ಕಾಂಗ್ರೆಸ್​ ಶಾಸಕರ ಸಭೆ; ಫಿರೋಜ್​ ಸೇಠ್​- ರಮೇಶ್​ ಜಾರಕಿಹೊಳಿ ಜಗಳದಲ್ಲಿ ಬಡವಾದ ಲಕ್ಷ್ಮೀ ಹೆಬ್ಬಾಳ್ಕರ್​

news18
Updated:September 1, 2018, 7:51 PM IST
ಕಾಂಗ್ರೆಸ್​ ಶಾಸಕರ ಸಭೆ; ಫಿರೋಜ್​ ಸೇಠ್​- ರಮೇಶ್​ ಜಾರಕಿಹೊಳಿ ಜಗಳದಲ್ಲಿ ಬಡವಾದ ಲಕ್ಷ್ಮೀ ಹೆಬ್ಬಾಳ್ಕರ್​
news18
Updated: September 1, 2018, 7:51 PM IST
ಕೃಷ್ಣ, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 1): ಬೆಳಗಾವಿಯಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿಇಂದು ಫಿರೋಜ್​ ಸೇಠ್ ಮತ್ತು ಸಚಿವ ರಮೇಶ್​ ಜಾರಕಿಹೊಳಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಭೆಯಲ್ಲಿ ಯಾವುದೇ ಹೆಸರು ಅಂತಿಮವಾಗಿಲ್ಲ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಬೆಳಗಾವಿ ಕಾಂಗ್ರೆಸ್​ ಶಾಸಕರ ಸಭೆ ನಡೆದಿದೆ. ಈ ಸಭೆಯಲ್ಲಿ ಲೋಕಸಭೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಪರ-ವಿರೋಧಗಳ ವಾದ ಅತಿರೇಕಕ್ಕೆ ಹೋಗಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್​ ನೀಡಬೇಕೆಂದು ಫಿರೋಜ್​ ಸೇಠ್​ ಪ್ರಸ್ತಾಪಿಸುತ್ತಿದ್ದಂತೆ ಸಚಿವ ರಮೇಶ್​ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನಗಾಗಲೀ, ನನ್ನ ತಮ್ಮನಿಗಾಗಲೀ ಟಿಕೆಟ್​ ಕೊಡಬೇಕೆಂದು ಬೇಡಿಕೆಯಿಟ್ಟ ರಮೇಶ್​ ಜಾರಕಿಹೊಳಿ, ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್​ ನೀಡಿದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಫಿರೋಜ್​ ಸೇಠ್​, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮೇಶ್​ ಜಾರಕಿಹೊಳಿ ಅವರು ಬೆಂಬಲ ನೀಡುವುದಿಲ್ಲ ಎಂದರೆ ಸರಿಯಾ? ಎಂದು ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಸಭೆ ಮುಗಿಯುವ ಮೊದಲೇ ರಮೇಶ್​ ಜಾರಕಿಹೊಳಿ ಅವರು ಸಭೆಯಿಂದ ಹೊರನಡೆದಿದ್ದಾರೆ.

ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಷಯದಲ್ಲಿ ರಾಜಕೀಯ ಮಾಡದಂತೆ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಎಚ್ಚರಿಕೆ ನೀಡಿದ್ದರು. ಈ ಮನಸ್ತಾಪ ಕಾಂಗ್ರೆಸ್​ ನಾಯಕರವರೆಗೂ ಬಂದು ಸಂಧಾನ ಮಾಡಿಸಲು ಮುಂದಾಗಿದ್ದರು. ಇಂದು ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಆ ವಿಷಯವೂ ಚರ್ಚೆಯಾಗಬೇಕಿತ್ತು. ಆದರೆ, ಫಿರೋಜ್​ ಸೇಠ್​ ಮತ್ತು ರಮೇಶ್​ ಜಾರಕಿಹೊಳಿ ಅವರ ಗಲಾಟೆಯಿಂದ ಪಿಎಲ್​ಡಿ ಚುನಾವಣೆ ವಿಷಯವನ್ನು ಕಾಂಗ್ರೆಸ್​ ನಾಯಕರು ಕೈಬಿಟ್ಟಿದ್ದಾರೆ.

ಪ್ರತ್ಯೇಕ ಮಾತುಕತೆ ನಡೆಸಿದ ನಾಯಕರು:

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ರಮೇಶ್​ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಮುಂದಾಗಿದ್ದಾರೆ. ಹೀಗಾಗಿ, ಬೆಳಗಾವಿ ಕಾಂಗ್ರೆಸ್​ ಶಾಸಕರ ಸಭೆ ಅಂತ್ಯವಾಗುತ್ತಿದ್ದಂತೆ ವೇಣುಗೋಪಾಲ್​ ಅವರು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೆಪಿಸಿಸಿ ಕಚೇರಿಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ವೇಣುಗೋಪಾಲ್​ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.

ಪಿಎಲ್​ಡಿ ಬ್ಯಾಂಕ್​ ಚುನಾವಣೆಯ ವಿಚಾರವಾಗಿ ಉಂಟಾದ ಗೊಂದಲಗಳು ಮತ್ತು ಭಿನ್ನಾಭಿಪ್ರಾಯಗಳ ಬಗ್ಗೆ ಕಾಂಗ್ರೆಸ್​ ನಾಯಕರು ಮಾಹಿತಿ ಪಡೆಯುತ್ತಿದ್ದಾರೆ. ಇದಾದ ನಂತರ ಕೆ.ಸಿ. ವೇಣುಗೋಪಾಲ್​ ಮತ್ತು ಸಿದ್ದರಾಮಯ್ಯ ಕೆಕೆ ಗೆಸ್ಟ್ ಹೌಸ್​​ನಲ್ಲಿ ರಮೇಶ್ ಜಾರಕಿಹೊಳಿ ಜೊತೆಯೂ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ