ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಚುನಾವಣಾ ಕಾವು ಹೆಚ್ಚಾಗುತ್ತಿದೆ. ಮಾಜಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಬೆನಲ್ಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಪಂತಬಾಳೇಕುಂದ್ರಿ ಪ್ರಜಾಧ್ವನಿ ಸಮಾವೇಶ ಇಂದು ನಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ ಬೇಟೆ ನಡೆಸಿದ್ದಾರೆ. ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕ ಜಮೀರ ಅಹ್ಮದ್ ಖಾನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಿಪಬ್ಲಿಕ್ ಆಫ್ ಗೋಕಾಕ್ ಆಗಿದೆ!
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ನೋಡಿ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅದರಲ್ಲೂ ಸ್ವಯಂ ಘೋಷಿತ ನಾಯಕ ಗೋಕಾಕ್ ಶಾಸಕರಿಗೆ ಆಗುತ್ತಿಲ್ಲ. ಚುನಾವಣೆ ಎರಡು ತಿಂಗಳ ಇದ್ದಾಗ ನಮ್ಮ ಕ್ಷೇತ್ರಕ್ಕೆ ಬಂದಿದ್ದೀರಿ. ಕೋವಿಡ್, ಪ್ರವಾಹ ಇದ್ದಾಗ ಎಲ್ಲಿ ಹೋಗಿದ್ರಿ.
ರಮೇಶ್ ಜಾರಕಿಹೊಳಿ ಅವರು 23 ವರ್ಷ ಶಾಸಕರಾಗಿ ಕೆಲಸ ಮಾಡಿದ್ದು, ಮಾಜಿ ಸಚಿವರಿಗೆ ಅವರದ್ದೇ ಪಕ್ಷದ ಸರ್ಕಾರದ ಅಧಿಕಾರದ ಅವಧಿ 16 ವರ್ಷ ಇತ್ತು. ಆದರೆ ಮೊದಲ ಬಾರಿಗೆ ಶಾಸಕಿಯಾದ ನನಗೆ ಸಂಕುಚಿತ ಭಾವನೆ ಇದೆ ಎನ್ನೋದನ್ನು ಬಿಂಬಿಸುತ್ತಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಪೊಲೀಸ್ ಠಾಣೆ, ತಾಲೂಕು ಅಧಿಕಾರಿ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಹೇಗೆ ಕೆಲಸ ನಡೆಯುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಒಂದು ಎಕರೆ ಖರೀದಿಗೆ 10 ಲಕ್ಷ ರೂಪಾಯಿ ಕೊಡಬೇಕು. ಇದು ಗೋಕಾಕ್ ರಿಪಬ್ಲಿಕ್ ನಿಯಮಾವಳಿ, ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ನನ್ನ ಕ್ಷೇತ್ರದ ಜನರ ಕಬ್ಬಿನ ಬಿಲ್ ಕೊಟ್ಟು ಮಾತನಾಡಿ
ನೂರಾರು ಕೋಟಿಗೆ ತಮ್ಮನ್ನು ತಾವೇ ಮಾರಿಕೊಂಡು ನನಗೆ ಭ್ರಷ್ಟಾಚಾರದ ಪಾಠ ಹೇಳಲು ಬಂದಿದ್ದಾರೆ. ಮಾನ್ಯ ಗೋಕಾಕ್ ಕ್ಷೇತ್ರದ ಶಾಸಕರೇ ಭ್ರಷ್ಟಾಚಾರ ಒಂದು ಕಡೆ ಇರಲಿ. ನನ್ನ ಕ್ಷೇತ್ರದ ಜನರ ಕಬ್ಬಿನ ಬಿಲ್ ಕೊಟ್ಟು ಮಾತನಾಡಿ. ನಂದಿಹಳ್ಳಿಯಲ್ಲಿ ನಿಮ್ಮ ಹೆಸರು ಬರೆದಿಟ್ಟು ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡ. ರಾಹುಲ್ ಗಾಂಧಿ ಬಂದ ದಿನವೇ ಆತ್ಮಹತ್ಯೆ ಆಗಿದೆ. ನಮ್ಮ ಕ್ಷೇತ್ರದ ಜನರ ಬಾಕಿ ಹಣ ಕೊಟ್ಟು ಮಾತನಾಡಿ ಎಂದು ಸವಾಲು ಎಸೆದರು.
ಸ್ವಯಂ ಘೋಷಿತ ನಾಯಕರಿಗೆ ಪ್ರಶ್ನೆ ಮಾಡುತ್ತೇನೆ. ನಾಗೇಶ ಮನ್ನೊಳ್ಕರ್ ಕರೆದುಕೊಂಡು ಓಡಾಡುತ್ತಿದ್ದಾರೆ. ಹಿಂದಿನ ಚುನಾವಣೆ ರಾತ್ರಿ ನಮ್ಮ ಮನೆಗೆ ಬಂದಿದ್ದರು. 40 ಲಕ್ಷ ರೂಪಾಯಿ ಕೊಟ್ಟರೇ ನಿಮ್ಮ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದರು. ಈ ಬಗ್ಗೆ ಪ್ರಮಾಣ ಮಾಡಲು ಸಿದ್ಧವಾಗಿದ್ದೇನೆ. ಮಾಳೆಕರಣಿ ದೇವಿಯ ಶಪಥ ಮಾಡಲು ನಾನು ಸಿದ್ಧ, ವೀರಕುಮಾರ, ವಿವೇಕ ಕುಮಾರ್, ಮಹಾಂತೇಶ ಕವಟಗಿಮಠ ಅವರನ್ನು ಮನೆಗೆ ರಮೇಶ ಜಾರಕಿಹೊಳಿ ಹಚ್ಚಿದ್ದರು. ಅವರಿಗೆ ಒಟ್ಟು ಸಮಾಧಾನ ಇಲ್ಲ ಎಂದರು.
ಇದನ್ನೂ ಓದಿ: Sumalatha: ರಾಜ್ಯ ರಾಜಕೀಯಕ್ಕೆ ಮಂಡ್ಯ ಸಂಸದೆ? ಕಾಂಗ್ರೆಸ್, ಬಿಜೆಪಿ ಹೆಸರು ಹೇಳುವ ಮೂಲಕ ಒತ್ತಡ ಹೇರುವ ತಂತ್ರ!
ನಾನು ನಿರ್ಮಾಣ ಮಾಡಿರೋ ಮೂರ್ತಿ ಉದ್ಘಾಟನೆ ಮಾಡಲು ಹೊರಟ್ಟಿದ್ದೀರಿ. ಮಾಜಿ ಶಾಸಕ ಸಂಜಯ ಪಾಟೀಲ್ಗೆ ನಿಮಗೆ ಏನು ಹಕ್ಕಿದೆ. ಅಲ್ಲಿನ ಮಣ್ಣನ್ನು ಮಾರಾಟ ಮಾಡಿ ದುಡ್ಡು ಮಾಡಿದ್ದೀರಿ. ಆದರೆ ನಿಮ್ಮ ಶಾಸಕ ನಿಧಿಯಿಂದ ಯಾಕೆ ಮಾಡಲು ಆಗಲಿಲ್ಲ. ಗೋಮಟೇಶ ವಿದ್ಯಾಪೀಠಕ್ಕೆ 40 ಲಕ್ಷ ರೂಪಾಯಿ ಹಣ ತಗೊಂಡು ಹೋದರು. ಶಿಕ್ಷಣ ಸಂಸ್ಥೆ ದಕ್ಷಿಣದಲ್ಲಿ ಇದ್ದರೂ ಅಕ್ರಮವಾಗಿ ಹಣ ತೆಗೆದುಕೊಂಡು ಹೋದರು ಎಂದು ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ