Belgaum- ಎಂಇಎಸ್ ಪುಂಡಾಟ; 27 ಮಂದಿ ಬಂಧನ, ನ್ಯಾಯಾಂಗ ಕಸ್ಟಡಿಯಲ್ಲಿ ಪುಂಡರು

27 MES workers arrest: ಶಿವಾಜಿ ಮಹಾರಾಜರ ಮೂರ್ತಿಗೆ ಅವಮಾನವಾಯಿತೆಂಬ ನೆವ ಮಾಡಿಕೊಂಡು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಹಿಂಸಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಬಂಧನ ಆಗಿದೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ

ಸಂಗೊಳ್ಳಿ ರಾಯಣ್ಣ ಪ್ರತಿಮೆ

  • Share this:
ಬೆಳಗಾವಿ, ಡಿ. 18: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿಕೋಪಕ್ಕೆ ತಿರುಗಿದ್ದು,‌ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಅಪಮಾನ ಮಾಡಿದ್ದಾರೆ ಎಂದು ನಿನ್ನೆ ರಾತ್ರಿ ಸಾವಿರಾರು ಜನ ಸೇರಿದ್ದರು. ವಾಪಸ್ ಹೋಗುವ ಸಂದರ್ಭದಲ್ಲಿ ನೂರಾರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ‌ದುಷ್ಕರ್ಮಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು 27 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ನಾನು‌ ಬದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಳಗಾವಿ ಗಡಿ, ಭಾಷೆ ವಿಚಾರವಾಗಿ ಕಿರಿಕ್ ಮಾಡೋ ಎಂಇಎಸ್ ಸಂಘಟನೆ ಮತ್ತೊಮ್ಮೆ ಉದ್ಧಟನ ಪ್ರದರ್ಶನ ಮಾಡಿದೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಅಪಮಾನ ಆಗಿದೆ ಎಂದು ಏಕಾಏಕಿ ಸಾವಿರಾರು ಜನ ಬೀದಿಗೆ ಇಳಿದಿದ್ದರು. ಬೆಳಗಾವಿಯ ಧರ್ಮವೀರ ಸಂಭಾಜೀ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲಿಂದ ವಾಪಸ್ ಹೋಗೊ ಸಂದರ್ಭದಲ್ಲಿ ಸರ್ಕಾರದ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜತಗೆ ಕನ್ನಡದ ಅನೇಕ ಬೋರ್ಟ್ ಗಳನ್ನು ಕಿತ್ತಿ ಎಸೆದಿದ್ದಾರೆ.

ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಂತರ ಅನಗೋಳದ ಕನಕದಾಸ‌ ಲೇಔಟ್ ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿದ್ದಾರೆ. ಮೂರ್ತಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.‌ ಈ ವಿಚಾರ ತಿಳಿದ ಸ್ಥಳೀಯರು ಇಂದು ಬೆಳಗ್ಗೆ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರಣಿ ಮಾಡಿದರು. ಘಟನೆಯ ಬಗ್ಗೆ ಮಾತನಾಡಿದ ಸ್ಥಳೀಯ ಶಾಸಕ ಅಭಯ ಪಾಟೀಲ್, ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ಎಂಇಎಸ್ ಪುಂಡಾಡಿಕೆ: ಕನ್ನಡಪರ ಸಂಘಟನೆಗಳಿಂದ ನಾಳೆ ಬೆಳಗಾವಿ ಚಲೋ; ಕುಂದಾನಗರಿಗೆ ಕನ್ನಡಿಗರ ಪ್ರವಾಹ

ಬೆಳಗಾವಿಯಲ್ಲಿ ಇಂದು ರಾಯಣ್ಣ ಪ್ರತಿಮೆಗೆ ಅವಮಾನವನ್ನು ತೀವ್ರವಾಗಿ ಖಂಡಿಸಲಾಯಿತು. ಚನ್ನಮ್ಮ ವೃತ್ತದಿಂದ ಪೀರನವಾಡಿ ವರೆಗೆ ನಡೆದ ರ‌್ಯಾಲಿಯನ್ನು ಪೊಲೀಸರು ಅರ್ಧ ದಾರಿಯಲ್ಲಿ ತಡೆದರು. ಚನ್ನಮ್ಮ ವೃತ್ತದಲ್ಲಿ ಧರಣಿ ಮಾಡುತ್ತಿದ್ದ ಹೋರಾಟಗಾರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನೂ ಘಟನೆ ನಡೆದ ಸ್ಥಳ, ಪೀರನವಾಡಿ ವೃತ್ತ, ಚನ್ನಮ್ಮ ವೃತ್ತದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಇನ್ನು, ಶಿವಾಜಿ ಉದ್ಯಾನದ ಬಳಿ ಸಹ ಎಂಇಎಸ್ ಕಾರ್ಯಕರ್ತರು ಹೈಡ್ರಾಮಾ ನಡೆಸಿದರು. ಶಿವಾಜಿ ಮೂರ್ತಿಗೆ ಕ್ಷೀರಾಭಿಷೇಕ ನಡೆಸಿದರು.

ಎಂಇಎಸ್ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಭರವಸೆ:

ಬೆಳಗಾವಿಯಲ್ಲಿ ‌ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಪೊಲೀಸರು ಎಲ್ಲಾ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಂಇಎಸ್ ಬಗ್ಗೆ ಕಠಿಣ ನಿಲುವು ತೆದುಕೊಳ್ಳುತ್ತೇವೆ. ಮಹಾರಾಷ್ಟ್ರ ಕನ್ನಡಿಗರು ರಕ್ಷಣೆ ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಇಂದು ಚರ್ಚೆ ನಡೆಯಲಿದೆ. ಡಿಜಿ, ಹೋಂ ಕಾರ್ಯದರ್ಶಿ ಮಾತುಕತೆ ನಡೆಸಲಿದ್ದಾರೆ. ಅವಶ್ಯಕತೆ ಬಿದ್ದರೆ ನಾನು‌ ಮಹಾರಾಷ್ಟ್ರದ ಜತೆಗೆ ಮಾತನಾಡುತ್ತೇನೆ. ಬೆಳಗಾವಿ ಘಟನೆಯಲ್ಲಿ ಪೊಲೀಸ್ ವೈಫಲ್ಯದ ಪ್ರಶ್ನೆ ಇಲ್ಲ. ರಾತ್ರಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ರಾತ್ರಿ ಬಂದು ಗಲಾಟೆ ಮಾಡಿದ್ದು ಪುರುಷಾರ್ಥನಾ? ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೃಹ ಸಚಿವರಿಗೆ ಗಲಾಟೆ ಬಗ್ಗೆ ಈ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಹಾಸನ ಕ್ಷೇತ್ರಕ್ಕೆ ಬಂದ್ರೆ ರಾಜಕೀಯ ಏನಂತ ಹೇಳಿಕೊಡ್ತೀನಿ: ಗೌಡ್ರ ಮೊಮ್ಮಗನಿಗೆ ಪ್ರೀತಂಗೌಡ ಟಾಂಟ್

ಬೆಳಗಾವಿಯಲ್ಲಿ ಸದ್ಯ ಬೂದಿ‌‌ ಮುಚ್ಷಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ಸಂಬಂಧ 27 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಅನೇಕರನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಗರದಲ್ಲಿ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಸರ್ಕಾರವೇ ಬೆಳಗಾವಿ ಇರೋ ಸಂದರ್ಭದಲ್ಲಿ ಪುಂಡಾಟ ಮಾಡಿರೋ ಎಂಇಎಸ್ ಸಂಘಟನೆಯನ್ನು ಇನ್ನಾದರೂ ಸರ್ಕಾರ ನಿಷೇಧ ಹೇರಲಿದೆಯೆ ಎಂದು ಕಾದು ನೋಡಬೇಕು.

ಬೆಳಗಾವಿ ಚಲೋ:

ಅತ್ತ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಸೇರಿ ಬೆಳಗಾವಿ ಚಲೋ ಹಮ್ಮಿಕೊಂಡಿವೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ರ್ಯಾಲಿಗಳು ಹೊರಟು ಸೋಮವಾರ ಬೆಳಗ್ಗೆ ಬೆಳಗಾವಿ ತಲುಪಲಿವೆ. ಎಂಇಎಸ್ ಮತ್ತು ಶಿವಸೇನಾ ಸಂಘಟನೆಗಳನ್ನ ರಾಜ್ಯದಲ್ಲಿ ನಿಷೇಧಿಸಬೇಕೆಂಬ ಪ್ರಮುಖ ಬೇಡಿಕೆ ಹಾಗೂ ಎಂಇಎಸ್ ಉದ್ಧಟತನವನ್ನು ಖಂಡಿಸಲು ಬೆಳಗಾವಿ ಚಲೋ ನಡೆಸಲಾಗುತ್ತಿದೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: