ಬೆಳಗಾವಿ, ನ. 23: ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 2 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಅಖಾಡ ಭಾರೀ ರಂಗೇರುತ್ತಿದೆ. ಕಾಂಗ್ರೆಸ್ನಿಂದ ಹೆಬ್ಬಾಳಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು, ಪಕ್ಷೇತರರಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಮೂಲಕ ಬೆಳಗಾವಿಯಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.
ಸತೀಶ್ ಜಾರಕಿಹೊಳಿ ಹೊರತು ಪಡಿಸಿದ್ರೆ ಉಳಿದೆಲ್ಲ ಜಾರಕಿಹೊಳಿ ಬ್ರದರ್ಸ್ ಲಖನ್ ಬೆನ್ನಿಗೆ ನಿಂತಿದ್ದಾರೆ. ಆದರೆ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ಮಾತ್ರ ಕುಟುಂಬಕ್ಕಿಂತ ಪಕ್ಷವೇ ಮುಖ್ಯ ಎಂದಿದ್ದಾರೆ.
ಇದೇ ವೇಳೆ, “ಸಿಂಗಲ್ ಅಭ್ಯರ್ಥಿ, ಸಿಂಗಲ್ ಮತ ಎಂಬುದು ಕಾಂಗ್ರೆಸ್ ತತ್ವ” ಎಂದಿರುವ ಸತೀಶ್ ಜಾರಕಿಹೊಳಿ, ತಮ್ಮ ಕಿರಿಯ ಸಹೋದರ ಲಖನ್ಗೆ ಟಾಂಟ್ ನೀಡಿದ್ದಾರೆ. “ಇದೇ ಲಖನ್ ಮತ್ತು ರಮೇಶ ಜಾರಕಿಹೊಳಿ ಅವರುಗಳು ಲೋಕಸಭಾ ಉಪಚುವಾವಣೆಯಲ್ಲಿ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಈಗಲೂ ಇದೆ” ಎಂದು ಮಾಜಿ ಸಚಿವರೂ ಆದ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಲಖನ್ ಜಾರಕಿಹೊಳಿ ಚುನಾವಣೆ ನಿಲ್ಲೋದು ಡೌಟು. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ನಾಮಪತ್ರ ವಾಪಸ್ ಪಡೆಯುತ್ತಾರೆ. ಲಖನ್ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆಯೇ ಇಲ್ಲ… ಕುಟುಂಬದ ಆಧಾರದ ಮೇಲೆ ಅಲ್ಲ, ಪಕ್ಷದ ಆಧಾರದ ಮೇಲೆ ನಡೆಯುವ ಚುನಾವಣೆ ಇದು. ಜಾರಕಿಹೊಳಿ ಕುಟುಂಬ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ನಡೆಯುವ ಫೈಟ್ ಅಲ್ಲ” ಎಂದು ಸತೀಶ್ ಜಾರಕಿಹಳಿ ಸ್ಪಷ್ಟಪಡಿಸಿದ್ದಾರೆ.
ರಮೇಶ್ ಕೂಲ್ ಆಗಿರುವುದು ನೋಡಿಯೇ ಇಲ್ಲ:
ಸಹೋದರ ರಮೇಶ್ ಜಾರಕಿಹೊಳಿ ಅವರಿಗೂ ಸತೀಶ್ ಟಾಂಟ್ ಕೊಟ್ಟಿದ್ಧಾರೆ. “ರಮೇಶ್ ಜಾರಕಿಹೊಳಿ ಯಾವಾಗಲೂ ಸೀರಿಯಸ್ ಆಗಿಯೇ ಇರುತ್ತಾರೆ. ಅವರು ಥಂಡಾ ಆಗಿರೋದು ನಾವು, ನೀವು ಎಂದೂ ನೋಡಿಲ್ಲ” ಎಂದ ಕಾಂಗ್ರೆಸ್ ಮುಖಂಡ, ತಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಒಂದೇ ಮತ, ಒಂದೇ ಅಭ್ಯರ್ಥಿ ಇದ್ದಾರೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡಿದ್ದಾರೆ. ಚಾಲೆಂಜ್ ಇರುವುದು ಅವರಿಗೆ ಎಂದು ಹೇಳಿದ್ಧಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಸೇಫ್ ಗೇಮ್:
ಇನ್ನೊಂದೆಡೆ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಸಹೋದರರ ರಾಜಕೀಯ ಯುದ್ಧದಲ್ಲಿ ಸೇಫ್ ಗೇಮ್ ಪ್ಲೇ ಮಾಡಿದ್ದಾರೆ. “ಸತೀಶಣ್ಣಾ ಸೇರಿದಂತೆ ಎಲ್ಲರ ಆಶೀರ್ವಾದ ನಮ್ಮ ಮೇಲೆ ಇದ್ದು, ನಾವೇ ಗೆಲ್ಲೋದು” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: PM Kisan Scheme ಹಣ 16 ಸಾವಿರ ರೂಗೆ ಹೆಚ್ಚಿಸಲು ಕೃಷಿ ಬೆಲೆ ಆಯೋಗ ಶಿಫಾರಸು; ಇಲ್ಲಿದೆ ಅದರ ಸಲಹೆಗಳ ಪಟ್ಟಿ
ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಕ್ಷ್ಮೀ ಹೆಬ್ಬಾಳಕರ್ ಸಹೋದರನನ್ನ ಶತಾಯ ಗತಾಯ ಸೋಲಿಸಲು ಪಣ ತೊಟ್ಟಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿಯವರನ್ನ ಕಣಕ್ಕಿಳಿಸಿದ್ದಾರೆ.
“ನಾವು ಲಖನ್ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಎರಡನೇಯದು ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಏನೇನು ಮಾಡಬೇಕು ಎಂಬುದನ್ನು ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕರೂ ಆದ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಥೂ ಎಂದ ಸಾಹುಕಾರ್:
ಇದೇ ವೇಳೆ ಇದು ಹೆಬ್ಬಾಳಕರ್ vs ಜಾರಕಿಹೊಳಿ ಚುನಾವಣೆಯೇ ಎಂಬ ಪ್ರಶ್ನೆಗೆ ಕೆರಳಿದ ರಮೇಶ ಜಾರಕಿಹೊಳಿ, ಥೂ ಎನ್ನುವ ಮೂಲಕ ಕಿಡಿಕಾರಿದರು.
ಇದನ್ನೂ ಓದಿ: ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?
ಇನ್ನು, ಲಖನ್ ನಾಮಪತ್ರ ಹಿಂಪಡಿತಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಲಖನ್ ಜಾರಕಿಹೊಳಿ, ಸತೀಶ್ ಏನೇ ಹೇಳಿದ್ರೂ ಅವರು ನಮ್ಮ ಅಣ್ಣ. ಆದರೆ, ಲಖನ್ ನಾಮಪತ್ರ ಹಿಂಪಡೆಯುವ ಚಾನ್ಸೇ ಇಲ್ಲ ಎಂದಿದ್ದಾರೆ.
ಲಖನ್ ಎಂಟ್ರಿಯಿಂದ ಬೆಳಗಾವಿ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಅವರು ಗೆಲ್ತಾರೆ, ಇವರು ಗೆಲ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಆದ್ರೆ ಮತದಾರ ಚಿತ್ತ ಯಾರತ್ತ ಎಂಬುದಕ್ಕೆ ಸ್ವಲ್ಪ ಕಾಯಲೇಬೇಕಿದೆ. ಲಖನ್ ಜಾರಕಿಹೊಳಿ ಕಾಂಗ್ರೆಸ್ಗೆ ಪೆಟ್ಟು ಕೊಡ್ತಾರಾ, ಬಿಜೆಪಿಯ ಮತ ಪೆಟ್ಟಿಗೆಗೆ ಕೈ ಹಾಕುತ್ತಾರಾ ಎನ್ನುವುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ.
ವರದಿ: ಚಂದ್ರಕಾಂತ ಸುಗಂಧಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ