ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ, ಜಾರಕಿಹೊಳಿ ದೋಸ್ತಿ- ಸವದಿ ಜತೆಗೆ ಕುಸ್ತಿ..!

ಜಿಲ್ಲೆಯ ಮೂವರು ನಾಯಕರಾದ ಉಮೇಶ್​ ಕತ್ತಿ-ಲಕ್ಷ್ಮಣ ಸವದಿ- ರಮೇಶ್​ ಜಾರಕಿಹೊಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಬ್ಯಾಂಕ್​ನ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿಯಲು ನಾಯಕರು ತೀವ್ರ ಪೈಪೋಟಿ ನಡೆಸಿದ್ದಾರೆ. 

ಉಮೇಶ್​ ಕತ್ತಿ-ಲಕ್ಷ್ಮಣ ಸವದಿ-ರಮೇಶ್​ ಜಾರಕಿಹೊಳಿ

ಉಮೇಶ್​ ಕತ್ತಿ-ಲಕ್ಷ್ಮಣ ಸವದಿ-ರಮೇಶ್​ ಜಾರಕಿಹೊಳಿ

  • Share this:
ಬೆಳಗಾವಿ (ಫೆ.22):  ಕುಂದಾನಗರಿಯ ಬ್ಯಾಂಕ್​ಗಳ ಚುನಾವಣೆಗಳು ರಾಜ್ಯದ ದಿಕ್ಸೂಚಿ ಬದಲಾಯಿಸುವ ಎಲ್ಲಾ ಸೂಚನೆ ಹೊಂದಿದೆ ಎಂಬುದಕ್ಕೆ ಕಳೆದ ಬಾರಿಯ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸಾಕ್ಷಿಯಾಗಿದೆ. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್​ ಚುನಾವಣೆ ಎದುರಾಗಿದ್ದು,  ಮತ್ತೊಮ್ಮೆ ಸ್ವಪಕ್ಷೀಯರ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುವುದರಲ್ಲಿ ಅನುಮಾನ ಇಲ್ಲ ಎನ್ನಲಾಗುತ್ತಿದೆ. 

ಎಪ್ರಿಲ್​​ನಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ್​ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯ ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿಗೆ ಸಜ್ಜಾಗಿದ್ದಾರೆ. ಈ ಚುನಾವಣೆ ಜಿಲ್ಲಾ ರಾಜಕಾರಣದ ಧೃವೀಕರಣದ ಜೊತೆಗೆ ಮುಂದಿನ ರಾಜಕೀಯದ ದಿಕ್ಸೂಚಿಯಾಗುವ ಸಾಧ್ಯತೆ ಕೂಡ ಇದೆ. ಇದಕ್ಕೆ ಕಾರಣ ರಮೇಶ್​ ಜಾರಕಿಹೊಳಿ-ಉಮೇಶ್​ ಕತ್ತಿ- ಲಕ್ಷ್ಮಣ ಸವದಿ.

ಜಿಲ್ಲೆಯ ಮೂವರು ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಬ್ಯಾಂಕ್​ನ ಅಧ್ಯಕ್ಷ ಸ್ಥಾನದ  ಗದ್ದುಗೆ ಹಿಡಿಯಲು ನಾಯಕರು ತೀವ್ರ ಪೈಪೋಟಿ ನಡೆಸಿದ್ದಾರೆ.

ಸದ್ಯ ಡಿಸಿಸಿ ಬ್ಯಾಂಕ್​ ಅಧ್ಯಕ್ಷರಾಗಿ ಉಮೇಶ್​ ಕತ್ತಿ ಸಹೋದರ ಮಾಜಿ ಸಂಸದ ರಮೇಶ್​ ಕತ್ತಿ ಇದ್ದು, ಇವರೇ ತಮ್ಮ ಆಡಳಿತ ಮುಂದುವರೆಸಲಿ ಎಂಬುದು ಉಮೇಶ್​ ಕತ್ತಿ ಅಭಿಪ್ರಾಯ.   ತಮ್ಮ ರಾಜಕೀಯದಲ್ಲಿ ಪ್ರತಿಹೆಜ್ಜೆಯಲ್ಲಿ ಜೊತೆಯಾಗಿದ್ದು, ಸಚಿವ ಸ್ಥಾನದಿಂದ ವಂಚಿರಾಗಿರುವ ಮಹೇಶ್​ ಕುಮಠಳ್ಳಿಗೆ ಈ ಸ್ಥಾನ ಕೊಡಿಸಲು ನೂತನ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅಲ್ಲದೇ, ಈ ಕುರಿತು ಸಿಎಂ ಮೇಲೆ ಕೂಡ ಒತ್ತಡ ಹಾಕಿದ್ದಾರೆ.  ಇನ್ನು ನಡುವೆ ಈ ಚುನಾವಣೆ ಡಿಸಿಎಂ ಲಕ್ಷ್ಮಣ ಸವದಿಗೂ ಕೂಡ ಪ್ರತಿಷ್ಠೆ ಕಣವಾಗಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದಾರೆ.

ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಹ ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಚನ್ನರಾಜ್ ಹೊಟ್ಟಿಹೊಳಿ ಈಗಾಗಲೇ ಮೊದಗಾ ಪಿಕೆಪಿಎಸ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಬೆಳಗಾವಿ ತಾಲೂಕಿನ ಡಿಸಿಸಿ ಬ್ಯಾಂಕ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮಡಿವಂತರಂತೆ ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೊದಲ್ಲಿ ದುಡ್ಡು ಸುರಿಯುತ್ತಾರೆ: ಸಿಟಿ ರವಿ

ಇನ್ನು ಈ ಕುರಿತು ಮಾತನಾಡಿರುವ ರಮೇಶ್​ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬಣ ಹಾಗೂ ಕತ್ತಿ ಬಣ ಸೇರಿ ಚುನಾವಣೆ ನಡೆಸಲಿದೆ.  ಚುನಾವಣೆಯಲ್ಲಿ ಹಳೆಯ ಪದ್ಧತಿ ಮುಂದುವರೆಯಲಿದೆ. ಆದರೆ ಚುಣಾವಣೆ ಹೆಗೆಲ್ಲ ನಡೆಯಲಿದೆ ಎಂಬ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಶಾಸಕ ಉಮೇಶ ಕತ್ತಿ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಈ ಮೂಲಕ ಕತ್ತಿ ಜಾರಕಿಹೊಳಿ ಒಂದಾಗಿದ್ದು,  ಡಿಸಿಎಂ ಲಕ್ಷ್ಮಣ ಸವದಿ ಬಣ ಬೇರೆ ಆಗಿರುವುದು ಬಹುತೇಕ ಸ್ಪಷ್ಟವಾಗಿದೆ.  ಇನ್ನು ಚುನಾವಣೆಗೆ 2 ತಿಂಗಳು ಬಾಕಿ ಇದ್ದು ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ. ಜತೆಗೆ ಜಿಲ್ಲೆಯ ಶಾಸಕರು, ಮುಖಂಡರು ಯಾರ ಕಡೆ ಹೋಗಲಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀಳಲಿದೆ ಎನ್ನಲಾಗಿದೆ. 
First published: