ಬೆಳಗಾವಿ: ಜಿಲ್ಲೆಯಲ್ಲಿ ಕೇಸರಿ ಕಹಳೆ ಮೊಳಗಿಸೋದಕ್ಕೆ ಕಮಲ ನಾಯಕರು (BJP Leaders) ರಣತಂತ್ರ ರೂಪಿಸಿದಂತೆ ಕಾಣಿಸುತ್ತಿದೆ. ಮಾಜಿ ಸಿಎಂ, ಹಾಲಿ ಸಿಎಂಗಳೆಲ್ಲಾ ಬೆಳಗಾವಿಯಲ್ಲೇ (Belagavi) ಬೀಡು ಬಿಟ್ಟಿದ್ದಾರೆ. ಅಥಣಿಯಲ್ಲಿ ಬಿಎಸ್ವೈ ಪ್ರಚಾರ ಮಾಡುತ್ತಿದ್ದರೆ, ಚಿಕ್ಕೋಡಿ (Chikkodi) ಲೋಕಸಭಾ ವ್ಯಾಪ್ತಿಯಲ್ಲಿ ಸಿಎಂ ಬೊಮ್ಮಾಯಿ ಅಬ್ಬರಿಸ್ತಿದ್ದಾರೆ. ಈ ವೇಳೆ ಮಾತನಾಡಿದ ಬೊಮ್ಮಾಯಿ, ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಯಭಾಗದಲ್ಲಿ (Raibaga) ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) , ಈ ಬಾರಿ ದುರ್ಯೋಧನ ಐಹೊಳೆ 30 ಸಾವಿರ ಮತಗಳಿಂದ ಗೆಲ್ಲಿಸುವ ನಂಬಿಕೆ ಇದೆ. ಹೆಸರಿಗೆ ಮಾತ್ರ ಇವರು ದುರ್ಯೋಧನ ಮಾಡುವ ಕೆಲಸ ಎಲ್ಲವೂ ಭೀಮನ ಕೆಲಸ. ಈ ಕ್ಷೇತ್ರದಲ್ಲಿ ಸರ್ವಿಸ್ ಮಾಡಿ ನೇರವಾಗಿ ಎಲೆಕ್ಷನ್ ಗೆ ಬರುತ್ತಾರೆ.
ಅಧಿಕಾರಿಗಳು ಹಣದ ಬಲದಿಂದ ಎಲೆಕ್ಷನ್ ಮಾಡಬಹುದು ಅಂತ ಬರುತ್ತಾರೆ. ಅಧಿಕಾರಿಗಳಿಗೆ ನಮಸ್ಕಾರ ಮಾಡಿಸಿಕೊಂಡು ರೂಢಿ ಇರುತ್ತೆ. ಇವರಿಗೆ ನಮಸ್ಕಾರ ಮಾಡುವ ರೂಢಿ ಇರೋದಿಲ್ಲ. ಅಂತವರನ್ನ ನೀವು ಆರಿಸಿದರೆ ಅವರಿಗೆ ನೀವು ನಮಸ್ಕಾರ ಮಾಡುತ್ತಲೇ ಇರಬೇಕಾಗುತ್ತೆ ಎಂದು ಮಾಜಿ ಐಎಎಸ್ ಅಧಿಕಾರಿ ಶಂಭೂ ಕಲ್ಲೋಳಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಇನ್ನು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಂಭೂ ಕಲ್ಲೋಳಕರ್ ಸ್ಪರ್ಧೆ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಲ್ಲಾ ಜನರ ಸುರಕ್ಷತೆಗೆ ಬಿಜೆಪಿ ಕೆಲಸ ಮಾಡಿದೆ. ನೀವು ಇಷ್ಟು ಜನ ಬಂದಿದ್ದೀರಿ, ಯಾರಾದರೂ ಮಾಸ್ಕ್ ಹಾಕೊಂಡು ಬಂದಿದ್ದಿರಾ? ಈಗಲೂ ಅಮೆರಿಕಾ, ಇಂಗ್ಲೆಂಡ್ನಲ್ಲಿ ಇನ್ನೂ ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. 130 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡಿಸಲಾಗಿದೆ. ರೈತರಿಗಾಗಿ ರೈತ ವಿಧ್ಯಾನಿಧಿ ಯೋಜನೆ, ಪ್ರತಿಯೊಬ್ಬ ರೈತನಿಗೆ ಇನ್ಸೂರೆನ್ಸ್ ಮಾಡಲಾಗಿದೆ. ಅಕಾಲಿಕವಾಗಿ ರೈತ ತೀರಿ ಹೋದರೂ ಸಹ ಅವನ ಕುಟುಂಬಕ್ಕೆ 2 ಲಕ್ಷ ಸಿಗುವಂತೆ ಮಾಡಿದ್ದೇವೆ.
ರಾಜ್ಯ ಕಟ್ಟಲು ಶ್ರೀಮಂತವರ್ಗದಿಂದ ಸಾದ್ಯವಿಲ್ಲ ಬಡವರಿಂದ ಕೂಲಿಕಾರಿಂದ ರಾಜ್ಯ ಕಟ್ಟಲು ಸಾಧ್ಯ, ಹಿಂದಿನ ಸರ್ಕಾರದಲ್ಲಿ ದುಡ್ಡೆ ದೊಡ್ಡಪ್ಪ ಅಂತ ಇತ್ತು. ಎಲ್ಲದರಲ್ಲೂ ಕಮಿಷನ್ ತೆಗೆದುಕೊಳ್ಳುವ ಕೆಲಸ ಆಗುತ್ತಿತ್ತು. ರಾಜೀವ್ ಗಾಂಧಿ ಹೇಳಿದ್ದರೂ 100 ರೂಪಾಯಿ ಬಿಡುಗಡೆ ಮಾಡಿದರೆ, ಹಳ್ಳಿಗೆ ಹೋಗಿ 15 ರೂಪಾಯಿ ಸಿಗುತ್ತೆ ಅಂತ ಹೇಳಿದರು. ಹೀಗಾಗಿ ಕಾಂಗ್ರೆಸ್ 86 ಪರ್ಸಂಟ್ ಸರ್ಕಾರ.
ಕಳೆದ 30 ವರ್ಷಗಳಿಂದ ದಿನ ದಲಿತರು ಹೋರಾಟ ಮಾಡಿದ್ದರು. ಅವರಿಗೆ ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿದ್ದರು. 30 ವರ್ಷದ ಬೇಡಿಕೆ ಎಸ್ಟಿ ಎಸ್ಸಿಗೆ ಮೀಸಲಾತಿ ನೀಡಿದ್ದೇವೆ. ನಾನು ಮಾಡುವಾಗ ಜೇನುಗೂಡಿಗೆ ಕೈ ಹಾಕಬೇಡಿ ಅಂತ ಹೇಳಿದರು. ನಾನು ಗಂಡು ಮೆಟ್ಟಿದ ನಾಡಿನಿಂದ ಬಂದಿದ್ದೇನೆ, ನಾನು ಒಂದು ಕೈ ನೋಡಿಯೇ ಬಿಡುತ್ತೇನೆ ಅಂತ ಹೇಳಿದೆ. ಎಲ್ಲರನ್ನೂ ಸರಿಸಮಾನವಾಗಿ ನೋಡಿಕೊಳ್ಳುವ ಕೆಲಸ ಮಾಡಿದ್ದೇನೆ. ಇದರಿಂದ ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಒಂದಿಬ್ಬರು ಹೋದರೆ ಲಿಂಗಾಯತ ಸಮುದಾಯ ನಮ್ಮೊಂದಿಗೆ ಬರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ