Uttara Kannada: ದಶಕಗಳ ಕಾಲ ಬಂದರಿನಲ್ಲೇ ಮಳೆ- ಬಿಸಿಲಿಗೆ ಮೈಯೊಡ್ಡಿ ಬಿದ್ದಿರುವ ಕಬ್ಬಿಣ ಅದಿರಿಗೆ ಮುಕ್ತಿಯ ಕಾಲ

ಕಾರವಾರ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರಿನಲ್ಲಿ ಅರ್ಧದಷ್ಟು ಕಳವಾಗಿದ್ದಲ್ಲದೆ, ಮಳೆಯಲ್ಲಿ ಕೊಚ್ಚಿ ಹೋಗಿವೆ. ಹರಾಜಿಗಾಗಿ ಅಧಿಕಾರಿಗಳು  ಇತ್ತಿಚಿಗೆ ನಡೆಸಿದ ಮೌಲ್ಯಮಾಪನದಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್ ಅದಿರು ಸಿಕ್ಕಿದೆ.

ಕಬ್ಬಿಣದ ಅದಿರು

ಕಬ್ಬಿಣದ ಅದಿರು

  • Share this:
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರು (baithkol, karwar) ಪ್ರದೇಶದಲ್ಲಿ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡು ದಾಸ್ತಾನು ಮಾಡಿರುವ ಕಬ್ಬಿಣದ ಅದಿರನ್ನು (Iron ore) ಲೈವ್ ಬಿಡ್ (Live Bid) ನಡೆಸಲು ಕೋರ್ಟ್ ಅನುಮತಿ ನೀಡಿದ್ದು, ಅದರಂತೆ ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಹರಾಜಿಗೆ ಸಮಯ ನಿಗದಿಪಡಿಸಲು ಮುಂದಾಗಿದೆ. ಈ ಮೂಲಕ ದಶಕಗಳ ಕಾಲ ಬಂದರಿನಲ್ಲೇ ಮಳೆ- ಬಿಸಿಲಿಗೆ ಮೈಯೊಡ್ಡಿ ಬಿದ್ದಿದ್ದ ಅದಿರಿಗೆ ಅಂತೂ ಮುಕ್ತಿ ಸಿಗುವ ಕಾಲ ಕೂಡಿಬಂದಿದೆ. ಇತ್ತಿಚಿಗೆ ನಡೆಸಿದ ಮೌಲ್ಯಮಾಪನದಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್ ಅದಿರು ಸಿಕ್ಕಿದ್ದು, ಇದನ್ನ ಈಗ ಹರಾಜು ಹಾಕಲಾಗುತ್ತಿದೆ.

ಏನಿದು ಪ್ರಕರಣ? ಹತ್ತು ವರ್ಷದ ಬಳಿಕ ಒಂದು ಹಂತದ ಮುಕ್ತಿ

ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನ ತೆಗೆದು ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡಿ ಚೀನಾಕ್ಕೆ ಕಾರವಾರ ಹಾಗೂ ಅಂಕೋಲಾದ ಬೇಲೆಕೇರಿ ಬಂದರಿನ ಮೂಲಕ ರವಾನೆ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ 2010ರ ಮಾರ್ಚ್ ನಲ್ಲಿ ದಾಳಿ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅಧಿಕಾರಿಗಳು, ಕಾರವಾರದ ಬೈತಖೋಲ್ ಬಂದರಿನಲ್ಲಿ ಅಂದಾಜು 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಹಾಗೂ ಬೇಲೇಕೇರಿಯಲ್ಲಿ 8 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರನ್ನು ಜಪ್ತುಪಡಿಸಿಕೊಂಡಿದ್ದರು.

ಇದನ್ನೂ ಓದಿ:  Weekend Curfew: ಮಾಸ್ಕ್ ಹಾಕಲ್ಲ ಏನ್ ಮಾಡ್ತೀಯಾ ಎಂದ ಯುವಕನಿಗೆ ಕಪಾಳಮೋಕ್ಷ

ಕಾರವಾರ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರಿನಲ್ಲಿ ಅರ್ಧದಷ್ಟು ಕಳವಾಗಿದ್ದಲ್ಲದೆ, ಮಳೆಯಲ್ಲಿ ಕೊಚ್ಚಿ ಹೋಗಿವೆ. ಹರಾಜಿಗಾಗಿ ಅಧಿಕಾರಿಗಳು  ಇತ್ತಿಚಿಗೆ ನಡೆಸಿದ ಮೌಲ್ಯಮಾಪನದಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್ ಅದಿರು ಸಿಕ್ಕಿದ್ದು, ಇದನ್ನ ಈಗ ಹರಾಜು ಹಾಕಲಾಗುತ್ತಿದೆ.

ದಾಳಿ‌ ಮಾಡಿದ ಸಂದರ್ಭದಲ್ಲಿ ಅದಿರಿನ ದರ ಎಷ್ಟು? ಈಗ ಅದಿರಿನ ದರ ಎಷ್ಟು?

2007ರಿಂದ ಅವ್ಯಾಹತವಾಗಿ ಬಳ್ಳಾರಿಯಿಂದ ಅದಿರು ಕಾರವಾರ, ಬೆಲೆಕೇರಿ, ಬಂದರಿನ ಮೂಲ ವಿದೇಶಕ್ಕೆ ರಫ್ತು ಆಗುತ್ತಿತ್ತು .ಈ‌ ಸಂದರ್ಭದಲ್ಲಿ A ಗುಣಮಟ್ಟದ ಅದಿರಿನ‌ ದರ ಒಂದು ಟನ್ ಗೆ 5500ರಷ್ಟಿತ್ತು, B ಗುಣಮಟ್ಟದ ಅದಿರಿನ ದರ ಒಂದು ಟನ್ ಗೆ 4000ರೂ ಇತ್ತು, ಇನ್ನು C ಗುಣಮಟ್ಟದ ಅದಿರಿನ ದರ 3000 ರೂ ಇತ್ತು, ಈಗ ಅದಿರಿನ ಬೆಲೆ A,B,C ಮೂರು ಗುಣಮಟ್ಟದ ಅದಿರಿಗೂ ಒಂದೆ ದರ ಇದೆ ಅಂತೆ ಅಂದ್ರೆ ಈಗ 4000 ರೂ ಬೆಲೆ ಇದೆ ಎನ್ನೋದು ಬಲ್ಲ ಮೂಲಗಳಿಂದ ನ್ಯೂಸ್‌18 ಕನ್ನಡ ಪಡೆದುಕೊಂಡಿದೆ.

ಈ ಪ್ರಕರಣವನ್ನ ಸಿಬಿಐ ತನಿಖೆ ನಡೆಸುತ್ತಿದ್ದು, ವಿಚಾರಣೆ ಹಂತದಲ್ಲಿದೆ. ಈ ನಡುವೆ ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದ ಅದಿರನ್ನು ಹರಾಜಿನ ಮೂಲಕ ಮಾರಾಟ ಮಾಡಲು ಕೇಳಿದ್ದ ಅವಕಾಶಕ್ಕೆ ಕಾರವಾರ ಜೆ.ಎಂ.ಎಫ್.ಸಿ ಕೋರ್ಟ್ ಅಸ್ತು ಎಂದಿತ್ತು.

ಅದರಂತೆ ಈಗ ಅದಿರು ಹರಾಜಿಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಅದಿರು ಕೊಳ್ಳಲು ಆಸಕ್ತಿ ಹೊಂದಿರುವ ಕಂಪನಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಬೇರೆ ರಾಜ್ಯದ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದ್ದು, ಇನ್ನು ಕೆಲ ದಿನದಲ್ಲಿಯೇ ಹರಾಜು ನಡೆಯಲಿದೆ.

ಕಬ್ಬಿಣ ಅದಿರು ಸಾಗಾಟವನ್ನು ಸುಗಮಗೊಳಿಸಲು ಕಟ್ಟಪ್ಪಣೆ

ಇನ್ನು ಈ ಸಂಬಂಧ ಅಧಿಕಾರಿಗಳ ಸಭೆಯನ್ನೂ ನಡೆಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬಂದರು ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಸಾಗಾಟ ಮಾಡುವಾಗ ಸಿಸಿ ಟಿವಿ ಕ್ಯಾಮೆರಾ ಹಾಗೂ ಅಲ್ಲಿ ತೆರಳುವ ವಾಹನಗಳ ಸಂಖ್ಯೆ, ಸಮಯ ಇತ್ಯಾದಿ ಕ್ರಮಗಳೊಂದಿಗೆ ಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಇದನ್ನೂ ಓದಿ:  Bengaluru: ಗಂಡನ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿ ಅಮಾಯಕ ಜೀವ ಬಲಿ ಪಡೆದ ಪತ್ನಿ

ಅರಣ್ಯ ಇಲಾಖೆ, ಬಂದರು ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆಯನ್ನು ಕೈಗೊಂಡು ಕಬ್ಬಿಣ ಅದಿರು ಸಾಗಾಟವನ್ನು ಸುಗಮಗೊಳಿಸಲು ಕಟ್ಟಪ್ಪಣೆ ನೀಡಿದ್ದಾರೆ.

ಒಟ್ಟಾರೆ ಸುಮಾರು 12 ವರ್ಷಗಳಿಂದಲೂ ಪ್ರಯೋಜನಕ್ಕೆ ಬರದೇ ಕಾರವಾರದ ಬಂದರಿನಲ್ಲಿ ಕೊಳೆಯುತ್ತಿದ್ದ ಅದಿರಿಗೆ ಅಂತೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಅಂತೆಯೇ ಬೇಲೇಕೇರಿಯಲ್ಲಿರುವ ಅದಿರನ್ನೂ ಹರಾಜು ಹಾಕಲು ಅಧಿಕಾರಿಗಳು ಪ್ರಯತ್ನ ನಡೆಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
Published by:Mahmadrafik K
First published: