹ ಭೀತಿ
ಇದನ್ನೂ ಓದಿ:Karnataka Unlock 2.O: ಸೋಮವಾರದಿಂದ ಬಸ್, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅನುಮತಿ?; ಇಂದು ಸಿಎಂ ಮಹತ್ವದ ನಿರ್ಧಾರ
ಕರ್ನಾಟಕದ ನಯಾಗರಾ ಫಾಲ್ಸ್ ಎಂದೇ ಖ್ಯಾತಿ ಪಡೆದಿರೋ ಗೋಕಾಕ್ ಫಾಲ್ಸ್ ಗೆ ಸದ್ಯ ಜೀವ ಕಳೆ ಬಂದಿದೆ. ಕಂದು ಬಣ್ಣದ ರಾಶಿ ರಾಶಿ ನೀರು 171 ಮೀಟರ್ ಎತ್ತರದಿಂದ ಧುಮುಕುವ ದೃಶ್ಯ ಮನಮೋಹಕವಾಗಿದೆ. ಪ್ರತಿವರ್ಷ ಈ ಜಲರಾಶಿ ನೋಡಲು ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರವಾಸಿಗರು ಬರುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಭೇಟಿ ಇಲ್ಲಿನ ಜಲಪಾತ ನೋಡಿ ಆನಂದಿಸುತ್ತಿದ್ದಾರೆ.
ಘಟಪ್ರಭಾ ಜಲಾಶಯಕ್ಕೆ 33,732 ಕ್ಯೂಸೆಕ್ಸ್ ನೀರು ಒಳ ಹರಿವು ಇದೆ. ಮಲಪ್ರಭಾ ಜಲಾಶಯಕ್ಕೆ 2600 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲಾಡಳಿತ ತುರ್ತು ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆಯ ಅಬ್ಬರದಿಂದ ಚಿಕ್ಕೋಡಿ ವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಹಾಗೂ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ