ಬೆಳಗಾವಿ (ಫೆ,19)- ಬೆಳಗಾವಿ ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನೆ ಇನ್ನಿಲ್ಲದ ಕಿರಿಕ್ ಮಾಡುತ್ತಿದೆ. ಸಿಎಂ ಉದ್ಧವ್ ಠಾಕ್ರೆ ಟ್ವಿಟರ್, ಪುಸ್ತಕ ಬಿಡುಗಡೆ ಸೇರಿದಂತೆ ಸದಾ ಗಡಿಯ ವಿಚಾರ ಕುರಿತು ಇನ್ನಿಲ್ಲದ ಹೇಳಿಕೆ ನೀಡುವ ಮೂಲಕ ಕ್ಯಾತೆ ತೆಗೆದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ ಸಂಸದ ಈ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಿದೆ. ಲೋಕಸಭೆಯಲ್ಲಿ ಗಡಿ ವಿಚಾರ ಪ್ರಸ್ತಾಪ ಮಾಡಿದ ಶಿವಸೇನೆ ಸಂಸದ ಗಡಿ ವಿವಾದ ಇತ್ಯರ್ಥವಾಗುವರೆಗೆ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಸಂಸದ ಮೌನ ವಹಿಸಿದ್ದರು. ಇದನ್ನು ಬೆಳಗಾವಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಎಲ್ಲಾ ಸಂಸದರಿಗೆ ಪತ್ರ ಬರೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿದ್ದರ ಬಗ್ಗೆ ಶಿವಸೇನೆ ಮುಖಂಡರು ವಿರೋಧ ವ್ಯಕ್ತ ಪಡಿಸಿತ್ತಿದ್ದರು. ನಂತರ ಗಡಿಯ ಶಿನ್ನೊಳ್ಳಿ ವರೆಗೆ ಬಂದು ಧ್ವಜ ತೆರವುಗೊಳಿಸುತ್ತೇವೆ ಎಂದು ಪುಂಡಾಟ ಪ್ರದರ್ಶನ ಮಾಡಿದ್ದರು. ಶಿವಸೇನೆ ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಹಿಮ್ಮೆಟ್ಟಿಸಿ ಕಳುಹಿಸಿದ್ದರು. ಟ್ವಿಟರ್, ಪುಸ್ತಕ, ಸಾಕ್ಷಿಚಿತ್ರ ಬಿಡುಗಡೆ ಮೂಲಕ ಕಿರಿಕ್ ಮಾಡುತ್ತಿದ್ದ ಶಿವಸೇನೆಯನ್ನು ರಾಜ್ಯದ ನಾಯಕರು ಖಂಡಿಸಿದ್ದರು.
ಇತ್ತೀಚಿಗೆ ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ ಬಗ್ಗೆ ಮಾತನಾಡಿದ ಶಿವಸೇನೆ ಸಂಸದ ರಾಹುಲ್ ಶೇವಲೆ, ಅನೇಕ ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಇದೆ. ಬೆಳಗಾವಿ, ಬೀದರ್, ಕಾರವಾರ, ಕಲಬುರಗಿ ಭಾಗದಲ್ಲಿ ಮರಾಠಿ ಭಾಷಿಕ ಮಾತನಾಡುವ ಜನ ಇದ್ದಾರೆ. ಈ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಈ ಮೊದಲು ಈ ಪ್ರದೇಶ ಮುಂಬೈ ಕರ್ನಾಟಕ ಪ್ರ್ಯಾಂತದ ಭಾಗವಾಗಿತ್ತು. 1948ರಲ್ಲಿಯೇ ಬೆಳಗಾವಿ ನಗರಸಭೆಯಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ನಿರ್ಣಯವನ್ನು ಕೈಗೊಂಡಿದೆ. 1956ರಲ್ಲಿ ನಡೆದ ಭಾಷಾವಾರು ಪ್ರಾಂತ್ಯ ವಿಂಗಡಣೆಯಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದೆ. ಕೇಸ್ ಬೇರೆ ಬೇರೆ ಕಾರಣದಿಂದ ಮುಂದೆ ಹೋಗಿದ್ದು, ವಿವಾದ ಇತ್ಯರ್ಥ ಆಗುವವರೆಗೆ ಬೆಳಗಾವಿ ಸೇರಿ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಮಹಾರಾಷ್ಟ್ರ ಸಂಸದರು ಆಗ್ರಹಿಸಿದ್ದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಕುರುಬರಿಂದ ಪ್ರತಿಭಟನೆ; ಮೊಳಗಿತು ಸಿದ್ದು ಮಹಾರಾಜ್ ಕಿ ಜೈ ಘೋಷಣೆ
ಶಿವಸೇನೆ ಸಂಸದ ರಾಹುಲ್ ಶೇವಲೆ ಅವರಿಗೆ ತಕ್ಕ ಉತ್ತರ ನೀಡಬೇಕಿದ್ದ ರಾಜ್ಯದ 28 ಸಂಸದರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಇದು ಗಡಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರಾಜ್ಯದ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ. ಲೋಕಸಭೆಯಲ್ಲಿ ರಾಜ್ಯದ ಸಂಸದರ ಮೌನ ಆಘಾತವನ್ನು ಉಂಟು ಮಾಡಿದೆ. ಸಂಸದ ಮೌನದಿಂದ ದೇಶಕ್ಕೆ ಶಿವಸೇನೆ ವಾದ ನಿಜ ಎಂದು ತಪ್ಪು ಸಂದೇಶ ರವಾನೆ ಆಗುತ್ತದೆ. ಸಂಸದರು ಕನ್ನಡ ನಾಡಿಗೆ ದ್ರೋಹ ಎಸಗುವ ಕೆಲಸ ಎಂದಿಗೂ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಗಡಿ ವಿಚಾರದಲ್ಲಿ ಶಿವಸೇನೆಯ ಕಚೋದ್ಯತವನ್ನು ವಿವರಿಸಬೇಕು. 2004ರಿಂದ ಸುಪ್ರೀಂ ಕೋರ್ಟ್ ಮುಂದೆ ಇರೋ ಕೇಸ್ ತಿರಸ್ಕಾರಕ್ಕೆ ಪ್ರಧಾನಿ, ಕಾನೂನು ಸಚಿವರ ಮೂಲಕ ಒತ್ತಡ ಹೇರಬೇಕು ಎಂದು ಅಶೋಕ ಚಂದರಗಿ ಪತ್ರ ಮೂಲಕ ರಾಜ್ಯದ ಸಂಸದರಿಗೆ ಒತ್ತಾಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ