ಬೆಳಗಾವಿ (ಜುಲೈ,31): ದೇಶದಲ್ಲಿ ಕಳೆದ 18 ತಿಂಗಳಿನಿಂದ ಕೋವಿಡ್ ಜನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸೋಂಕಿನಿಂದ ಉದ್ಯಮಗಳು ನಿಂತು ಹೋಗಿದ್ದು ಜನರ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಸಿದೆ. ಅದೇ ರೀತಿ ನಮ್ಮ ಉತ್ಸವ, ಹಬ್ಬಗಳ ಆಚರಣೆ ಮೇಲೆ ಸಹ ದೊಡ್ಡ ಪರಿಣಾಮ ಬೀರಿದೆ. ಸೆ. 10ರಿಂದ ನಡೆಯುವ ಗಣೇಶ ಉತ್ಸವ ಮೇಲೆ ಕೋವಿಡ್ ಮೂರನೇ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತೆ ವಹಿಸಿದ ಬೆಳಗಾವಿ ಜಿಲ್ಲಾಡಳಿತ ಈಗಲೇ ಹಬ್ಬರ ಆಚರಣೆ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಹತ್ತಿರದ ದೇವಾಲಯಗಳಲ್ಲಿ ಸ್ಥಾಪಿಸಬೇಕು. ಗಣೇಶ ಆಚರಣೆಗೆ ಪಾಲಿಕೆ, ಪೊಲೀಸ್, ಹೆಸ್ಕಾಂ, ಮಾಲನ್ಯ ನಿಯಂತ್ರಣ, ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಸೋಂಕಿನ ಮೂರನೇ ಅಲೆಯ ಭೀತಿ ಇರುವುದರಿಂದ ಯಾವುದೇ ರೀತಿಯ ಬಣ್ಣ, ಡಾಲ್ಬಿ, ಪಟಾಕಿಗಳನ್ನು ಸಿಡಿಸದೇ ಸರಳವಾಗಿ ಹಬ್ಬ ಆಚರಣೆ ಮಾಡಬೇಕು. ದೇವಸ್ಥಾನಗಳಲ್ಲಿ ಸ್ಥಾಪನೆ ಮಾಡುವ ಮೂರ್ತಿ 4 ಅಡಿ ಹಾಗೂ ಮನೆಗಳಲ್ಲಿ ಸ್ಥಾಪಿಸುವ ಮೂರ್ತಿಗಳು 2 ಅಡಿಗಿಂತ ಎತ್ತರ ಇರಬಾರದು. ಜತೆಗೆ ಪಿಓಪಿ ಬದಲಾಗಿ ಮಣ್ಣನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳು ಸ್ಥಾಪನೆ ಮಾಡಬೇಕು. ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರೋ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲವೇ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿದ ಮೊಬೈಲ್ ಟ್ಯಾಂಕ್ ನಲ್ಲಿ ವಿಸರ್ಜನೆ ಮಾಡಬೇಕು ಎಂದು ಆದೇಶಿಸಲಾಗಿದೆ.
ಇದನ್ನು ಓದಿ: 8 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ; ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನಕ್ಕೆ ಕೇಬಲ್ ನೆಟವರ್ಕ್, ವೆಬ್ ಸೈಟ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಾಡಿಕೊಳ್ಳಬೇಕು. ಗಣೇಶ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ 5ಕ್ಕೂ ಹೆಚ್ಚು ಜನ ಸೇರಬಾರದು, ಎಲ್ಲರಿಗೂ ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು. ಜಿಲ್ಲಾಡಳಿತ ಜನರ ಆರೋಗ್ಯ ದೃಷ್ಠಿಯಿಂದ ಸೂಚಿಸಿರುವ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಣೆ ಮಾಡಲಾಗುತ್ತದೆ. ಬೆಳಗಾವಿ ನಗರವೊಂದರಲ್ಲಿಯೇ 450ಕ್ಕೂ ಸಾರ್ವಜನಿಕ ಗಣೇಶ ಸ್ಥಾಪನೆ ಆಗುತ್ತವೆ. ಅಷ್ಟೇ ಅಲ್ಲದೇ ಇಲ್ಲಿನ ಗಣೇಶ ಉತ್ಸವಕ್ಕೆ ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು ಬಂದು ಆರಂಭಿಸಿದ್ದರು. ನಂತರ ವರ್ಷದಿಂದ ವರ್ಷಕ್ಕೆ ಇದು ವಿಜೃಂಭಣೆಯಿಂದ ನಡೆಯುತ್ತದೆ. ಗಣೇಶ ಉತ್ಸವ ಮೆರವಣಿಗೆ ನೋಡಲು ಲಕ್ಷಾಂತರ ಜನ ಪ್ರತಿ ವರ್ಷ ಸೇರುತ್ತಾರೆ. ಆದರೇ ಕೋವಿಡ್ ಮೂರನೇ ಅಲೆಯ ಕಾರಣದಿಂದ ಈ ವರ್ಷ ಸಾರ್ವಜನಿಕ ಗಣೇಶ ಉತ್ಸವ ದೇವಾಲಯಗಳಲ್ಲಿ ಆಚರಣೆ ಮಾಡಬೇಕು ಸೇರಿದಂತೆ ಅನೇಕ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೊರಡಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ