ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ (Maharashtra Western hills) ಧಾರಾಕಾರ ಮಳೆ (Rainfall) ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳು (Belagavi Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha), ಮಾರ್ಕಂಡೇಯ (Markandeya) ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರಿದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ.ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ (Rakkasakoppa Dam) ಭರ್ತಿಯಾಗಿದೆ. ಅರ್ಧ ಟಿಎಂಸಿ ಸಾಮರ್ಥ್ಯ 2475 ಅಡಿಯ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು ಮುಂಜಾಗ್ರತಾ ಕ್ರಮವಾಗಿ ರಕ್ಕಸಕೊಪ್ಪ ಜಲಾಶಯದ 6 ಗೇಟ್ಗಳ ಪೈಕಿ ಮೂರು ಗೇಟ್ಗಳಿಂದ ಅಲ್ಪ ಪ್ರಮಾಣದಲ್ಲಿ ನೀರನ್ನು ಮಾರ್ಕಂಡೇಯ ನದಿಗೆ ಹರಿಬಿಡಲಾಗುತ್ತಿದೆ.
ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಭಾನುವಾರ ತುಸು ಬಿಡುವು ಕೊಟ್ಟಿತ್ತು. ಮಾರ್ಕಂಡೇಯ ನದಿ ನೀರು ಮೈದುಂಬಿ ಹರಿಯುತ್ತಿದ್ದು ಬೆಳಗಾವಿ ತಾಲೂಕಿನ ಅಂಬೇವಾಡಿ, ಅಳತಗಾ, ಕಂಗ್ರಾಳಿ ಕೆ.ಹೆಚ್. ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ.
ಖಾನಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆ
ಖಾನಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಮಲಪ್ರಭಾ ನದಿಗೆ 17,150 ಕ್ಯೂಸೆಕ್ ಒಳಹರಿವು ಇದೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಬಳಿಯ ಸ್ವಯಂಭೂ ಮಾರುತಿ ದೇವಸ್ಥಾನ ಮುಳುಗಡೆ ಹಂತಕ್ಕೆ ತಲುಪಿದೆ.
ಇದನ್ನೂ ಓದಿ: Kodagu Rains: ತಡೆಗೋಡೆ ಕುಸಿಯುವ ಆತಂಕ; ಕೊಡಗು ಜಿಲ್ಲಾಡಳಿತ ಭವನ ಗಢ ಗಢ
ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆಯಿಂದ ಸುರಪುರ-ಕೇರವಾಡ ಗ್ರಾಮದಲ್ಲಿ ಗಂಗವ್ವ ಪಿರೋಜಿ ಗಡ್ಕರಿ ಅವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಗಡ್ಕರಿ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕಿ ನಿಂಬಾಳ್ಕರ್ ಭೇಟಿ
ಖಾನಾಪುರ ಕ್ಷೇತ್ರದ ನದಿ ತೀರದ ಗ್ರಾಮಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಮಂತುರ್ಗಾ ಬಳಿ ಹಾಲಾತ್ರಿ ಹಳ್ಳ ಹರಿದು ಸೇತುವೆ ಮುಳುಗಡೆಯಾಗಿದ್ದು ಸಿಂಧನೂರು - ಹೆಮ್ಮಡಗಾ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹೆಮ್ಮಡಗಾ ಅರಣ್ಯ ವಲಯ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಡಂಚಿನ ಗ್ರಾಮಗಳಲ್ಲಿ ಸೇತುವೆ ದುರಸ್ತಿ ಬಗ್ಗೆ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ. ಘಟಪ್ರಭಾ ನದಿಗೆ 28,791 ಕ್ಯೂಸೆಕ್ ಒಳಹರಿವು ಇದ್ದು ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಬಳಿ ಸೇತುವೆ ಮುಳುಗಡೆಯಾಗಿದೆ.
ಮುಳುಗಡೆಯಾದ ಸೇತುವೆ ಮೇಲೆ ಜನರ ಸಂಚಾರ
ಮುಳುಗಡೆಯಾದ ಸೇತುವೆ ಬಳಿ ಯುವಕರು ತಮ್ಮ ತಮ್ಮ ಬೈಕ್ಗಳನ್ನು ವಾಶ್ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪುಟ್ಟ ಮಕ್ಕಳನ್ನು ಸೇತುವೆ ಬಳಿ ಕರೆತಂದ ಕೆಲ ಬೈಕ್ ಸವಾರರು ಜೀವಭಯವಿಲ್ಲದೇ ಮುಳಗುಡೆಯಾದ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.
ಕೆಳಹಂತದ ಸೇತುವೆಗಳು ಮುಳುಗಡೆ
ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ಅವರಾದಿ - ಮೂಡಲಗಿ, ಅವರಾದಿ - ಮಹಾಲಿಂಗಪುರ, ಸುಣಧೋಳಿ - ಮೂಡಲಗಿ ಸೇರಿ ಹಲವು ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಮುಳುಗಡೆಯಾದ ಸೇತುವೆ ಮೇಲೆ ಜನಸಂಚಾರ ನಿಷೇಧಿಸುವ ನಿಟ್ಟಿನಲ್ಲಿ ತಾಲೂಕು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Krishna River Flood: ಕೃಷ್ಣೆಯಿಂದ ಸೇತುವೆ ಮುಳುಗಡೆ ಭೀತಿ, ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ
ಭಾನುವಾರ ಹಿನ್ನೆಲೆ ಬೆಳಗಾವಿ ಜಿಲ್ಲೆ ಗೋಕಾಕ ಜಲಪಾತ ವೀಕ್ಷಣೆಗೆ ತಂಡೋಪತಂಡವಾಗಿ ಜನರು ಆಗಮಿಸಿದ್ರು. ಜಲಪಾತ ಬಳಿ ಯಾರೂ ತೆರಳದಂತೆ ಗೋಕಾಕ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ರು.
ಸದ್ಯ ಬೆಳಗಾವಿಯಲ್ಲಿ ಮಳೆಯ ಪ್ರಮಾಣ ತಗ್ಗಿದರೂ ಸಹ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ನದಿಪಾತ್ರದ ಜನರ ನಿದ್ದೆಗೆಡಿಸಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ