• Home
  • »
  • News
  • »
  • state
  • »
  • Monsoon Session: ಬೆಳಗಾವಿ ಅಧಿವೇಶನ ಸಿದ್ಧತೆ ಪರಿಶೀಲಿಸಿದ ಸ್ಪೀಕರ್​ ಕಾಗೇರಿ; ಈ ಬಾರಿ ಮಂಡನೆಯಾಗಲಿದೆ 6 ವಿಧೇಯಕ

Monsoon Session: ಬೆಳಗಾವಿ ಅಧಿವೇಶನ ಸಿದ್ಧತೆ ಪರಿಶೀಲಿಸಿದ ಸ್ಪೀಕರ್​ ಕಾಗೇರಿ; ಈ ಬಾರಿ ಮಂಡನೆಯಾಗಲಿದೆ 6 ವಿಧೇಯಕ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಈ ಅಧಿವೇಶನದಲ್ಲಿ 6 ಮಸೂದೆಗಳನ್ನು ತರಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಚರ್ಚಿಸಿ ಅವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ರು.

  • Share this:

ಬೆಳಗಾವಿ (ಡಿ.12): ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha)  ಡಿ.19 ರಿಂದ 30 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಮಂಡಳದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು


ಅಧಿವೇಶನ ಸುಸೂತ್ರವಾಗಿ ನಡೆಯಲಿದೆ


ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು,  ವಸತಿ, ಊಟ, ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿದಾಗ ಇಡೀ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಉನ್ನತಮಟ್ಟದ ಅಧಿಕಾರಿಗಳು ಸೇರಿದಂತೆ ಇಡೀ ವ್ಯವಸ್ಥೆಯೇ ಇಲ್ಲಿ ಇರುವುದರಿಂದ ವಸತಿ, ಊಟೋಪಹಾರದ ಅತ್ಯುತ್ತಮ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ರು.




ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ


ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳು/ಸಿಬ್ಬಂದಿ ಆಗಮಿಸುವುದರಿಂದ ಸರಳ ರೀತಿಯ ಹಾಗೂ ಗುಣಮಟ್ಟದ ಆಹಾರವನ್ನು ಕಲ್ಪಿಸಬೇಕು. ಸಾರಿಗೆ ವ್ಯವಸ್ಥೆಯು ಪ್ರಮುಖವಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯರು ಮತ್ತು ಸಿಬ್ಬಂದಿ ತಂಡವನ್ನು ನಿಯೋಜಿಸಬೇಕು. ಅಗತ್ಯಬಿದ್ದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.


ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ


ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಸಭಾಧ್ಯಕ್ಷರಾದ ಕಾಗೇರಿ ಅವರು ನಿರ್ದೇಶನ ನೀಡಿದರು. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುವುದರಿಂದ ಅವರಿಗೂ ಕೂಡ ಉತ್ತಮ ಊಟೋಪಹಾರ ಕಲ್ಪಿಸಬೇಕು. ಜನರ ಅಪೇಕ್ಷೆಯಂತೆ ಉತ್ತಮ ರೀತಿಯಲ್ಲಿ ಅಧಿವೇಶನ ನಡೆಸುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮನ್ನು ನಾವು ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಸಭಾಧ್ಯಕ್ಷರಾದ ಕಾಗೇರಿ ಹೇಳಿದರು.




ಅಧಿವೇಶನದಲ್ಲಿ 6 ಮಸೂದೆ ತರಲಾಗುತ್ತಿದೆ


6 ಮಸೂದೆಗಳನ್ನು ಈ ಅಧಿವೇಶನದಲ್ಲಿ ತರಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಚರ್ಚಿಸಿ ಅವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ ನಾಲ್ಕು ಹೊಸ ವಿಧೇಯಕಗಳು ಬಂದಿರುತ್ತವೆ. ಬೇರೆ ಯಾವುದೇ ವಿಧೇಯಕ ಇದ್ದರೆ ಸರಕಾರ ಅವುಗಳನ್ನು ಮಂಡಿಸಲಿದೆ. ಮೊದಲ ದಿನ ವಿಧಾನ ಸಭೆ ಉಪಾಧ್ಯಕ್ಷ ಆನಂದ ಮಾಮನಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಹೇಳಿದ್ರು.


ಇದನ್ನೂ ಓದಿ: Mysuru: ಬಿಲ್ಡಿಂಗ್​ ಬಾಡಿಗೆ ಕೇಳಿದ್ದಕ್ಕೆ ರಂಪಾಟ; KSRTC ಡಿಪೋ ಅಧಿಕಾರಿಗೆ ಮಚ್ಚು ತೋರಿಸಿ ಧಮ್ಕಿ


ಯಾರಿಗೆ ಸಿಗುತ್ತೆ ಅತ್ಯುತ್ತಮ ಶಾಸಕ ಪ್ರಶಸ್ತಿ


ವಿಧಾನಸಭೆ ಅಧ್ಯಕ್ಷರಾದ ಬಳಿಕ ಅತ್ಯುತ್ತಮ ಶಾಸಕರನ್ನು ಆಯ್ಕೆಗೆ ತೀರ್ಮಾನಿಸಲಾಗಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುವುದು. ಆಯ್ಕೆ ಸಮಿತಿಯು ನೀಡುವ ವರದಿ ಆಧರಿಸಿ ಅತ್ಯುತ್ತಮ ಶಾಸಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಸಮಗ್ರ ಕರ್ನಾಟಕದ ಜತೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು.


ಇದಕ್ಕಾಗಿ ಸೂಕ್ತ ದಿನಗಳನ್ನು ನಿಗದಿಪಡಿಸಲಾಗುವುದು. ಅಧಿವೇಶನ ಹೊರತುಪಡಿಸಿ ಉಳಿದ ಅವಧಿಯಲ್ಲಿ ಸುವರ್ಣ ವಿಧಾನಸೌಧ ಸದ್ಬಳಕೆ ಅಗಬೇಕು. ಇಡೀ ವರ್ಷ ಕಡ್ಡದಲ್ಲಿ ಲವಲವಿಕೆಯಿಂದ ಚಟುವಟಿಕೆಗಳು ನಡೆಯಬೇಕು ಎಂಬ ಅಭಿಪ್ರಾಯಗಳಿವೆ. ಶಾಸಕರ ಭವನ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಗೇರಿ ಹೇಳಿದರು.


ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು