ಮಹಾರಾಷ್ಟ್ರದ ಸೊಲ್ಲಾಫುರ, ಸಾಂಗ್ಲಿಯನ್ನು ಕರ್ನಾಟಕಕ್ಕೆ ಸೇರಿಸುತ್ತೇವೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ

ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಅದರ ಬದಲಾಗಿ ಕನ್ನಡಿಗರು ಹೆಚ್ಚಾಗಿರುವ ಗಡಿ ಪ್ರದೇಶಗಳಾದ ಸೊಲ್ಲಾಪುರ, ಸಾಂಗ್ಲಿಯನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

ಗೃಹ ಸಚಿವ ಬಸವರಾಜ​​ ಬೊಮ್ಮಾಯಿ

  • Share this:
ಬೆಂಗಳೂರು (ಜ. 18): ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮರಾಠಿ ಭಾಷಿಗರು ಹೆಚ್ಚಾಗಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಹೋರಾಟ ಮಾಡಲಾಗುವುದು ಎಂದು ಕರೆ ನೀಡಿದ್ದ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕರ್ನಾಟಕದ ಸಿಎಂ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಸ್ಪಷ್ಟನೆ ನೀಡಿದ್ದು, ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಅದರ ಬದಲಾಗಿ ಮಹಾರಾಷ್ಟ್ರದ ಗಡಿಯಲ್ಲಿರುವ ಸೊಲ್ಲಾಪುರ, ಸಾಂಗ್ಲಿಯನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ರಾಜ್ಯದ ಒಂದಿಂಚೂ ಭೂಮಿಯನ್ನೂ ನಾವು ಬಿಡುವುದಿಲ್ಲ. ಮಹಾರಾಷ್ಟ್ರದ ಗಡಿಯಲ್ಲಿರುವ ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಹೀಗಾಗಿ, ಆ ಭಾಗಗಳನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದೇವೆ. ಆ ಬಗ್ಗೆ ನಾವು ಚಿಂತನೆ ಮಾಡುತ್ತಿದ್ದೇವೆ. ಬೆಳಗಾವಿ ಭಾಗದಲ್ಲಿರುವ ಮರಾಠಿಗರು ಶಾಂತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಅವರು ಕರ್ನಾಟಕಕ್ಕೆ ಸೇರಿದವರು ಎಂಬುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.

ಸಿಎಂ ಉದ್ಧವ್ ಠಾಕ್ರೆ ಇಲ್ಲಸಲ್ಲದ ಅನಾವಶ್ಯಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಈ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿದೆ. ಮಹಾಜನ್ ವರದಿಯೇ ಅಂತಿಮವಾಗಿದೆ. ಅದಕ್ಕೆ ಪಾರ್ಲಿಮೆಂಟ್ ಕೂಡ ಒಪ್ಪಿಗೆ ನೀಡಿದೆ. ಶಾಂತವಾಗಿರುವ ಬೆಳಗಾವಿ ಪರಿಸ್ಥಿತಿಯನ್ನು ಕದಡಲು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಉದ್ಧವ್ ಠಾಕ್ರೆ ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಅಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ನಮ್ಮದು ಎಂದ ಉದ್ಧವ್​ ಠಾಕ್ರೆ; ಉದ್ಧಟತನ ಬೇಡ ಎಂದು ಎಚ್ಚರಿಸಿದ ಸಿಎಂ ಯಡಿಯೂರಪ್ಪ

ಉದ್ಧವ್ ಠಾಕ್ರೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಒಬ್ಬ ಸಿಎಂ ಆಗಿದ್ದುಕೊಂಡು, ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡುವುದು ಬೇಡ. ಸಾಂಗ್ಲಿ, ಸೊಲ್ಲಾಪುರ ಭಾಗವನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ನಾವು ಮಹಾಜನ್ ವರದಿಯಲ್ಲೂ ಮಂಡಿಸಿದ್ದೇವೆ. ಈಗಲೂ ಅದಕ್ಕೆ ನಾವು ಬದ್ಧರಿದ್ದೇವೆ. ಗಡಿ, ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿರುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ನಿನ್ನೆ ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದರು.

ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಅದೇರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಮಾಡುತ್ತಿರುವುದು ನೋವಿನ ಸಂಗತಿ. ನೀವು ಓರ್ವ ಭಾರತೀಯನಾಗಿ ಯೋಚಿಸಿ, ಒಕ್ಕೂಟ ತತ್ವವನ್ನು ಗೌರವಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದರು .
Published by:Sushma Chakre
First published: