Belagavi Rains: ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿ ಪ್ರವಾಹಕ್ಕೆ ಭಾಗಶಃ ಮುಳುಗಿದ ಗೋಕಾಕ್ ನಗರ..!

ಗೋಕಾಕ್ ನಗರಕ್ಕೆ ಸದ್ಯ ಜಲದಿಗ್ಬಂಧನ ಆಗಿದ್ದು ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಜಲಾವೃತವಾಗಿವೆ. ಗೋಕಾಕ್- ಕೊಣ್ಣೂರು, ಗೋಕಾಕ್ - ಘಟಪ್ರಭಾ, ಗೋಕಾಕ್- ಯರಗಟ್ಟಿ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಭಾಗಶಃ ಮುಳುಗಿರುವ ಗೋಕಾಕ್ ನಗರ

ಭಾಗಶಃ ಮುಳುಗಿರುವ ಗೋಕಾಕ್ ನಗರ

  • Share this:
ಬೆಳಗಾವಿ(ಜುಲೈ 25): ಪಶ್ಚಿಮ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟದಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಘಟಪ್ರಭಾ, ಮಾರ್ಕಂಡೇಯ, ಹಿರೇಣ್ಯಕೇಶಿ ಹಾಗೂ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಎಲ್ಲಾ ನದಿಗಳ ನೀರು ಸೇರಿ 1.20 ಲಕ್ಷ ಕ್ಯೂಸೆಕ್ ನೀರಿನ ಪರಿಣಾಮವಾಗಿ ಗೋಕಾಕ್ ನಗರ ಭಾಗಶಃ ಮುಳುಗಿ ಹೋಗಿದೆ. ನಗರದಲ್ಲಿ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನ ಸಂಬಂಧಿಕರ ಮನೆಗಳು ಹಾಗೂ ಕಾಳಜಿ ಕೇಂದ್ರ ಸೇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋಕಾಕ್ ನಗರ ಅಷ್ಟೇ ಅಲ್ಲದೇ ತಾಲೂಕಿನ 8ಕ್ಕೂ ಹೆಚ್ಚು ಗ್ರಾಮಗಳಿಗೆ ಸದ್ಯ ಜಲದಿಗ್ಭಂಧನ ಉಂಟಾಗಿದೆ. ಜನ ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ಹೊರಟು ಹೋಗಿದ್ದಾರೆ.

ಘಟಪ್ರಭಾ ಜಲಾಶಯದಿಂದ ನೀರು ಹಾಗೂ ಮಾರ್ಕಂಡೇಯ, ಹಿರಣ್ಯಕೇಶಿ ನದಿ ಹಾಗೂ ಬಳ್ಳಾರಿ ನಾಲಾ ನೀರು ಸೇರಿಕೊಂಡು ಗೋಕಾಕ್ ಬಳಿಯಿಂದ ಹರಿದು ಹೋಗುತ್ತಿದೆ. ಇದರಿಂದ ಕೊಣ್ಣುರು ಪಟ್ಟಣದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಗೋಕಾಕ್ ನಗರದ ಮಟನ್ ಮಾರ್ಕೆಟ್, ಭೋಜಗಾರ್ ಗಲ್ಲಿ, ಉಪ್ಪಾರ ಗಲ್ಲಿ, ಗುರವಾರ್ ಪೇಟೆ ಸೇರಿ ಅನೇಕ ಬಡಾವಣೆಗಳ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮನೆಯ ವಸ್ತುಗಳನ್ನು ಬಿಟ್ಟು ಜನ ಪ್ರಾಣ ಭಯದಿಂದ ಓಡಿಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗೋಕಾಕ್ ನಗರಕ್ಕೆ ಸದ್ಯ ಜಲದಿಗ್ಬಂಧನ ಆಗಿದ್ದು ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಜಲಾವೃತವಾಗಿವೆ. ಗೋಕಾಕ್- ಕೊಣ್ಣೂರು, ಗೋಕಾಕ್ - ಘಟಪ್ರಭಾ, ಗೋಕಾಕ್- ಯರಗಟ್ಟಿ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಗೋಕಾಕ್ ನಗರದ ನಿಮ್ರಾ ಆಸ್ಪತ್ರೆ ಸಹ ಜಲಾವೃತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರೋ ರೋಗಿಗಳನ್ನು ಬಿಡುಗಡೆ ಮಾಡಲಾಯಿತು. ನೀರಿನಲ್ಲಿ ರೋಗಿಗಳು ನಡೆದುಕೊಂಡು ಹೋಗಿದ್ದು, ಜತೆಗೆ ಬಂದ ಪೋಷಕರಿಗೆ ಸಹ ಆತಂಕ ಎದುರಾಗಿತ್ತು.

ಇದನ್ನೂ ಓದಿ:Flood Alert - ತುಂಗಭದ್ರಾ ಪ್ರವಾಹ ಭೀತಿ; ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಆಡಳಿತ ಸೂಚನೆ

ಗೋಕಾಕ್ ತಾಲೂಕಿನ 8 ಕ್ಕೂ ಹೆಚ್ಚು ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿವೆ. ಅಡಿಬಟ್ಟಿ, ಮೆಳವಂಕಿ, ಹಡಗಿನಾಳ, ಉದಗಟ್ಟಿ, ತಳಕಟನಾಳ್ ಸೇರಿದಂತೆ ಅನೇಕ ಗ್ರಾಮಗಳು ನಡುಗಡ್ಡೆಯಾಗಿವೆ. ಇಲ್ಲಿನ ಜನ ಗ್ರಾಮವನ್ನು ಬಿಟ್ಟು ತಮ್ಮ ಅಗತ್ಯ ವಸ್ತುಗಳ ತೆಗೆದುಕೊಂಡು ಹೊರಗೆ ಬಂದಿದ್ದಾರೆ. ಕಾಳಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ.

ಘಟಪ್ರಭಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಗೋಕಾಕ್ ಫಾಲ್ಸ್ ಗೆ ಜೀವ ಕಳೆ ಬಂದಿದೆ 178 ಅಡಿ ಎತ್ತರಿಂದ ನೀರು ಧುಮ್ಮಿಕುತ್ತಿದ್ದು, ನೋಡಲು ಅತ್ಯಂತ ಮನಮೋಹಕವಾಗಿದೆ. ಆದರೆ ಮಳೆ ಹಾಗೂ ಪ್ರವಾಹದಿಂದ ಫಾಲ್ಸ್ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಆಗಿವೆ. ಸಂಜೆಯ ವೇಳೆಗೆ ಮಾರ್ಕಂಡೇಯ ನದಿಯಲ್ಲಿ ಪ್ರವಾಹ ಸ್ಥಿತಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಘಟಪ್ರಭಾ ನದಿಯಲ್ಲಿ ಅದೇ ಸ್ಥಿತಿ ಇದೆ. ಇದು ಗೋಕಾಕ್ ಜನರ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ (ಜು.25 ಮತ್ತು 26)ರಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಮುಂದಿನ 4-5 ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಮಳೆರಾಯ ಕೊಂಚ ವಿರಾಮ ಕೊಡಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್​.ಪಾಟೀಲ್​ ತಿಳಿಸಿದ್ದಾರೆ.

ಇದನ್ನೂ ಓದಿ:Karnataka Rains Today: ರಾಜ್ಯದಲ್ಲಿ ಇನ್ನೂ 5 ದಿನ ಮಳೆರಾಯನ ಅಬ್ಬರ; ಇಂದು ಬೆಳಗಾವಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಭೇಟಿ

ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗಿನಿಂದ 501.6 ಮಿ.ಮೀ ಮಳೆ ಸುರಿದಿದೆ. ಪ್ರತೀ ವರ್ಷ ಸಾಮಾನ್ಯವಾಗಿ 403.8 ಮಿ.ಮೀ ಮಳೆಯಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಶೇ.24ರಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ರಾತ್ರಿ 8.30ರವರೆಗೆ 24.4 ಮಿ.ಮೀ. ಮಳೆ ದಾಖಲಾಗಿದೆ. ಹೆಚ್​ಎಎಲ್​ ಏರ್​ಪೋರ್ಟ್​​ ಒಂದರಲ್ಲೇ 16.6 ಮಿ.ಮೀ ಮಳೆ ಸುರಿದಿದೆ.
Published by:Latha CG
First published: