ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ; ಮಂಗಳವಾರ ಬೆಳಗಾವಿ ಬಂದ್​ಗೆ ಕರೆ

Belagavi Bandh Called- ರಾಜ್ಯ ವಿಧಾನಸಭೆ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಮಹಾಮೇಳಾವ್ ಆಯೋಜಿಸಿದ್ದ ಸಂದರ್ಭದಲ್ಲಿ ಉಂಟಾದ ಸನ್ನಿವೇಶದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರೊಬ್ಬರು ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದೆ.

ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ

ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ

  • Share this:
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌದದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಹೊರಗೆ ಹೋರಾಟ, ಪ್ರತಿಭಟನೆ ಕಾವು ಹೆಚ್ಚಾಗಿದೆ. ಅಧಿವೇಶನಕ್ಕೆ ಪರ್ಯಾಯವಾಗಿ ಇಂದು ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿತ್ತು. ಮೇಳಾವಗೆ ಯಾವುದೇ ಅನುಮತಿ ಪಡೆದಿರಲಿಲ್ಲ. ರಸ್ತೆಯ ಮೇಲೆ ಪೆಂಡಾಲ್ ಹಾಕಿ ಉದ್ಧಟನ ಪ್ರದರ್ಶನ ಮಾಡಿದರು. ಈ ವೇಳೆಯಲ್ಲಿ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಹಚ್ಚಲಾಗಿದೆ. ಈ ವಿಚಾರ ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಘಟನೆಯನ್ನ ಖಂಡಿಸಿ ಎಂಇಎಸ್ ಬೆಳಗಾವಿ ಬಂದ್​ಗೆ ಕರೆ ನೀಡಿದೆ.

ಬೆಳಗಾವಿ ವ್ಯಾಕ್ಸಿನ್ ಡಿಪೋದ ರಸ್ತೆಯಲ್ಲಿ ಮಹಾಮೇಳಾವ್ ಮಾಡಲು ಪೆಂಡಾಲ್ ಹಾಕಲಾಗಿತ್ತು. ಬೆಳಗ್ಗೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಶ್ನೆ ಮಾಡಿದರು. ಈ ವೇಳೆಯಲ್ಲಿ ಅಧಿಕಾರಿಗಳ ಜತಗೆ ಮಾತಿನ ಚಕಮಕಿ ನಡೆಯಿತು. ಮಹಾಮೇಳಾವ ವೇದಿಕೆ ತೆರವುಗೊಳಿಸಲು ಬಂದ ಪಾಲಿಕೆ ಸಿಬ್ಬಂದಿಯೊಂದಿಗೆ ಎಂ.ಇ.ಎಸ್ ಮುಖಂಡರು ಮಾತಿನ ಚಕಮಕಿ ನಡೆಸಿದರು. ವೇದಿಕೆ ಮೇಲೆ ಕುರ್ಚಿ ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಮುಂದಾದಾಗ, ಎಂಇಎಸ್ ಮುಖಂಡರು ವೇದಿಕೆ ಮೇಲೆ ಏರಿ ಕುಳಿತರು. ಎಂಇಎಸ್ ಮುಖಂಡ ದೀಪಕ ದಳವಿ, ಶುಭಂ ಶಳಕೆ, ಶಿವಾಜಿ ಸುಂಠಕರ ಹಾಗೂ ಪುಂಡರು ಪಾಲಿಕೆ ಸಿಬ್ಬಂದಿಯನ್ನ ನಿಂದಿಸಿದರು.  ಅನಧಿಕೃತ ವೇದಿಕೆ ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆ ಸಿಬ್ಬಂದಿಯೊಂದಿಗೆ ಪೊಲೀಸರ ಸಮ್ಮುಖದಲ್ಲೇ ವಾಗ್ವಾದ ನಡೆಸಿದರು.

ಇದನ್ನೂ ಓದಿ: ಹರ್ಷಿತ್ ಸೇಠ್, 6 ಬಾಲ್​ಗೆ 6 ವಿಕೆಟ್ ಪಡೆದ 16 ವರ್ಷದ ಸ್ಪಿನ್ನರ್; ಪಾಕಿಸ್ತಾನೀ ತಂಡದ ವಿರುದ್ಧ ಸಾಧನೆ

ಕನ್ನಡಪರ ಸಂಘಟನೆಯ ಕಾರ್ಯಕರ್ತರಿಂದ ಮಸಿ:

ಬಳಿಕ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತ ಸಂಪತ್ ದೇಸಾಯಿ ಮಸಿ ಬಳಿದರು. ಇದು ಮತ್ತೆ ಕೋಲಾಹಲಕ್ಕೆ ಕಾರಣವಾಯಿತು. ಸಂಪತ್ ಮೇಲೆ ಹಲ್ಲೆ ಮಾಡಲು ಎಂಇಎಸ್ ಕಾರ್ಯಕರ್ತರು ಯತ್ನಿಸಿದರು. ಸ್ಥಳದಲ್ಲಿ ಇದ್ದ ಪೊಲೀಸರು ತಕ್ಷಣ ಸಂಪತ್ ಅವರನ್ನ ವಶಕ್ಕೆ ಪಡೆದು ವಾಹನದಲ್ಲಿ ಕರೆದುಕೊಂಡು ಹೋದರು. ಬಳಿದ ವೇದಿಕೆಯಲ್ಲಿ ಎಂಇಎಸ್ ಮುಖಂಡರು ಜಮಾವಣೆಗೊಂಡರು. ಈ ವೇಳೆಯಲ್ಲಿ ಮಾತನಾಡಿದ ಮಾಜಿ ಶಾಸಕ ಮನೋಹರ ಕಿಣೇಕರ್, ನಾಳೆ (ಮಂಗಳವಾರ) ಬೆಳಗಾವಿ ಬಂದ್​ಗೆ ಕರೆ ನೀಡಿದರು.

ಘಟನೆಯ ಬಗ್ಗೆ ಮಹಾರಾಷ್ಟ್ರದ ಶಿವಸೇನೆ, ಎನ್ ಸಿ ಪಿ ಹಾಗೂ ಕಾಂಗ್ರೆಸ್ ನಾಯಕರ ಗಮನಕ್ಕೆ ತರಲು ನಿರ್ಧಾರ ಮಾಡಲಾಯಿತು. ಮಹಾಮೇಳಾವ್ ಮುಗಿದ ಬಳಿಕ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ನೀಡಲು ಹೋಗೊಣ ಎಂದರು.

ಇದನ್ನೂ ಓದಿ: HD Devegowda Biography: ಮಣ್ಣಿನ ಮಗ-ಮಾಜಿ ಪ್ರಧಾನಿ ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ

ಬಂದ್ ಯಶಸ್ವಿ ಮಾಡಲು ಎಂಇಎಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಆಧಾರದ ಮೇಲೆ ಮಹಾಮೇಳಾವ್ ಆಚರಣೆ ಮಾಡುತ್ತೇವೆ ಎಂದು ಕಿಣೇಕರ್ ಹೇಳಿದರು. ಬಳಿಕ ವ್ಯಾಕ್ಸಿನ್ ಡಿಪೋದಿಂದ ಟಿಳಕವಾಡಿ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಲಾಯಿತು.

ಸಂಪತ್ ವಿರುದ್ಧ ದೂರು:

ಸಂಪತ್ ವಿರುದ್ಧ ಎಂಇಎಸ್ ಮುಖಂಡರು ದೂರು ನೀಡಿದ್ದಾರೆ. ಜತೆಗೆ ಈ ವಿಷಯವನ್ನು ಮುಂದಿಟ್ಟುಕೊಂಡು ನಾಳೆ ಬೆಳಗಾವಿ ಬಂದ್ ಕರೆ ನೀಡಲಾಗಿದೆ. ಮುಖಕ್ಕೆ ಮಸಿ ಹಾಕಿದ ಪ್ರಕರಣವನ್ನು ಖಂಡಿಸಲು ಬಂದ್​ಗೆ ಕರೆ ನೀಡಲಾಗಿದೆ. ಆದರೆ ಇಡೀ ಸರ್ಕಾರ ಬೆಳಗಾವಿಯಲ್ಲಿ ಇದ್ದು ಇಂತಹ ಸಂದರ್ಭಗಳಲ್ಲಿ ಬಂದ್ ಬೇಡ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: