ಬೆಳಗಾವಿ (ಜೂನ್ 26): ರಾಜ್ಯದಲ್ಲೂ ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚಿದ ಕಾರಣ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಹಾಗೂ ಸಾರಿಗೆ ನೌಕರರ ಪ್ರತಿಭಟನೆ ಪರಿಣಾಮ ರಾಜ್ಯ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ರಾಜ್ಯದಲ್ಲಿ ಕಳೆದ ಮಾರ್ಚ್ ನಿಂದ ನೌಕರರ ಪ್ರತಿಭಟನೆ ಹಾಗೂ ಲಾಕ್ ಡೌನ್ ನಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಸದ್ಯ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದ್ದು, ಕೇವಲ ಶೇಖಡ 50 ಪ್ರಯಾಣಿಕರ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಇದು ಸಹ ಇಂಧನ ಹಾಗೂ ಸಂಬಳಕ್ಕೆ ಕೊರತೆ ಆಗುತ್ತಿದೆ. ಆದರೆ ಜನರ ಆರೋಗ್ಯ ದೃಷ್ಠಿಯಿಂದ ಕಡಿಮೆ ಪ್ರಯಾಣಿಕರನ್ನು ಬಸ್ ನಲ್ಲಿ ಹಾಕಲಾಗುತ್ತಿದೆ ಎಂದು ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಾವಿರ ನೌಕರರ ಸಂಬಳ ನೀಡಲು 2600 ಕೋಟಿಯಷ್ಟು ಹಣವನ್ನು ಸರ್ಕಾರದಿಂದ ಭರಿಸಲಾಗಿದೆ. ರಾಜ್ಯದಲ್ಲಿಯೇ ಸಾರಿಗೆ ಇಲಾಖೆ ಅತ್ಯಂತ ಹೆಚ್ಚು ತಾಪತ್ರಯ ಅನುಭವಿಸಿದೆ. ಇನ್ನೂ ಜುಲೈ ತಿಂಗಳಲ್ಲಿ ಸಾರಿಗೆ ನೌಕರರ ಧರಣಿ ನಡೆಸಲು ಸಿದ್ಧರಾಗುತ್ತಿದ್ದಾರೆ. ಈ ಬಗ್ಗೆ ಸಹ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಧರಣಿ ನಡೆಸಲ್ಲ ಎಂದಿದ್ದಾರೆ. ಈ ಹಿಂದೆ ಸಾರಿಗೆ ನೌಕರರ ಧರಣಿ ಸಂದರ್ಭದಲ್ಲಿ ಅನೇಕರು ತಪ್ಪು ಮಾಹಿತಿ ಕೊಟ್ಟು ಹುನ್ನಾರು ಮಾಡಿದ್ರು. ಈ ಸಲ ಧರಣಿ ಮಾಡಲ್ಲ ನಿಮ್ಮ ಜತೆಗೆ ಕಷ್ಟದ ಸಂದರ್ಭದಲ್ಲಿ ಕೈ ಜೋಡಿಸುತ್ತೇವೆ ಎಂದು ಸಾರಿಗೆ ನೌಕರರ ಮುಖಂಡರು ಹೇಳಿದ್ದಾರೆ ಎಂದರು. ಹುನ್ನಾರ ನಡೆಸಿರೋವರು ಬಗ್ಗೆ ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಇದನ್ನು ಓದಿ: ಡ್ರಗ್ ಪರೇಡ್‌ನಲ್ಲಿ ಸುಟ್ಟು ಬೂದಿಯಾಯಿತು ಬರೋಬ್ಬರಿ 50 ಕೋಟಿ ಮೌಲ್ಯದ 4 ಟನ್ ಮಾದಕ ವಸ್ತು!
ಸಾರಿಗೆ ನೌಕರರ ಧರಣಿಯ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿವೆ. ಸಾರ್ವಜನಿಕರಿಗೆ ತೊಂದರೆ ಆಗಬೇಕು, ಇಲಾಖೆಗೆ ಹಾನಿ ಆಗಬೇಕು. ಜತೆಗೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎಂದು ಹುನ್ನಾರ ನಡೆಸಿದ್ದರು. ಸಾರಿಗೆ ನೌಕರರಿಗೆ ಪ್ರಚೋದನೆ ನೀಡಿ ಈ ರೀತಿಯಲ್ಲಿ ಧರಣಿ ಮಾಡಿಸಲಾಯಿತು. ಈಗ ಸಾರಿಗೆ ನೌಕರರಿಗೆ ಇದೆಲ್ಲ ಮನವರಿಕೆ ಆಗಿದೆ. ಈ ಸಲ ಮತ್ತೆ ಹೋರಾಟದ ಹಾದಿ ಹಿಡಿಯಲ್ಲ ಎಂದು ಡಿಸಿಎಂ ಸವದಿ ಹೇಳಿದರು.
ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ರೂಪ ಪಡೆದಿದ್ದು, ಡೆಲ್ಟಾ ಪ್ಲಸ್ ಮಾರಕ ಎಂಬುದು ಇದೀಗ ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡು ಇರೋ ಬೆಳಗಾವಿ, ವಿಜಯಪುರ, ಕಲಬುರ್ಗಿ ಹಾಗೂ ಬೀದರ್ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಕೊರೋನಾ ನೆಗೆಟಿವ್ ವರದಿ ಇರೋವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಮೊದಲ ಹಾಗೂ ಎರಡನೇ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಹ ಈ ಬಗ್ಗೆ ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ