ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡದಂತೆ ಸಹೋದರ ಬಾಲಚಂದ್ರ ಮನವೊಲಿಕೆ?

ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನವಿಸ್ ಭೇಟಿ ಜೊತೆಗೆ ದೆಹಲಿಯಲ್ಲಿ ವರಿಷ್ಠರ ಭೇಟಿಗೂ ನಿನ್ನೆ ಪ್ರಯತ್ನಿಸಿರುವುದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

  • Share this:
ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸಹೋದರ ಹಾಗೂ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಆದರೆ ಸಂಪುಟದಲ್ಲಿ ಸ್ಥಾನ ಪಡೆಯಬೇಕು ಎಂಬ ಆಗ್ರಹದ ಜತೆಗೆ ಬಿಜೆಪಿಯಲ್ಲಿ ತನಗೆ ಮೋಸ ಮಾಡಿದ ಮೂರು ನಾಯಕರ ವಿರುದ್ಧ ಅವರು ಮತ್ತೆ ಸೇಡಿನ ಮಾತನಾಡಿದ್ದಾರೆ. ಮೊನ್ನೆ ಸೋಮವಾರ ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿದ್ದ ರಮೇಶ ಜಾರಕಿಹೊಳಿ ನಿನ್ನೆ ದೀಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ತಮ್ಮಗೆ ಆಗಿರೋ ಅನ್ಯಾಯ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ ಜಾರಕಿಹೊಳಿ ಕೆಲ ತಿಂಗಳ ಕಾಲ ಮೌನ ವಹಿಸಿದ್ದರು. ಎಸ್ ಐ ಟಿ ಯಿಂದ ಕ್ಲೀನ್ ಚಿಟ್ ಸಿಗುವ ಸುಳಿವು ಸಿಕ್ಕ ತಕ್ಷಣವೇ ಮತ್ತೆ ತಮ್ಮ ರಾಜಕೀಯ ಚದುರಂಗದ ಆಟವನ್ನು ಆರಂಭ ಮಾಡಿದ್ದಾರೆ. ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಆ್ಯಕ್ಟಿವ್ ಆಗಿರೋ ರಮೇಶ ಜಾರಕಿಹೊಳಿ ಅವರ ನಡೆ ತೀವ್ರ ಕುತೂಲಹಕ್ಕೆ ಕಾರಣವಾಗಿದೆ. ತಾನು ಮತ್ತೆ ಸಚಿವನಾಗಬೇಕು. ಜತೆಗೆ ಪಕ್ಷದಲ್ಲಿ ಇದ್ದು ಮೋಸ ಮಾಡಿದ ಮೂರು ಜನರ ವಿರುದ್ಧ ಸೇಡು ತಿರಿಸಿಕೊಳ್ಳುವ ಮಾತನ್ನು ಪದೇ ಪದೇ ಪುನರುಚ್ಛಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಕಸರತ್ತು ಆರಂಭಿಸಿದ್ದು, ಇದರ ಸಂದೇಶ ನಿನ್ನೆ ದೆಹಲಿಗೆ ಬಂದು ತಲುಪಿದೆ.

ರಮೇಶ ಜಾರಕಿಹೊಳಿ ಮೊದಲು ಮಹಾರಾಷ್ಟ್ರಕ್ಕೆ ತೆರಳಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದರು. ರಾಜಕೀಯವಾಗಿ ನನ್ನನ್ನು ಮುಗಿಸಲು ವಿರೋಧಿಗಳು ಸಂಚು ರೂಪಿಸಿದ್ದು, ಇದಕ್ಕೆ ನಮ್ಮ ಪಕ್ಷದ ಅನೇಕ ನಾಯಕರು ಕೈ ಜೋಡಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ವರಿಷ್ಠರನ್ನು ಸಂಪರ್ಕಿಸಿ ನಮಗೆ ಆಗಿರೋ ಅನ್ಯಾಯ ಸರಿಪಡಿಸುವಂತೆ ಸಹ ಮನವಿಯನ್ನೂ ಮಾಡಿಕೊಂಡಿದ್ದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಆಶೀರ್ವಾದನ್ನು ಪಡೆದಿದ್ದರು, ಮೇಲ್ನೋಟಕ್ಕೆ ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ: ಸಪ್ತ ಬಾಣಗಳನ್ನು ಹೂಡುವ ಮೂಲಕ 2ನೇ ಇನ್ನಿಂಗ್ಸ್ ಶುರು

ಅಥಣಿಯ ಆರ್ ಎಸ್ ಎಸ್ ಉತ್ತರ ಪ್ರಾಂತ ಸಂಚಾಲಕ ಅರವಿಂದರಾವ್ ದೇಶಪಾಂಡೆ ಮೂಲಕ ಸಹ ಗೋಕಾಕ್ ಶಾಸಕರು ಕಸರತ್ತು ಮಾಡಿದ್ದರು. ಸಂಪುಟದಲ್ಲಿ ಮತ್ತೆ ಸ್ಥಾನಮಾನ ಸಿಗಬೇಕು ಎಂಬ ಹಠದ ಜೊತೆಗೆ, ವಿರೋಧಿಗಳನ್ನು ರಾಜಕೀಯವಾಗಿ ಡ್ಯಾಮೇಜ್ ಮಾಡಲು ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ. ಮೊನ್ನೆ ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿದ್ದ ರಮೇಶ ಜಾರಕಿಹೊಳಿ ನಿನ್ನೆ ಧೀಢೀರ್ ಎಂದು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕನ್ನು ಭೇಟಿಯಾಗೋ ಸಾಧ್ಯತೆ ಇದೆ.

ಇದೇ ವೇಳೆ, ಈ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದ ರಮೇಶ ಜಾರಕಿಹೊಳಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಹೋದರ ಬಾಲಚಂದ್ರ ಜಾರಕಿಹೊಳಿ ಮನವೊಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಗೋಕಾಕ್ ಶಾಸಕ, ಸಿಡಿ ಪ್ರಕರಣದಲ್ಲಿ ತನಗೆ ಕ್ಲೀನ್ ಚಿಟ್ ಸಿಗುವುದರ ಜೊತೆಗೆ, ತನ್ನನ್ನ ಮತ್ತೆ ಸಚಿವನನ್ನಾಗಿ ಮಾಡುವವರೆಗೂ ತನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರನ್ನ ಜಲಸಂಪನ್ಮೂಲ ಸಚಿವರನ್ನಾಗಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆ ಈಗ ನಡೆಯುತ್ತಿರುವ ಬೆಳವಣಿಗೆ ಯಾರಿಗೆ ಮುಳುವಾಗುತ್ತೆ ಎಂಬುದು ಕುತೂಹಲ ಮೂಡಿಸಿದೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: