ಬೆಂಗಳೂರು: ಕೋವಿಡ್ ಮಹಾಮಾರಿಯ ಎರಡನೇ ಅಲೆ ಕಂಟಕದ ನಡುವೆಯೂ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೀದರ್ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಇಂದು ಒಟ್ಟು 30 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಬಹುತೇಕ ಮಧ್ಯಾಹ್ನದ ಒಳಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಕೋವಿಡ್ನಿಂದಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರೂ ಕೂಡ ಕೋವಿಡ್ಗೆ ಬಲಿಯಾಗಿದ್ದರು. ಹೀಗಾಗಿ ಆ ಕ್ಷೇತ್ರ ತೆರವಾಗಿತ್ತು. ಇನ್ನು, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಶಾಸಕ ಸ್ಥಾನಕ್ಕೆ ಅನರ್ಹಗೊಂಡಿದ್ದರು. ಹೀಗಾಗಿ, ಈ ಕ್ಷೇತ್ರ ಕೂಡ ತೆರವಾಗಿತ್ತು. ಈ ಮೂರು ಕ್ಷೇತ್ರಗಳಿಗೆ ಮಾರ್ಚ್ 17ರಂದು ಉಪಚುನಾವಣೆ ನಡೆದಿತ್ತು.
ಬೆಳಗಾವಿ ಲೋಕಸಭೆ ಕ್ಷೇತ್ರ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಮಧ್ಯೆ ನೇರ ಪೈಪೋಟಿ ಇದೆ. ಮೂಲತಃ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಈಚಿನ 20 ವರ್ಷಗಳಿಂದ ಬಿಜೆಪಿ ಬಲವಾಗಿ ಬೇರುಬಿಟ್ಟಿದೆ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬರುತ್ತಿದೆ. ಈ ಬಾರಿ ಸತೀಶ್ ಜಾರಕಿಹೊಳಿ ಅವರು ಸ್ಪರ್ಧಾ ಕಣದಲ್ಲಿರುವುದು ಕಾಂಗ್ರೆಸ್ಗೆ ತನ್ನ ಭದ್ರಕೋಟೆಯನ್ನು ಮರಳಿ ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸು ಕಾಣಿಸುತ್ತಿದೆ.
ಮಸ್ಕಿ ಉಪಚುನಾವಣೆ
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸ್ಪರ್ಧಾ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಸನಗೌಡ ಪಾಟೀಲ ತುರ್ವಿಹಾಳ ಅವರು ಇಲ್ಲಿ ಪ್ರಧಾನ ಸ್ಪರ್ಧಾಳುಗಳು. ಕಳೆದ ಬಾರಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದ ಇವರಿಬ್ಬರ ಮಧ್ಯೆ ರೋಚಕ ಕದನ ಇತ್ತು. ಈ ಬಾರಿಯೂ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ. ಇಲ್ಲಿ ಐವರು ಪಕ್ಷೇತರರೂ ಕಣದಲ್ಲಿದ್ದಾರೆ.
ಬಸವಕಲ್ಯಾಣ ಉಪಚುನಾವಣೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 12 ಅಭ್ಯರ್ಥಿಗಳಿದ್ದಾರೆ. ಇಲ್ಲಿಯ ಸ್ಪರ್ಧಾ ಕಣ ಬಹಳ ಕುತೂಹಲಕಾರಿಯಾಗಿದೆ. ಬಿಜೆಪಿಯಿಂದ ಶರಣು ಸಲಗರ ಹಾಗೂ ಕಾಂಗ್ರೆಸ್ನಿಂದ ಮಾಲಾ ಬಿ ಅವರು ಸ್ಪರ್ಧಿಸಿದ್ದಾರೆ. ಜೆಡಿಎಸ್ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಕಣದಲ್ಲಿದ್ದರೆ, ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದಾರೆ. ಇಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಜೆಡಿಎಸ್ನ ಮುಸ್ಲಿಮ್ ಅಭ್ಯರ್ಥಿಯು ಇಲ್ಲಿ ಕಾಂಗ್ರೆಸ್ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನ ಒಡೆಯುವ ಸಾಧ್ಯತೆ ಇದೆ. ಖೂಬಾ ಅವರು ಬಿಜೆಪಿ ಅಭ್ಯರ್ಥಿಗೆ ಕಂಟಕವಾಗುವ ಸಾಧ್ಯತೆ ಇದೆ. ಹೀಗಾಗಿ, ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಸಿಗುತ್ತದೆ ಎಂಬುದು ಕುತೂಹಲದ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ