ಬೆಳಗಾವಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನ ಮೀರಿಸಿದ ಪಕ್ಷೇತರರು; ನಾಲ್ಕರಲ್ಲಿ ಪಕ್ಷೇತರರು ಕ್ಲೀನ್ ಸ್ವೀಪ್


Updated:September 3, 2018, 7:49 PM IST
ಬೆಳಗಾವಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನ ಮೀರಿಸಿದ ಪಕ್ಷೇತರರು; ನಾಲ್ಕರಲ್ಲಿ ಪಕ್ಷೇತರರು ಕ್ಲೀನ್ ಸ್ವೀಪ್

Updated: September 3, 2018, 7:49 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ಸೆ. 03): ಈ ಬಾರಿಯ ನಗರಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಬೆಳಗಾವಿ ಜಿಲ್ಲೆ ಸಾಕಷ್ಟು ಗಮನ ಸೆಳೆಯುತ್ತಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿಗಳೇ ವಿಜೃಂಭಿಸಿದ್ದಾರೆ. ರಾಜ್ಯಾದ್ಯಂತ ಚುನಾವಣೆ ನಡೆದ 2,662 ವಾರ್ಡ್​ಗಳ ಪೈಕಿ ಪಕ್ಷೇತರರು ಗೆದ್ದಿರುವುದು 329 ಮಾತ್ರ. ಆದರೆ, ಈ 329ರಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲೇ 144 ಸ್ಥಾನಗಳನ್ನ ಪಕ್ಷೇತರರೇ ಪಡೆದಿದ್ದಾರೆ. ಜಿಲ್ಲೆಯ 14 ನಗರಸಂಸ್ಥೆಗಳಲ್ಲಿ ಪಕ್ಷೇತರು ಐದು ಸಂಸ್ಥೆಗಳನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಖಾನಾಪುರ ಮತ್ತು ಕೊಣ್ಣೂರು ಪಟ್ಟಣಪಂಚಾಯಿತಿಗಳು ಹಾಗೂ ಚಿಕ್ಕೋಡಿ ಪುರಸಭೆಯಲ್ಲಿ ಪಕ್ಷೇತರರು ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಶೂನ್ಯ ಸಂಪಾದನೆಯಾಗಿದೆ. ಗೋಕಾಕ್ ನಗರಸಭೆಯ 31 ವಾರ್ಡ್​ಗಳಲ್ಲಿ ಪಕ್ಷೇತರರೇ 30 ಜಯಿಸಿದ್ದಾರೆ. ನಿಪ್ಪಾಣಿ ನಗರಸಭೆಯ 31 ವಾರ್ಡ್​ಗಳಲ್ಲಿ ಪಕ್ಷೇತರರು 18ರಲ್ಲಿ ಗೆಲುವು ಕಂಡಿದ್ದಾರೆ.

ಕೊಣ್ಣೂರು ಮತ್ತು ಗೋಕಾಕ್​ನಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಖದರ್ ತೋರಿದ್ದಾರೆ. ಜಾರಕಿಹೊಳಿ ಬೆಂಬಲಿಸಿದ ಎಲ್ಲಾ ಪಕ್ಷೇತರರ ಅಭ್ಯರ್ಥಿಗಳು ಇಲ್ಲಿ ಗೆಲುವು ಕಂಡಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಅವರು ಮುಂಬೈ-ಕರ್ನಾಟಕ ಭಾಗದಲ್ಲಿ ತಾವೊಬ್ಬ ಪ್ರಭಾವಿ ಮುಖಂಡ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್​ಗೆ ರವಾನಿಸಿದ್ದಾರೆ.

ಆದರೆ, ಖಾನಾಪುರ, ಚಿಕ್ಕೋಡಿ ಮತ್ತು ನಿಪ್ಪಾಣಿಯಲ್ಲಿ ಪಕ್ಷೇತರರೇ ಗುಂಪು ರಚಿಸಿಕೊಂಡು ಚುನಾವಣೆಯನ್ನು ಎದುರಿಸಿ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣುಮುಕ್ಕಿಸಿದ್ದಾರೆ. ಬೆಳಗಾವಿಯ 14 ನಗರಸಂಸ್ಥೆಗಳಲ್ಲಿ ಎಲ್ಲಿಯೂ ಪಕ್ಷೇತರರು ಶೂನ್ಯ ಸಂಪಾದನೆ ಮಾಡಿಲ್ಲ. ಆದರೆ, ಬಿಜೆಪಿ ನಾಲ್ಕು ಕಡೆ ಯಾವ ವಾರ್ಡನ್ನೂ ಗೆಲ್ಲಲು ವಿಫಲವಾಗಿದೆ. ಕಾಂಗ್ರೆಸ್ ಪಕ್ಷ 7 ಕಡೆ ಸೊನ್ನೆ ಸುತ್ತಿರುವುದು ವಿಶೇಷ. ಇನ್ನು, ಜೆಡಿಎಸ್ ಪಕ್ಷವು ಎರಡು ನಗರಸಂಸ್ಥೆಗಳಲ್ಲಿ ಮಾತ್ರ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ 12 ಕಡೆ ಶೂನ್ಯ ಸಂಪಾದನೆ ಮಾಡಿದೆ.

ಬೆಳಗಾವಿ ಜಿಲ್ಲೆಯ 14 ನಗರಸಂಸ್ಥೆಗಳ ಒಟ್ಟಾರೆ ಫಲಿತಾಂಶ:
ಒಟ್ಟು ವಾರ್ಡ್​ಗಳು: 343
Loading...

ಬಿಜೆಪಿ: 104
ಕಾಂಗ್ರೆಸ್: 85
ಜೆಡಿಎಸ್: 10
ಪಕ್ಷೇತರರು: 144
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...