ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸೋ ತೀರ್ಮಾನ ಕೈಗೊಳ್ಳಿ - ಸಭಾಪತಿ ಹೊರಟ್ಟಿ ಆಗ್ರಹ

ಬೆಳಗಾವಿಯಲ್ಲಿ 2018ರಲ್ಲಿ ಅಧಿವೇಶನ ಮಾಡಲಾಗಿದೆ. ಅಲ್ಲಿ ಈ ಬಾರಿಯೂ ಅಧಿವೇಶನ ನಡೆಸುವುದು ಸೂಕ್ತ. ಜುಲೈ ತಿಂಗಳಲ್ಲಾದರೂ ಕುಂದಾನಗರಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಹುಬ್ಬಳ್ಳಿ: ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸಿಎಂಗೆ ಪತ್ರ ಬರೆದಿರೋದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಪತ್ರ ಬರೆಯಲಾಗಿದೆ. ಬೆಳಗಾವಿಯವರಾದ ಮಹಾಂತೇಶ ಕವಟಗಿಮಠ ಅವರು ವಿಶೇಷವಾಗಿ ಅಧಿವೇಶನ ಕರೆಯುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ. ಎಲ್ಲ ಕಾರಣಗಳಿಂದಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುವುದು ಅತಿ ಸೂಕ್ತ. 2018 ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗಿದೆ. ಅದಕ್ಕಾಗಿ ಇಲ್ಲಿಯೇ ಮಾಡಬೇಕೆಂದು ಸಲಹೆ ನೀಡಿದ್ದೇನೆ. ಜೂನ್ ನಲ್ಲಿ ಅಧಿವೇಶನ ಮಾಡಬಹುದು. ಆದರೆ ಅದರ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಜೂನ್ ನಲ್ಲಿ ಆಗದಿದ್ದಲ್ಲಿ ಜುಲೈ ನಲ್ಲಿ ಮಾಡಬೇಕು. ಈಗಾಗಲೇ ಸಮಯದ ಅಭಾವದ ಕಾರಣ ಬೆಳಗಾವಿಯಲ್ಲಿ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

ಅಧಿವೇಶನ ವಿಷಯ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪವಾಗಿಲ್ಲ. ಹಾಗಾಗಿ ಚರ್ಚೆಗೆ ಬಂದಾಗ ಮತ್ತೊಮ್ಮೆ ನೆನಪಿಸಿ ಬೆಳಗಾವಿಯಲ್ಲಿ ಮಾಡಲು ತಿಳಿಸುವೆ‌. ವಿಧಾನಸಭೆ ಸಭಾ ಅಧ್ಯಕ್ಷರು, ಮತ್ತೆ ನಾನು ಕೂಡಾ ಮಾತನಾಡಿದ್ದು ಸರ್ಕಾರ ಬೆಳಗಾವಿಯಲ್ಲಿ ಮಾಡುವ ವ್ಯವಸ್ಥೆ ಮಾಡುವ ತಿರ್ಮಾನ ತೆಗೆದುಕೊಳ್ಳಬೇಕೆಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಅಧಿಕಾರಿಗಳ ವಿರುದ್ಧ ಹೊರಟ್ಟಿ ಅಸಮಾಧಾನ:

ಶಿಕ್ಷಣ ಇಲಾಖೆಯಲ್ಲಿದ್ದಷ್ಟು ಬೇಜವಾಬ್ದಾರಿ ಅಧಿಕಾರಿಗಳು ಬೇರೆಲ್ಲೂ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದಲ್ಲಿ ಇಷ್ಟು ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಖಾಸಗಿ ಶಾಲೆಗಳ ಫೀಸ್ ಇತ್ಯಾದಿಗಳು ದೊಡ್ಡ ಕಗ್ಗಂಟಾಗಿ ಮಾರ್ಪಟ್ಟಿವೆ. ಶೇ 80 ರಿಂದ 90 ರಷ್ಟು ಶಾಲೆಗಳು ರಾಜಕಾರಣಿಗಳು ಅಥವಾ ಅಧಿಕಾರಿಗಳಿಗೆ, ಪ್ರಭಾವಿಗಳಿಗೆ ಸೇರಿದವುಗಳಾಗಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Pension Rule - ಅನುಮಾನಾಸ್ಪದ ಸಾವಾದಾಗ? 50 ವರ್ಷ ಹಿಂದಿನ ಪೆನ್ಷನ್ ನಿಯಮ ಬದಲು

ತಾನು ಸಚಿವನಾಗಿದ್ದಲ್ಲಿ ಅಥವಾ ಶಾಸಕನಾಗಿದ್ದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದೆ. ಆದ್ರೆ ಸಭಾಪತಿ ಸ್ಥಾನದಲ್ಲಿ ಕೂರಿಸಿರೋದ್ರಿಂದ ಏನು ಮಾತನಾಡೋಕ್ಕೆ ಆಗಲ್ಲ. ಶೈಕ್ಷಣಿಕ ವರ್ಷ ಆರಂಭಗೊಂಡಿರುವುದರಿಂದ ಫೀಸ್ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿತ್ತು. ಎ. ಬಿ. ಸಿ. ಡಿ ಎಂದು ಶಾಲೆಗಳನ್ನು ವರ್ಗೀಕರಿಸಬೇಕಿತ್ತು. ದುಡ್ಡಿದ್ದವರ ಬಳಿ ಪೂರ್ತಿ ಫೀಸ್ ತೆಗೆದುಕೊಂಡು ಬಡವರಿಗೆ ಫೀಸ್ ನಲ್ಲಿ ರಿಯಾಯಿತಿ ತೋರಿಸಬೇಕಿತ್ತು.
ಕಷ್ಟದಲ್ಲಿರುವವರಿಗೆ ಮಾನವೀಯತೆ ತೋರಿಸಬೇಕು. ಇದನ್ನು ಮಾಡಬೇಕಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈಗಲಾದರೂ ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ಬಸವರಾಜ ಹೊರಟ್ಟಿ ತಿಳಿಹೇಳಿದ್ದಾರೆ.

ಫುಡ್ ಕಿಟ್ ವಿತರಿಸಿದ ಹೊರಟ್ಟಿ:

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.

ನಂತರ ಸಾಂಕೇತಿಕವಾಗಿ 50 ಕಾರ್ಮಿಕರಿಗೆ ಆಹಾತ ಕಿಟ್ ವಿತರಿಸಿದರು. ಧಾರವಾಡ ಜಿಲ್ಲೆಯಲ್ಲಿ 60 ಸಾವಿರ ಕಾರ್ಮಿಕರಿಗೆ ಕಿಟ್ ವಿತರಿಸೊ ಗುರಿ ಹೊಂದಲಾಗಿದೆ. ಈ ವೇಳೆ ಮಾತನಾಡಿದ ಹೊರಟ್ಟಿ, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಉಂಟಾದ ತೊಂದರೆಗಳನ್ನು ಕಾರ್ಮಿಕ ಸಚಿವರ ಗಮನಕ್ಕೆ ತರೋದಾಗಿ ಭರವಸೆ ನೀಡಿದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: