ಬೆಳಗಾವಿ (ಸೆಪ್ಟೆಂಬರ್,22)- ಬೆಳಗಾವಿಯಲ್ಲಿ ಬೀದಿ ನಾಯಿಗಳ (street Dogs ) ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಕತ್ತಲಾದರೆ ಸಾಕು ಮನೆಗೆ ಹೋಗಲು ಜನರು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರಷ್ಟೇ ಅಲ್ಲ ಕುರಿಗಳ ಮೇಲೂ ಬೀದಿನಾಯಿಗಳು ಅಟ್ಯಾಕ್ ಮಾಡುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸುವ ಮಹಾನಗರ ಪಾಲಿಕೆ (Belgaum Corporation )ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ನಾಯಿ ಹಿಡಿಯಲು ಪಾಲಿಕೆ ವ್ಯಯಿಸಿದ ವೆಚ್ಚ 47 ಲಕ್ಷ ರೂಪಾಯಿ, ಇಷ್ಟು ಹಣ ಖರ್ಚು ಮಾಡಿದ್ರು ಬೀದಿ ನಾಯಿ ಹಾವಳಿ ತಪ್ಪಿಲ್ಲ.
ಬೆಳಗಾವಿ ನಗರದ ಪ್ರತಿಯೊಂದು ಬಡಾವಣೆಯಲ್ಲಿಯೂ ಬೀದಿನಾಯಿಗಳ ಆರ್ಭಟ ಜೋರಾಗಿದ್ದು ಜೀವ ಭಯದಲ್ಲೇ ಜನ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೆಳಗಾವಿಯ ಶಿವ ಬಸವ ನಗರ, ನೆಹರು ನಗರ, ವೈಭವ ನಗರ, ಅನ್ನಪೂರ್ಣವಾಡಿ, ರಾಮತೀರ್ಥ ನಗರ, ಕಣಬರಗಿ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಭಯದ ವಾತಾವರಣ ಇದೆ. ಕಳೆದ ಎರಡು ತಿಂಗಳಲ್ಲಿ ಬೆಳಗಾವಿಯಲ್ಲಿ 30ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೊಳಗಾಗಿದ್ದಾರೆ.
ನಿನ್ನೆ ರಾತ್ರಿಯಷ್ಟೇ ಬೆಳಗಾವಿಯ ಶಿವಬಸವ ನಗರದ ಸರ್ಕಾರಿ ಶಾಲಾ ಆವರಣದಲ್ಲಿ ಬೀದಿನಾಯಿಗಳ ದಾಳಿಗೆ ಆರು ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ. ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ನರಸು ರಾಯಪ್ಪ ಕುಂಪಿ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಮೂವರು ಕುರಿಗಾಹಿಗಳು ಸುಮಾರು 400 ಕುರಿಗಳನ್ನು ಮೇಯಿಸಲು ಕರೆದೊಯ್ಯುತ್ತಿದ್ದಾಗ ಕುರಿಗಳ ಮೇಲೆ ಏಕಾಏಕಿ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಆರು ಕುರಿಗಳು ಸಾವನ್ನಪ್ಪಿದ್ರೆ ಮೂರು ಕುರಿಗಳಿಗೆ ಗಂಭೀರ ಗಾಯವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿಗಳು ಆಗ್ರಹಿಸಿದ್ದಾರೆ.
ಇದನ್ನು ಓದಿ: ಕೋಮುಲ್ ವಿಭಜನೆ ಹೆಸರಲ್ಲಿ ಸಚಿವ ಡಾ ಕೆ ಸುಧಾಕರ್ ರಾಜಕೀಯ; ಒಕ್ಕೂಟದ ಅಧ್ಯಕ್ಷ್ಯ ಹೇಳಿದ್ದೇನು?
ಬೆಳಗಾವಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದರೂ ಸಹ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ ಬೀದಿನಾಯಿಗಳ ಹಿಡಿಯಲು ಮಹಾನಗರ ಪಾಲಿಕೆ ಬರೋಬ್ಬರಿ 47 ಲಕ್ಷ ರೂಪಾಯಿ ವ್ಯಯಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆರ್ಟಿಐನಡಿ ಪಡೆದ ದಾಖಲೆಗಳಿಂದ ಈ ವಿಚಾರ ಬಹಿರಂಗವಾಗಿದೆ. ಮೂರು ವರ್ಷಗಳ ಅವಧಿಯಲ್ಲಿ 6514 ಬೀದಿನಾಯಿಗಳನ್ನು ಹಿಡಿಯಲು 47 ಲಕ್ಷ ವ್ಯಯಿಸಲಾಗಿದೆ. ಅಂದರೆ ಪ್ರತಿ ನಾಯಿ ಹಿಡಿಯಲು ಸರಾಸರಿ 730 ರೂಪಾಯಿ ವ್ಯಯವಾಗಿದೆ.
6514 ನಾಯಿಗಳನ್ನು ಹಿಡಿದಿದ್ರೆ ಈ ಬೀದಿನಾಯಿಗಳು ಎಲ್ಲಿಂದ ಬಂದ್ವು ಅಂತಾ ಭೀಮಪ್ಪ ಗಡಾದ್ ಪ್ರಶ್ನಿಸಿದ್ದಾರೆ. ಬೀದಿನಾಯಿಗಳ ಹಾವಳಿ ತಪ್ಪಿಸಲು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದು ಅದೆಲ್ಲಿ ಹೋಗುತ್ತಿದೆ. ನಿಜವಾಗಲೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಇಷ್ಟೊಂದು ಹಣ ವ್ಯಯಿಸಲಾಗಿದೆಯಾ? ಇಲ್ಲ ಬೀದಿ ನಾಯಿಗಳನ್ನು ಹಿಡಿಯುವ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆಯಾ ಎಂಬುದನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ