ಬೆಳಗಾವಿ (ಏ. 30); ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಉಪಚುನಾವಣೆ ನಡೆದಿತ್ತು. ಚುನಾವಣೆ ಮತ ಎಣಿಕೆ ಮೇ 2ರಂದು ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಮತ ಎಣಿಕೆ ಕಾರ್ಯ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು, ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಬೆಳಗಾವಿ ನಗರದ ಟಿಳಕವಾಡಿಯ ಆರ್ ಪಿ ಡಿ ಮಹಾವಿದ್ಯಾಲಯದಲ್ಲಿ ಮೇ 2ರ ಬೆಳಿಗ್ಗೆ 8 ಗಂಟೆಯಿಂದ ಇವಿಎಂ ಮತ ಎಣಿಕೆ ಆರಂಭಗೊಳ್ಳಲಿದೆ. ಚುನಾವಣಾ ವೀಕ್ಷಕರು ಹಾಗೂ ಮತ ಎಣಿಕೆ ಏಜೆಂಟರುಗಳ ಸಮ್ಮುಖದಲ್ಲಿ ಅಂದು ಬೆಳಗ್ಗೆ 7 ರಿಂದ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಸ್ಟ್ರಾಂಗ್ ರೂಮ್ ತೆರೆಯಲಾಗುವುದು. ಸರಿಯಾಗಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಅದೇ ರೀತಿ 8 ಗಂಟೆಗೆ ಹೇರೆಕರ್ ಬಿಲ್ಡಿಂಗ್ ನ ಹಾಲ್ ಸಂಖ್ಯೆ -40 ರಲ್ಲಿ ಪೋಸ್ಟಲ್ ಬ್ಯಾಲೆಟ್ ಹಾಗೂ ಇಪಿಬಿಎಸ್ ಮತ ಎಣಿಕೆ ಕೂಡ ಆರಂಭಗೊಳ್ಳಲಿದೆ.
ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಪ್ರತಿ ಕೊಠಡಿಗೆ ಎರಡು ಟೇಬಲ್ ಗಳನ್ನು ಅಳವಡಿಸಲು ಚುನಾವಣಾ ಆಯೋಗದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಎರಡು ಕೊಠಡಿಗಳಂತೆ 16 ಮತ್ತು ಪೋಸ್ಟಲ್ ಬ್ಯಾಲೆಟ್-ಇಟಿಪಿಬಿಎಸ್ ಮತ ಎಣಿಕೆಯ ಒಂದು ಕೊಠಡಿ ಸೇರಿದಂತೆ ಒಟ್ಟು 17 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ.
ಅಭ್ಯರ್ಥಿಗಳು, ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಅವರನ್ನು ಕೋವಿಡ್-19 ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಇದನ್ನು ಓದಿ: Vaccine Shortage: ಲಸಿಕೆ ಕೊರತೆಯಿಲ್ಲ ಎಂದು ಕೇಂದ್ರ ಹೇಳುತ್ತಿದೆ, ಆದರೆ ಲಸಿಕೆ ಅಭಿಯಾನ ಮುಂದೂಡಿದ 8 ರಾಜ್ಯಗಳು!
ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಇಲಾಖೆಯು ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಿದ್ದು, 450 ಸಿಬ್ಬಂದಿಯನ್ನು ನಿಯೋಜಿಸಿರುತ್ತದೆ. ಅಂದು ಜನತಾ ಕರ್ಫ್ಯೂ ಇರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಪೊಲೀಸ್ ಇಲಾಖೆಯು ನಿಗದಿಪಡಿಸಿದ ಮಾರ್ಗದಲ್ಲಿ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಏಜೆಂಟರು, ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ತಮಗೆ ನೀಡಿರುವ ಪ್ರವೇಶಪತ್ರ ಅಥವಾ ಗುರುತಿನ ಚೀಟಿ ತೋರಿಸಿ ಮತ ಎಣಿಕೆ ಕೇಂದ್ರ ಬರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ