kannada rajyotsava: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಲು ಹೋರಾಟಗಾರರ ಪಟ್ಟು

ಈ ಬಾರಿ ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿಗೆ ವಿಜಯೋತ್ಸವ ಆಗಿದೆ. ವಿಜಯೋತ್ಸವದ ಸಂಭ್ರಮಾಚರಣೆ ಪ್ರತಿಕವಾಗಿ ರಾಜ್ಯೋತ್ಸವದಂದು ಅದ್ಧೂರಿ ಮೆರವಣಿಗೆ ಅವಕಾಶ ನೀಡಬೇಕೆಂದು ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿವೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬೆಳಗಾವಿ ಕನ್ನಡ ಪರ ಸಂಘಟನೆ ಮುಖಂಡರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬೆಳಗಾವಿ ಕನ್ನಡ ಪರ ಸಂಘಟನೆ ಮುಖಂಡರು.

  • Share this:
ಬೆಳಗಾವಿ (ಅಕ್ಟೋಬರ್ 19): ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಬೆಳಗಾವಿಯಲ್ಲಿ (Belagavi) ವಿಶೇಷವಾಗಿ ಈ ಉತ್ಸವವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಅದಕ್ಕೆ ಕಾರಣ ಇಲ್ಲಿನ ಭಾಷಾ ಸೂಕ್ಷ್ಮತೆ. ಬೆಳಗಾವಿ ನಗರ ಭಾಷಾ ಸೂಕ್ಷ್ಮ ಪ್ರದೇಶವಾಗಿದ್ದು, ‌ಎಂಇಎಸ್ (MES) ಹಾಗೂ ಕನ್ನಡಿಗರ ನಡುವೆ ಮೊದಲಿನಿಂದಲೂ ತಗಾದೆ ಇದೆ. ಹೀಗಾಗಿ ಬೆಳಗಾವಿಯಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಎಂಇಎಸ್ ಮುಟ್ಟಿ ನೋಡಿಕೊಳ್ಳುವಂತೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇದೇ ದಿನ ಎಂಇಎಸ್ ಸಹ‌ ಕನ್ನಡ ರಾಜ್ಯೋತ್ಸವದ ವಿರುದ್ಧವಾಗಿ ಕರಾಳ ದಿ‌ನ ಆಚರಣೆ ಮಾಡಿ ಉದ್ಧಟನ ಪ್ರದರ್ಶನ ಮಾಡುತ್ತದೆ. ಇಷ್ಟು ವರ್ಷ ಕಳೆದರೂ ಕರಾಳ‌ ದಿನಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ ಈ ಸಲ ಕೋವಿಡ್  ನೆಪ‌ ಹೇಳಿ ಸರ್ಕಾರ ಅದ್ಧೂರಿ ಮೆರವಣಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ವರೆಗೆ ಮೆರವಣಿಗೆಗೆ ಅವಕಾಶ ನೀಡಿಲ್ಲ. ಇದು ಬೆಳಗಾವಿ ಕನ್ನಡ ಪರ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿದೆ. ಧರಣಿ‌ ನಡೆಸಿ ಅಕ್ಟೋಬರ್ ‌22ರ ಒಳಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟ ಮಾಡಬೇಕು ಎಂದು ಆಗ್ರಹ ಮಾಡಿವೆ.

ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ನಡೆಸಲು ಕನ್ನಡ ಪರ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದ್ರೆ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳ ಮುಖಂಡರು ಬೆಳಗಾವಿ ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ಡಿಸಿ ಮೂಲಕ ಸರ್ಕಾರಕ್ಕೆ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯೋತ್ಸವ ಮೆರವಣಿಗೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಗೆ ಅವಕಾಶವಿಲ್ಲ. ಇದೇ ಮೊದಲ ಬಾರಿ ಬೆಳಗಾವಿ ಡಿಸಿ ಡಾ.ಎಂ.ಜಿ. ಹಿರೇಮಠ ರಾಜ್ಯೋತ್ಸವ ದಿನ ಕರಾಳ‌ ದಿನದ ಅನುಮತಿ ತಿರಸ್ಕರಿಸಿದ್ದಾರೆ. ಈ ಮೂಲಕ ನಾಡದ್ರೋಹಿ ಎಂಇಎಸ್ ಗೆ ಡಿಸಿ ಎಂ.ಜಿ. ಹಿರೇಮಠ ಮತ್ತೊಮ್ಮೆ ಖಡಕ್ ಸಂದೇಶವನ್ನ ರವಾನಿಸಿದ್ದಾರೆ.

ಈ ಬಾರಿ ಬೆಳಗಾವಿಗರಿಗೆ ಕನ್ನಡ ರಾಜ್ಯೋತ್ಸವ ಡಬಲ್ ಸಂಭ್ರಮವಾಗಿದೆ. ಒಂದು ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನಕ್ಕೆ ಅನುಮತಿ ನೀಡದಿರಲು ಡಿಸಿ ಎಂ.ಜಿ. ಹಿರೇಮಠ ತೆಗೆದುಕೊಂಡ ನಿರ್ಧಾರ. ಎರಡನೇಯದ್ದು ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಎಂಇಎಸ್ ನೆಲ ಕಚ್ಚಿದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಅಲ್ಲದೇ ಆಡಳಿತ ಮತ್ತು ವಿರೋಧ ಪಕ್ಷದಲ್ಲೂ ಎಂಇಎಸ್ ಇಲ್ಲವೇ ಇಲ್ಲ. ಹೀಗಾಗಿ ಈ ಬಾರಿ ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿಗೆ ವಿಜಯೋತ್ಸವ ಆಗಿದೆ. ವಿಜಯೋತ್ಸವದ ಸಂಭ್ರಮಾಚರಣೆ ಪ್ರತಿಕವಾಗಿ ರಾಜ್ಯೋತ್ಸವದಂದು ಅದ್ಧೂರಿ ಮೆರವಣಿಗೆ ಅವಕಾಶ ನೀಡಬೇಕೆಂದು ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿವೆ.

ಇದನ್ನು ಓದಿ: West Bengal: ಬಂಗಾಳ ಉಪ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡ ಮಮತಾ ಬ್ಯಾನರ್ಜಿ

ಕನ್ನಡ ರಾಜ್ಯೋತ್ಸವ ಮೆರವಣಿಗೆ ಕನ್ನಡ ಪರ ಸಂಘಟನೆಗಳು ಪಟ್ಟು ಹಿಡದಿವೆ. ಕರಾಳ ದಿನಕ್ಕೆ ಅನುಮತಿ ನಿರಾಕರಿಸುವ ಮೂಲಕ ಎಂಇಎಸ ಪುಂಡಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮುಂದಾಗಿರುವುದು ಕನ್ನಡಿಗರ ಮೆಚ್ಚುಗೆ ಪಾತ್ರವಾಗಿದೆ. ಆದರೆ ಅನುಮತಿ ನೀಡದೇ ಇದ್ದರೂ ಕರಾಳ ದಿನ ಆಚರಣೆ ಮಾಡುತ್ತೇವೆ. ಇದು ನಮ್ಮ ಹಕ್ಕು ಎಂದು ಎಂಇಎಸ್ ಜಿಲ್ಲಾಡಳಿತಕ್ಕೆ ಸವಾಲು ಹಾಕಿದೆ.

ವರದಿ: ಚಂದ್ರಕಾಂತ ಸುಗಂಧಿ
Published by:HR Ramesh
First published: