Belagavi Murder: ಹಳೆ ಲವ್​​​ಸ್ಟೋರಿ.. ಹೊಸ ಕೊಲೆ.. ಇಬ್ಬರಿಗೂ ಹುಡುಗಿ ಸಿಗದಿದ್ದರೂ ಬಿತ್ತು ಹೆಣ!

ಎರಡು ವರ್ಷದ ಹಿಂದೆ ಬೇರೆ ಯುವಕನೊಂದಿಗೆ ತಾನೂ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಿ ಹೋಗಿದ್ದಾಳೆ ಅನ್ನೋದನ್ನ ಮಾತ್ರ ಇಬ್ರಾಹಿಂ ಮರೆತಿರುವುದಿಲ್ಲ. ಇದಕ್ಕೆ ಕಾರಣನಾದ ನೋಹಾನ್ ನ ಮೇಲೆ ಕತ್ತಿ ಮಸೆಯುತ್ತಾ ಆತನೊಂದಿಗೆ ಓಡಾಡ್ತಾನೆ ಇರ್ತಾನೆ.

ಮೃತ ನೋಹಾನ್

ಮೃತ ನೋಹಾನ್

  • Share this:
ಬೆಳಗಾವಿ: ಇದೊಂದು ಕೊಲೆ ಹುಚ್ಚು ಪ್ರೀತಿಯ ಕಥೆ (Love Story) ಹೇಳ್ತಿದೆ.  ರುಕ್ಮೀಣಿ ನಗರದ ನಿವಾಸಿ ನೋಹಾನ್ ಧಾರವಾಡ್ಕರ್ (23) ಜ.9ರಂದು ಬೆಳಗಾವಿ ಹೊರ ವಲಯದ ಗಾಂಧಿನಗರದ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಪಾಳುಬಿದ್ದ ಮನೆಯಲ್ಲಿ ಶವವಾಗಿ (Dead Body) ಪತ್ತೆಯಾಗಿದ್ದ. ಕೂಡಲೇ ಸ್ಥಳಕ್ಕೆ ತೆರಳಿದ ಮಾಳಮಾರುತಿ ಪೊಲೀಸರು (Police) ಸ್ಥಳವನ್ನ ಪರಿಶೀಲನೆ ನಡೆಸಿ ಶವವನ್ನ ಆಸ್ಪತ್ರೆಗೆ ರವಾನೆ ಮಾಡಿರುತ್ತಾರೆ. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿ ಅಂದು ಮಾಹಿತಿಯನ್ನ ಪಡೆದುಕೊಂಡಿರುತ್ತಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಮದುವೆಗೆ ಹೆಣ್ಣು ಹುಡುಕುತ್ತಿದ್ದ ನೋಹಾನ್ ಕೊಲೆಯಾಗಿದ್ದು ಯಾಕೆ ಅಂತಾ ತನಿಖೆ ಆರಂಭಿಸಿರುತ್ತಾರೆ. ಕಳೆದ 24ಗಂಟೆಯಲ್ಲೇ ಮೂರು ಜನ ಆರೋಪಿಗಳನ್ನ ಬಂಧಿಸಿದ್ದು, ಬಂಧಿತರೆಲ್ಲರೂ ನೋಹಾನ್ ನ ಗೆಳೆಯರೇ ಎಂಬುವುದು ಖಚಿತವಾಗಿದೆ.

ಒಂದೇ ಹುಡುಗಿಯನ್ನು ಪ್ರೀತಿಸಿದ್ದ ಗೆಳೆಯರು 

ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ನೋಹಾನ್ ಕೊಲೆಯಾಗಿದ್ದು ಬೇರೆ ಯಾರಿಂದಲೂ ಅಲ್ಲ, ಆತನ ಸ್ನೇಹಿತರಾದ ಇಬ್ರಾಹಿಂ ಸೈಯದ್, ಮಹ್ಮದ್ ಝಾಯೀದ್, ಉಲ್ಮಾನ್ ಯರಗಟ್ಟಿ ಅವರಿಂದ. ಕುಚುಕು ಗೆಳೆಯರಾಗಿದ್ದ ಇವರು ನೋಹಾನ್ ಕೊಲೆ ಮಾಡಿದ್ದು ಹುಡುಗಿಗಾಗಿ.   ನೋಹಾನ್ ಆಟೋ ಓಡಿಸಿಕೊಂಡಿದ್ರೆ, ಇಬ್ರಾಹಿಂ ಕೂಲಿ ಕೆಲಸ ಮಾಡ್ತಿರ್ತಾನೆ. ಈ ಇಬ್ಬರು ಬೇರೆ ಬೇರೆ ಕಾಲೋನಿಯಾದ್ರೂ ಹೆಚ್ಚಾಗಿ ರುಕ್ಮೀಣಿ ನಗರದಲ್ಲಿ ಓಡಾಡಿಕೊಂಡಿರುತ್ತಾರೆ. ಇನ್ನೂ ಎನೇ ಮಾಡಿದ್ರೂ ಜತೆಯಾಗಿಯೇ ಮಾಡ್ತಿದ್ದ ಇವರು ಅದೇ ಕಾಲೋನಿಯ ಒಂದೇ ಹುಡುಗಿಯನ್ನ ಇಬ್ಬರೂ ಪ್ರೀತಿಸುತ್ತಿರುತ್ತಾರೆ. ಇದ್ರಲ್ಲಿ ಇಬ್ರಾಹಿಂ ಎಂಬಾತ ಆ ಯುವತಿಯನ್ನ ತನ್ನ ಬಲೆಯಲ್ಲಿ ಬೀಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತಾನೆ.ಹುಡುಗಿ ಹೋದ ಬಳಿ ಮತ್ತೆ ಒಂದಾಗಿದ್ದ ಗೆಳೆಯರು 

ಗೆಳೆಯ ಪ್ರೀತಿಸುತ್ತಿದ್ದಾನೆ ಬಿಡು ಅಂತಾ ನೋಹಾನ್ ಸುಮ್ಮನಿದಿದ್ರೇ ದುರಂತ ಅಂತ್ಯ ಕಾಣ್ತಿರಲಿಲ್ಲ. ಆದರೆ ಇಬ್ಬರು ಲವ್ ಮಾಡ್ತಿದ್ರೂ ಈತ ಮಾತ್ರ ಹುಡುಗೆ ಕಾಟ ಕೊಡ್ತಿರ್ತಾನೆ. ಈ ವಿಚಾರ ಇಬ್ರಾಹಿಂಗೆ ಗೊತ್ತಾಗಿ ನೋಹಾನ್ ಜತೆಗೆ ಜಗಳವಾಡ್ತಾನೆ. ಇದು ಹಿರಿಯರವರೆಗೂ ಹೋಗಿ ಕಡೆಗೂ ಜಗಳ ಬಗೆ ಹರಿಸಿರುತ್ತಾರೆ. ಇನ್ನೂ ಯುವತಿ ಮನೆಯಲ್ಲಿ ಈ ವಿಚಾರ ಗೊತ್ತಾಗುತ್ತಿದ್ದಂತೆ ಆಕೆಯನ್ನ ಕಳೆದ ಎರಡು ವರ್ಷದ ಹಿಂದೆಯೇ ಬೇರೆ ಯುವಕನ ಜತೆಗೆ ಮದುವೆ ಮಾಡಿಕೊಡ್ತಾರೆ. ಇದಾದ ಬಳಿಕ ಮತ್ತೆ ನೋಹಾನ್ ಮತ್ತು ಇಬ್ರಾಹಿಂ ಒಂದಾಗಿ ಓಡಾಡಲು ಆರಂಭಿಸುತ್ತಾರೆ.

ಇದನ್ನೂ ಓದಿ: Crime News: ಲವರ್​​ಗಾಗಿ ಮದುವೆಯಾದ 5 ದಿನಕ್ಕೆ ಗಂಡನನ್ನು ಬಿಟ್ಟು ಬಂದಳು.. ವಿಧಿಯಾಟಕ್ಕೆ ಬದುಕು ಮೂರಾಬಟ್ಟೆ!

ದ್ವೇಷವನ್ನು ಮರೆಯಲೇ ಇಲ್ಲ 

ಕಳೆದ ಎರಡು ವರ್ಷದ ಹಿಂದೆ ಬೇರೆ ಯುವಕನೊಂದಿಗೆ ತಾನೂ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಿ ಹೋಗಿದ್ದಾಳೆ ಅನ್ನೋದನ್ನ ಮಾತ್ರ ಇಬ್ರಾಹಿಂ ಮರೆತಿರುವುದಿಲ್ಲ. ಇದಕ್ಕೆ ಕಾರಣನಾದ ನೋಹಾನ್ ನ ಮೇಲೆ ಕತ್ತಿ ಮಸೆಯುತ್ತಾ ಆತನೊಂದಿಗೆ ಓಡಾಡ್ತಾನೆ ಇರ್ತಾನೆ. ಇನ್ನೂ ಯುವತಿ ತವರು ಮನೆಗೆ ಬಂದ ಸಂದರ್ಭದಲ್ಲಿ ಆಕೆಯನ್ನ ನೋಡಿದ್ದ ಇಬ್ರಾಹಿಂ ತನ್ನ ತಾಳ್ಮೆಯನ್ನ ಕಳೆದುಕೊಂಡಿದ್ದ. ಬೆಳಂ ಬೆಳಗ್ಗೆ ಸ್ನೇಹಿತ ನೋಹಾನ್ ಗೆ ಕರೆ ಮಾಡಿ ಪಾರ್ಟಿ ಮಾಡೋಣ ಬಾ ಅಂತಾ ಕರೆದಿದ್ದ. ಹೀಗೆ ಹನ್ನೊಂದು ಗಂಟೆ ಸುಮಾರಿಗೆ ನೋಹಾನ್, ಇಬ್ರಾಹಿಂ,  ಮಹ್ಮದ್ ಝಾಯೀದ್, ಉಲ್ಮಾನ್ ಯರಗಟ್ಟಿ ಎಲ್ಲರೂ ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾಳು ಬಿದ್ದ ಮನೆಗೆ ಎಣ್ಣೆ ಸಮೇತ ಹೋಗಿದ್ದಾರೆ. ಆಗ ಕಂಠಪೂರ್ತಿ ಈ ನೋಹಾನ್ ಗೆ ಕುಡಿಸಿದ ಸ್ನೇಹಿತರು ನಂತರ ಆತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Crime News: ಅಕ್ರಮ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ನರಕ ತೋರಿಸಿದ ಕೊಳ್ಳೇಗಾಲದ ಕಾಮುಕ..!

ಜ.6ರಂದು ಈ ಕೊಲೆ ಮಾಡಿದ್ರೂ ಆತನ ಸುಳಿವು ಮಾತ್ರ ಸಿಕ್ಕಿರಲಿಲ್ಲ ನಂತರ ಜ.9ರಂದು ಶವ ಸಿಕ್ಕು ನೋಹಾನ್ ಕಾಲ್ ಹಿಸ್ಟರಿ ತೆಗೆದು ನೋಡಿದಾಗ ಕೊನೆಯಲ್ಲಿ ಸ್ನೇಹಿತರು ಕರೆ ಮಾಡಿ ಕರೆಸಿಕೊಂಡಿರುವುದು ಗೊತ್ತಾಗುತ್ತೆ. ಜತೆಗೆ ಹುಡುಗಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು ಕೂಡ ಗೊತ್ತಾಗಿ ಯುವತಿ ಸೇರಿದಂತೆ ಈ ಮೂರು ಜನ ಸ್ನೇಹಿತರನ್ನ ಕರೆಸಿ ವಿಚಾರಣೆ ನಡೆಸಿದಾಗ ಮೂವರು ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಇನ್ನೂ ಕೇಸ್ ನಲ್ಲಿ ಯುವತಿ ಪಾತ್ರ ಎನೂ ಇಲ್ಲ ಅಂತಾ ಗೊತ್ತಾಗಿ ಆಕೆಯನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇದೀಗ ಕೊಲೆಗಡುಕರೆ ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದಾರೆ.
Published by:Kavya V
First published: