ಕೊರೋನಾಗೆ ಬೆಳಗಾವಿಯ ಮತ್ತೋರ್ವ ಶಿಕ್ಷಕ ಬಲಿ: ವಾರದ ಅಂತರದಲ್ಲಿ ತಂದೆ-ಮಗ ಇಬ್ಬರ ಸಾವು!

ಅಜ್ಜ ಹಾಗೂ ತಂದೆಯ ಮರಣದಿಂದಾಗಿ ಮಕ್ಕಳು ಸೇರಿದಂತೆ ಇಡಿ ಕುಟುಂಬ ಈಗ ಶೋಕಗ್ರಸ್ತವಾಗಿದೆ. ಸದ್ಯ ಅಶೋಕ ಅವರ ಸಹೋದರನ ಮನೆಯಲ್ಲಿರುವ ಇಡಿ ಕುಟುಂಬ ಸರ್ಕಾರದ ಸಹಾಯಕ್ಕಾಗಿ ಕಾದು ಕುಳಿತಿದೆ. ಅನುಕಂಪದ ಆಧಾರದ ಮೇಲೆ ಪತ್ನಿಗೆ ಕೆಲಸ ನೀಡಬೇಕು ಹಾಗೂ ಮಕ್ಕಳ  ವಿದ್ಯಾಭ್ಯಾಸವನ್ನು ಸರ್ಕಾರವೇ ನೋಡಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಿಕ್ಕೋಡಿ: ಬೆಳಗಾವಿ ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಿ ಕೊರೋನಾಗೆ ರಾಜ್ಯದಲ್ಲಿ 35 ಜನ ಶಿಕ್ಷಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆ ಒಂದರಲ್ಲೆ 17 ಜನ ಶಿಕ್ಷಕರು ಕೊರೊನಾದಿಂದಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಬೆಳಗಾವಿಯ ಮತ್ತೋರ್ವ ಶಿಕ್ಷಕ ಕೊರೋನಾಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೇ, ಇವರು ಆಸ್ಪತ್ರೆಯಲ್ಲಿ ಇರುವಾಗಲೇ ಇವರ ತಂದೆ ಕೂಡ ಮೃತಪಟ್ಟಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಮನೆ ಯಜಮಾರನ್ನು ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

55 ವರ್ಷದ ಅಶೋಕ ಪಾಟೀಲ ಮೃತ ಶಿಕ್ಷಕ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳ್ಳಂಕಿ ಗ್ರಾಮದ ನಿವಾಸಿಯಾದ ಇವರು 2007 ರಿಂದಲೂ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಕಳೆದು ತಿಂಗಳು ನಡೆದ ಬೆಳಗಾವಿ ಲೋಕಸಭಾ ಉಪ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ವೇಳೆ ಕೊರೋನಾ ಸೊಂಕು ತಗುಲಿ ಸಾವನ್ನಪ್ಪಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ತೆರಳುವ ಮುನ್ನ ಚೆನ್ನಾಗಿಯೇ ಇದ್ದ ಅಶೋಕ ಪಾಟೀಲ್ ಏಪ್ರಿಲ್ 17ರಂದು ಬೆಳಗಾವಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಚುನಾವಣೆ ಕೆಲಸಕ್ಕೆ ಹಾಜರಾಗಿ ವಾಪಸ್ ಬಂದ ಮೇಲೆ  ನಾಲ್ಕೆ ದಿನಗಳಲ್ಲಿ ತೀವ್ರ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಗೆ ತೋರಿಸಿದರೂ ಕಡಿಮೆಯಾಗದ ಕಾರಣ ಏಪ್ರಿಲ್ 28 ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಅಶೋಕ ಪಾಟೀಲ ಅವರಿಗೆ ಕೊರೋನಾ ಹಾಗೂ ಡೆಂಗ್ಯೂ ಇರುವುದು ಖಚಿತವಾಗಿದೆ. ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರಾಟದ ತೊಂದರೆ ಹೆಚ್ಚುತ್ತಲೇ ಹೋದ ಹಿನ್ನಲೆ  ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 5 ರಂದು ಸಾವನ್ನಪ್ಪಿದ್ದಾರೆ.

ಇನ್ನು  ಅಶೋಕ ಪಾಟೀಲ ಅವರು ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ತಾಯಿ, ಪತ್ನಿ, ಹಾಗೂ ಇಬ್ಬರು ಚಿಕ್ಕ ವಯಸ್ಸಿನ ಮಕ್ಕಳು ಇದ್ದಾರೆ. ಪತ್ನಿ ಅನಿತಾ ಪಾಟೀಲ ಗೃಹಿಣಿಯಾಗಿದ್ದರೆ ಹಿರಿಯ ಮಗಳು ಶ್ರದ್ದಾ ಪಾಟೀಲ್ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇನ್ನು ಓರ್ವ ಕಿರಿಯ ಮಗ  ಕೃಷ್ಣಾ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವರೆಲ್ಲರ ಜವಾಬ್ದಾರಿ ಅಶೋಕ್ ಅವರ ಹೆಗಲ ಮೇಲೆಯೇ ಇತ್ತು. ಆದರೆ, ಇದೀಗ ವಿಧಿ ಮನೆಯ ಯಜಮಾನನ ಜೀವವನ್ನೇ ಕಸಿದು, ಇಡೀ ಕುಟುಂಬವನ್ನು ನಡುಬೀದಿಯಲ್ಲಿ ನಿಲ್ಲುವಂತೆ ಮಾಡಿದೆ.

ಇದನ್ನು ಓದಿ: Sundarlal Bahugana: ಅಪ್ಪಿಕೊ ಚಳವಳಿ ನೇತಾರ ಸುಂದರ್ ಲಾಲ್​ ಬಹುಗುಣ ಕೊರೋನಾದಿಂದ ನಿಧನ

ಆಸ್ಪತ್ರೆಯಲ್ಲಿರುವಾಗಲೆ ತಂದೆ ಸಾವು

ಇನ್ನು ಅಶೋಕ್ ಪಾಟೀಲ ಅವರ ತಂದೆ ಬೈರು ಪಾಟೀಲ್ ಬಿಪಿ ಕಾಯಿಲೆಯಿಂದ ಬಳಲುತ್ತಿದ್ದರು. ಮಗ ಆಸ್ಪತ್ರೆಗೆ ದಾಖಲಾದ ಮರು ದಿನವೆ ಅಂದರೆ ಏಪ್ರಿಲ್ 29 ರಂದು ತಂದೆ ಬೈರು ಪಾಟೀಲ್ ಕೂಡ ನಿಧನ ಹೊಂದಿದ್ದಾರೆ. ತಂದೆ ತೀರಿಹೊದ ಸುದ್ದಿ ಕೇಳಿದರೆ ಗಾಬರಿಗೊಳ್ಳುತ್ತಾರೆ ಅನ್ನುವ ಕಾರಣದಿಂದ ತಂದೆ ತೀರಿ ಹೋದ ವಿಷಯವನ್ನು ಅಶೋಕ ಪಾಟೀಲ್​ಗೆ ತಿಳಿಸದೆ ಕುಟುಂಬಸ್ಥರೆ ತಂದೆಯ ಅಂತ್ಯಕ್ರಿಯೆ ಮಾಡಿದ್ದರು. ಆದರೆ ವಿಧಿ ಎಷ್ಟು ಕ್ರೂರಿ ಅಂದ್ರೆ ತಂದೆ ಸಾವನ್ನಪ್ಪಿದ 6 ದಿನಕ್ಕೆ ಆಸ್ಪತ್ರೆಯಲ್ಲಿದ್ದ ಮಗ ಅಶೋಕ ಸಹ ತೀರಿ ಹೋಗಿದ್ದಾರೆ.

ಇನ್ನು ಅಜ್ಜ ಹಾಗೂ ತಂದೆಯ ಮರಣದಿಂದಾಗಿ ಮಕ್ಕಳು ಸೇರಿದಂತೆ ಇಡಿ ಕುಟುಂಬ ಈಗ ಶೋಕಗ್ರಸ್ತವಾಗಿದೆ. ಸದ್ಯ ಅಶೋಕ ಅವರ ಸಹೋದರನ ಮನೆಯಲ್ಲಿರುವ ಇಡಿ ಕುಟುಂಬ ಸರ್ಕಾರದ ಸಹಾಯಕ್ಕಾಗಿ ಕಾದು ಕುಳಿತಿದೆ. ಅನುಕಂಪದ ಆಧಾರದ ಮೇಲೆ ಪತ್ನಿಗೆ ಕೆಲಸ ನೀಡಬೇಕು ಹಾಗೂ ಮಕ್ಕಳ  ವಿದ್ಯಾಭ್ಯಾಸವನ್ನು ಸರ್ಕಾರವೇ ನೋಡಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದೆ.
Published by:HR Ramesh
First published: