Belagavi Bypolls 2021: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬೆಳಗಾವಿ ಉಪ ಚುನಾವಣಾ ಕಣದಲ್ಲಿ ಠುಸ್ ಪಟಾಕಿ ಆಗಿದ್ದೇಕೆ?

Karnataka By-elections 2021: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಸತೀಶ್ ಜಾರಕಿಹೊಳಿ ಈ ಸಿಡಿ ಪ್ರಕರಣದಲ್ಲಿ ಸೈಲೆಂಟ್ ಆಗಿದ್ದಾರೆ. ಉಪ ಸಮರದ ಚುನಾವಣೆ ಕಣದಲ್ಲಿ ಸಿಡಿ ಪ್ರಕರಣದ ಬಗ್ಗೆ ಯಾರೂ ಮಾತನಾಡದಂತೆ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ.

ರಮೇಶ್ ಜಾರಕಿಹೊಳಿ.

  • Share this:
ಬೆಳಗಾವಿ (ಏ. 4): ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಪ್ರಕರಣ ಹೊರಗೆ ಬರುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿಗೆ ಮುಜುಗರ ಉಂಟು ಮಾಡಬೇಕು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿತ್ತು. ಸಿಡಿ ಪ್ರಕರಣವನ್ನೆ ಉಪ ಚುನಾವಣೆಯಲ್ಲಿ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲಿ ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಆದರೆ ಈಗ ಕಾಂಗ್ರೆಸ್ ತಂತ್ರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೆಲಸಕ್ಕೆ ಬರುತ್ತಿಲ್ಲ. ಆರಂಭದಲ್ಲೇ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಇಡೀ ಸಿಡಿ ಪ್ರಕರಣವೇ ಈಗ ಠುಸ್ ಪಟಾಕಿ ಆಗಿದೆ.

ಹೌದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬೆಳಗಾವಿ ಬೈ ಎಲೆಕ್ಷನ್  ಮೇಲೆ  ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಅನ್ನೋದು ಈಗ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಸಿಡಿ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅಬ್ಬರಿಸಿ ಬೊಬ್ಬಿರಿದಿದ್ದರು. ಇದೇ ಪ್ರಕರಣವನ್ನ ಪ್ರಮುಖ ಅಸ್ತವಾಗಿಸಿಕೊಂಡು ಬೆಳಗಾವಿ ಲೋಕಸಭಾ ಚುನಾವಣೆ ಗೆಲ್ಲುವ ರಣತಂತ್ರವನ್ನು ಕಾಂಗ್ರೆಸ್ ಹೆಣೆದಿತ್ತು. ಆದರೆ ಬೆಳಗಾವಿ ಪಾಲಿಗೆ ಕಾಂಗ್ರೆಸ್​ನ ಅಸ್ತ್ರವೇ ಕೆಲಸಕ್ಕೆ ಬಾರದಂತಾಗಿದೆ ಅದಕ್ಕೆ ಕಾರಣ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಸತೀಶ್ ಜಾರಕಿಹೊಳಿ ಈ ಸಿಡಿ ಪ್ರಕರಣದಲ್ಲಿ ಸೈಲೆಂಟ್ ಆಗಿದ್ದಾರೆ. ಉಪ ಸಮರದ ಚುನಾವಣೆ ಕಣದಲ್ಲಿ ಸಿಡಿ ಪ್ರಕರಣದ ಬಗ್ಗೆ ಯಾರೂ ಮಾತನಾಡದಂತೆ ಹೇಳಿದ್ದಾರೆ. ಯಾರೂ ಸಹ ಸಿಡಿ ವಿಚಾರವಾಗಿ ತುಟಿ ಪಿಟಿಕ್ ಎನ್ನುತ್ತಿಲ್ಲ. ಸ್ವತಃ ಸತೀಶ್ ಜಾರಕಿಹೊಳಿಯವರೇ ಈ ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಕಾಂಗ್ರೆಸ್​ಗೆ ಪ್ಲಸ್ಸೂ ಆಗುವುದಿಲ್ಲ, ಮೈನಸ್ಸೂ ಆಗುವುದಿಲ್ಲ. ಹಾಗೇ ಬಿಜೆಪಿಗೂ ಸಹ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯತ್ನಾಳ ನಾಲಾಯಕ್; ಸರ್ಕಾರ ಟೀಕಿಸಬೇಕೆಂದರೆ ರಾಜೀನಾಮೆ ಕೊಟ್ಟು ಹೋಗಲಿ: ಸಚಿವ ಮುರುಗೇಶ್ ನಿರಾಣಿ

ಸತೀಶ್ ಜಾರಕಿಹೊಳಿಯವರ ಈ ಸ್ಟೇಟ್ ಮೆಂಟ್ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ. ಸಿಡಿ ಪ್ರಕರಣದಲ್ಲಿ ಸ್ವತಃ ಸಹೋದರನೇ ಕಾಣಿಸಿಕೊಂಡಿರುವುದರಿಂದ ಅದನ್ನ ಬೈ ಎಲೆಕ್ಷನ್ ಅಸ್ತ್ರವಾಗಿ ಬಳಸಿಕೊಳ್ಳೋಕೆ  ಸತೀಶ್ ಅವರಿಗೆ ಮನಸಿಲ್ಲ ಅಂತ ಅವರ ಆಪ್ತ ವಲಯದ ಮೂಲಗಳು ತಿಳಿಸಿವೆ. ಇನ್ನು ಸಿಡಿಯಲ್ಲಿ ಕಾಣಿಸಿಕೊಂಡಿರೋದು ಸ್ವತಃ ಬಿಜೆಪಿಯ ಶಾಸಕ ಆಗಿರುವುದರಿಂದ ಆಡಳಿತ ಪಕ್ಷ ಮೊದಲೇ ಅದರ ಬಗ್ಗೆ ಪ್ರಸ್ತಾಪವನ್ನೂ ಮಾಡುವುದಿಲ್ಲ. ಹೀಗಾಗಿ ಸಿಡಿ ಬಾಂಬ್ ಬೆಳಗಾವಿ ಬೈ ಎಲೆಕ್ಷನ್ ಅಖಾಡದಲ್ಲಿ ಒಂದು ಠುಸ್ ಪಟಾಕಿ ಅಂತ ರಾಜಕೀಯ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಇನ್ನು ಸತೀಶ್ ಜಾರಕಿಹೋಳಿ ನಾಪ ಪತ್ರ ಸಲ್ಲಿಕೆ ವೇಳೆ ಸ್ವತಃ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣಾ ರಣತಂತ್ರದ ಕುರಿತು ಮೀಟಿಂಗ್ ಸಹ ನಡೆದಿತ್ತು. ಈ ಸಂದರ್ಭದಲ್ಲಿ ಸಿಡಿ ವಿಚಾರ ಕೆದಕಿದ್ದ ಡಿಕೆಶಿ ಪ್ರಚಾರದ ವೇಳೆ ಇದನ್ನ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅಭ್ಯರ್ಥಿ ಸತೀಶ್ ಜಾರಕಿಹೋಳಿ ಯಾವುದೆ ಕಾರಣಕ್ಕೂ ಸಿಡಿ ಪ್ರಕರಣ ಎತ್ತಬೇಡಿ. ಇದರಿಂದ ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ನಮ್ಮ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಇಡೀ ಜಿಲ್ಲೆಯಲ್ಲಿ ಇದ್ದಾರೆ. ನಮ್ಮ ಕುಟುಂಬದ ವಿಚಾರದಲ್ಲಿ ನಾವೆ ಮಾತನಾಡಿದರೆ ನಮಗೆ ಅದು ಮೈನಸ್ ಆಗಲಿದೆ. ಹಾಗಾಗಿ, ಬೆಳಗಾವಿ ಲೋಕಸಭಾ ಉಪ ಸಮರದಲ್ಲಿ ಯಾವುದೇ ಕಾರಣಕ್ಕೂ ಯಾವ ನಾಯಕರು ಈ ಸಿಡಿ ವಿಚಾರವನ್ನ ಪ್ರಸ್ತಾಪ ಮಾಡಬಾರದು ಎಂದು ಖಡಕ್ ಆಗಿ ಹೇಳಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕಾಗಿ ಯಾರೂ ಸಹ ಸಿಡಿ ವಿಚಾರವಾಗಿ ಬೆಳಗಾವಿಯಲ್ಲಿ ತುಟಿ ಪಿಟಿಕ್ ಎಂದಿಲ್ಲ. ಒಟ್ಟಿನಲ್ಲಿ ರಾಜಕೀಯ ನಾಯಕರು ಎಲ್ಲವನ್ನೂ ಬಿಟ್ಟು ಈಗ ಅಭಿವೃದ್ದಿ ಅಜೆಂಡಾ ಮುಂದೆ ಇಟ್ಟುಕೊಂಡು ಜನರ ಬಳಿ ಹೋಗ್ತಿದ್ದು ಜನ ಯಾರಿಗೆ ವಿಜಯದ ಮಾಲೆ ಹಾಕ್ತಾರೆ ಎಂದು ಕಾದು ನೋಡಬೇಕಿದೆ.
Published by:Sushma Chakre
First published: